ಅತ್ಯಾಚಾರಿಗಳ ಗಲ್ಲಿಗೇರಿಸಿ
ಕ.ಪ್ರ. ವಾರ್ತೆ ರಾಯಚೂರು ಜು. 18
ಬೆಂಗಳೂರಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಗಲ್ಲಿಗೇರಿಸಬೇಕು. ಆರೋಪಿಯ ಸಹಚರರನ್ನು ಜೀವಾವಧಿ ಶಿಕ್ಷೆಗೊಳಪಡಿಸಬೇಕು. ಅತ್ಯಾಚಾರ ಪ್ರಕರಣ ದಾಖಲಿಸಲು ಉದಾಸೀನ ಮೆರೆದ ಪಿಎಸ್ಸೈಯನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿನಿಯರು ಹಾಗೂ ಎಬಿವಿಪಿ ಕಾರ್ಯಕರ್ತರು, ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿ ವಿದ್ಯಾರ್ಥಿನಿಯ ಮೇಲೆ ಆಕೆಯ ಗೆಳೆಯನ ಎದುರೇ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಸಮಾಜ ತಲೆ ತಗ್ಗಿಸುವಂತಹದ್ದು: ಲೈಂಗಿಕ ದೌರ್ಜನ್ಯಕ್ಕೆ ಕಾರಣರಾಗಿರುವ ಆರೋಪಿ ನಾಸೀರ್ ಹೈದರ್ನ ಸಹಚರರಿಗೆ ಜೀವಾವಧಿ ಶಿಕ್ಷೆಯಾಗಬೇಕು. ಬೆಂಗಳೂರಿನಲ್ಲಿ ಶಾಲೆಯೊಂದರಲ್ಲಿ ಶಾಲೆಯ ಬಾಲಕಿ ಮೇಲೆ ಸಿಬ್ಬಂದಿಯೇ ಅತ್ಯಾಚಾರ ಎಸಗಿದ ಘಟನೆ ಮಾನವ ಜನಾಂಗ ತಲೆ ತಗ್ಗಿಸುವಂಥ ಕೃತ್ಯವಾಗಿದೆ ಎಂದು ದೂರಿದರು.
ಬೈಂದೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ ಘಟನೆ ನಡೆದಿದೆ. ಹೀಗೆ ರಾಜ್ಯದ ಬಹುತೇಕ ಕಡೆ ಅತ್ಯಾಚಾರ, ಮಹಿಳಾ ದೌರ್ಜನ್ಯದಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾದ ಪ್ರಕರಣಗಳನ್ನು ಖಂಡಿಸಿ ಬೆಂಗಳೂರಿನಲ್ಲಿ ಎಬಿವಿಪಿ ಕಾರ್ಯಕರ್ತರು ಗೃಹ ಸಚಿವ ಜಾರ್ಜ್ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಪೊಲೀಸರ ಮೂಲಕ ಹಲ್ಲೆ ಮಾಡಿಸಿರುವುದನ್ನು ಹೋರಾಟಗಾರರು ಖಂಡಿಸಿದರು.
ಜಾರ್ಜ್ ವಿರುದ್ಧ ಆಕ್ರೋಶ: ರಾಜ್ಯದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಮಾಜದ ಬಗ್ಗೆ ಕಾಳಜಿಯಿಲ್ಲ. ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕುವ ಕಾರ್ಯ ಸರ್ಕಾರ ಮಾಡುತ್ತಿಲ್ಲ. ಬದಲಿಗೆ ಅತ್ಯಾಚಾರ ಪ್ರಕರಣ ಖಂಡಿಸಿ ಹೋರಾಡುವವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅತ್ಯಾಚಾರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವು ದೌರ್ಜನ್ಯ ಖಂಡಿಸಿ ಹೋರಾಟಕ್ಕಿಳಿಯುವವರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಬೆಂಗಳೂರಿನಲ್ಲಿ ಎಬಿವಿಪಿ ಕಾರ್ಯಕರ್ತರನ್ನು ಇದೇ ಕಾರಣಕ್ಕೆ ಬಂಧಿಸಲಾಗಿದೆ. ಅತ್ಯಾಚಾರ ಖಂಡಿಸಿ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತರನ್ನು ಬಂಧಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಪೊಲೀಸರ ದಬ್ಬಾಳಿಕೆ: ಎಬಿವಿಪಿ ಕಾರ್ಯಕರ್ತರೊಂದಿಗೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅತ್ಯಾಚಾರಿಗಳ ಮೇಲೆ ಪ್ರದರ್ಶಿಸಬೇಕಿದ್ದ ಅಟ್ಟಹಾಸವನ್ನು ಎಬಿವಿಪಿ ಕಾರ್ಯಕರ್ತರ ಮೇಲೆ ಪ್ರದರ್ಶಿಸಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆಂದು ದೂರಿದರು.
ರಾಜ್ಯ ಸರ್ಕಾರ ಕೂಡಲೇ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರ ರಕ್ಷಣೆಗೆ ನಿಲ್ಲುವ ಪೊಲೀಸ್ ಅಧಿಕಾರಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಭೀಮಾಶಂಕರ್ ಪಾಟೀಲ್, ವಿಜಯ ಕುಮಾರ್, ಅನಿಲ್ ಸೇರಿದಂತೆ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

