ಪಂಚಾಕ್ಷರಿ ಮಂತ್ರ ಜಪದಿಂದ ಪಾಪ ದೂರ
ರಾಯಚೂರು: ಪಂಚಾಕ್ಷರ ಮಹಾಮಂತ್ರ ಜಪದಿಂದ ಸರ್ವಪಾತಕಗಳು ಪರಿಹಾರವಾಗಿ ಸದ್ಗತಿ ಲಭಿಸುವುದು ಎಂದು ಕಾಶೀ ಜ್ಞಾನಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ಉತ್ತರಪ್ರದೇಶದ ವಾರಾಣಸಿಯಲ್ಲಿ ಸೋಮವಾರ ಸಂಜೆ ಕಾಶೀ ಜ್ಞಾನಪೀಠದ ಜಂಗಮವಾಡಿ ಮಠದಲ್ಲಿ ತಮ್ಮ ಚಾತುರ್ಮಾಸ ವೃತ ಹಾಗೂ ಲೋಕ ಕಲ್ಯಾಣಕ್ಕಾಗಿ 12 ಕೋಟಿ ಜಪಯಜ್ಞ ಕಾರ್ಯಕ್ರಮ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಂತ್ರದ ಅರ್ಥ ಚಿಂತನೆ ಅವಶ್ಯ: ದುಷ್ಕರ್ಮಿಗಳ ಫಲವಾಗಿ ಮಾನವ ಇಂದು ಪತೀತನಾಗುತ್ತಿದ್ದಾನೆ. ಅವುಗಳಿಗೆ ಪಾತಕಂಗಳು ಎಂದೂ ಕರೆಯುತ್ತಾರೆ. ಜೀವಿಗಳು ತಿಳಿದೋ ತಿಳಿಯದೆಯೋ ಒಂದಿಲ್ಲೊಂದು ತಪ್ಪೆಸಗುತ್ತಿರುತ್ತಾರೆ. ಇಂಥ ತಪ್ಪುಗಳು ಹೆಚ್ಚುತ್ತಾ ಹೋದಲ್ಲಿ ಮನುಷ್ಯ ಜನ್ಮದಲ್ಲಿದ್ದ ಜೀವಿಯು ಹೀನ ಪ್ರಾಣಿ ಜನ್ಮಗಳಲ್ಲಿ ಜನಿಸಬೇಕಾಗುತ್ತದೆ. ಇಂತಹ ದುರ್ಗತಿ ತಪ್ಪಿಸಿಕೊಳ್ಳಲು ಜಪವೇ ಸುಲಭ ಮತ್ತು ಶ್ರೇಷ್ಠವಾದ ಸಾಧನ ಎಂದು ತಿಳಿ ಹೇಳಿದರು.
ಗುರುವಿನಿಂದ ಪ್ರಾಪ್ತವಾದ ಮಂತ್ರದ ಅರ್ಥ ಚಿಂತನೆ ಮಾಡುವುದು ಅವಶ್ಯ. ಆ ಮಂತ್ರದ ಆವೃತ್ತಿಯೇ ಜಪಾಭ್ಯಾಸ, ಇಂತಹ ಜಪಾಭ್ಯಾಸವನ್ನು ವೈಯಕ್ತಿಕವಾಗಿ ಇಲ್ಲವೇ ಸಾಮೂಹಿಕವಾಗಿಯೂ ಮಾಡಬಹುದು. ಸಾಮೂಹಿಕ ಜಪದಿಂದ ಪರಿಸರದಲ್ಲಿ ಪವಿತ್ರ ವಾತಾವರಣ ನಿರ್ಮಾಣವಾಗಿ ಸಮಷ್ಠಿ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಜಪದಿಂದ ಇಷ್ಟಾರ್ಥ ಸಿದ್ಧಿ: 'ಓಂ ನಮಃ ಶಿವಾಯ' ಈ ಪ್ರಣವ ಪಂಚಾಕ್ಷರ ಮಹಾಮಂತ್ರದ ಗರ್ಭದಲ್ಲಿರುವ ಶಿವ ಶಬ್ದವು ನಾಲ್ಕು ವೇದಗಳಿಗೆ ಸಮಾನವಾಗಿದೆ. ಅಂತೆಯೇ ಈ ಮಂತ್ರವು ಸಪ್ತಕೋಟಿ ಮಂತ್ರಗಳಲ್ಲಿ ಶ್ರೇಷ್ಠ ಎನಿಸಿದೆ. ಈ ಮಂತ್ರ ಜಪದಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಈ ಮಂತ್ರವನ್ನು ಮನನ ಮಾಡುತ್ತ ಜಪಿಸಿದರೆ ಶಿವ ಜೀವೈಕ್ಯಜ್ಞಾನ ಉಂಟಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಆಶೀರ್ವಚನ ನೀಡಿ ಅನುಷ್ಠಾನಕ್ಕೆ ದೇಶ, ಕಾಲ ಪರಿಶುದ್ಧಿ ಅವಶ್ಯ. ಅದು ಇಂದು ಸಹಜವಾಗಿ ಸರ್ವರಿಗೂ ಲಭ್ಯವಾಗಿದೆ. ಕಾಶಿ ಕ್ಷೇತ್ರವು ಸರ್ವ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿರುವುದರಿಂದ ಇಲ್ಲಿ ನಡೆಯುವ 12 ಕೋಟಿ ಮಹಾಮಂತ್ರ ಜಪಯಜ್ಞ ದೇಶ-ಕಾಲಗಳೆರಡೂ ಶುದ್ಧವಾಗಿ ಆತ್ಮಶುದ್ಧಿ ಜತೆಗೆ ಲೋಕ ಕಲ್ಯಾಣವಾಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಅಬ್ಬೆ ತುಮಕೂರಿನ ಶ್ರೀಗಳು, ಸಾಮೂಹಿಕ ಜಪಯಜ್ಞದಿಂದ ಸರ್ವರ ಮನೋವ್ರತ ಈಡೇರಲಿವೆ ಎಂದು ಹೇಳಿದರು. ಸಮಾರಂಭದಲ್ಲಿ ಕೊಕಟನೂರಿನ ಗುರುಶಾಂತ ಶಿವಾಚಾರ್ಯರು, ಆಲೂರು ಹಿರೇಮಠದ ಡಾ. ಸಿದ್ದಲಿಂಗ ಸ್ವಾಮೀಜಿ, ದಾವಣಗೆರೆಯ ನಿರಂಜನ ಸ್ವಾಮೀಜಿ, ಆಲೂರು ಸಾಬರಖೇಡದ ಸಿದ್ದಲಿಂಗ ಶಿವಾಚಾರ್ಯರು, ನಾಗಭೂಷಣ ಶಿವಾಚಾರ್ಯರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆಂಧ್ರಪ್ರದೇಶದ ಅಧ್ಯಕ್ಷ ನೇತಿ ಮಹೇಶ, ಮಹಾರಾಷ್ಟ್ರದ ವಿಶ್ವನಾಥ ಚಾಕೋತೆ, ಕೇರಳ ಕೆ.ವಿ. ಶಿವನ್, ಆಂಧ್ರಪ್ರದೇಶ ವೀರಶೈವ ಧರ್ಮ ಪ್ರಚಾರ ಸಂಘದ ಅಧ್ಯಕ್ಷ ನೇತಿ ಜ್ಞಾನೇಶ್ವರ್, ಜಗದೇವ್ ಹಿರೇಮಠ, ಆಂಧ್ರಪ್ರದೇಶ ಮಹಿಳಾ ಘಟಕ ಅಧ್ಯಕ್ಷೆ ರುದ್ರಮಾದೇವಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಸೇರಿ ಅನೇಕರಿದ್ದರು.
ಧರ್ಮರತ್ನ ಪ್ರಶಸ್ತಿ: ಅಬ್ಬೆ ತುಮಕೂರಿನ ಡಾ. ಗಂಗಾಧರ ಶಿವಾಚಾರ್ಯರಿಗೆ ಧರ್ಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜದ ವಿವಿಧ ರಂಗಗಳ ಗಣ್ಯರಿಗೆ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 5 ಸಾವಿರಕ್ಕೂ ಹೆಚ್ಚಿನ ಭಕ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

