ಶಾಸಕ ಸಂಭಾಜಿ ಪ್ರತಿಕೃತಿ ದಹನ
ಲಿಂಗಸ್ಗೂರು: ರಾಜ್ಯದ ಶಾಂತಿಗೆ ಭಂಗ ತರಲು ಯತ್ನಿಸುತ್ತಿರುವ ಎಂಇಎಸ್ ಸಂಘಟನೆ ನೀಷೇಧಿಸಬೇಕು. ಶಾಸಕ ಸಂಭಾಜಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಬಳಿ ಅವರ ಪ್ರತಿಕೃತಿ ದಹಿಸುತ್ತಿದ್ದಂತೆ ಪೊಲೀಸರು ಕರವೇ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಿದರು.
ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗಿನಿಂದ ಮಹಾರಾಷ್ಟ್ರದ ಕೆಲ ರಾಜಕೀಯ ನಾಯಕರು ನಾಡಿನ ಹಿತ ಬಲಿ ಕೊಡಲು ಹೊರಟಿರುವುದು ದುರಂತ. ಇದನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲವಾಗಿದೆ. ಕನ್ನಡಿಗರು ಪ್ರತಿಭಟನೆ ಹಾಗೂ ಘೋಷಣೆ ಕೂಗಲು ಬಿಡದ ಪೊಲೀಸ್ ವ್ಯವಸ್ಥೆ ಗಲಭೆ, ಹಲ್ಲೆ ಮಾಡಲು ಭದ್ರತೆ ಸಡಿಲಗೊಳಿಸುತ್ತಿರುವುದು ಖಂಡನೀಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರ ಬಂಧನಕ್ಕೆ ಖಂಡನೆ: ರಾಜ್ಯದ ಶಾಂತಿಗೆ ಭಂಗ ತರಲು ಯತ್ನಿಸುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ನಾಡಿನ ಪರವಾಗಿ ಹೋರಾಟಕ್ಕಿಳಿದ ಕನ್ನಡಪರ ಸಂಘಟಕರಿಗೆ ಪೊಲೀಸ್ ಇಲಾಖೆ ಬಂಧಿಸುತ್ತಿರುವುದು ಖಂಡನೀಯ. ಹೋರಾಟ ಹತ್ತಿಕ್ಕುವ ಹಾಗೂ ಸರ್ವಾಧಿಕಾರಿ ಧೋರಣೆ ಕೈಬಿಟ್ಟು ಶಾಂತಿ ಸುವ್ಯವಸ್ಥೆಗೆ ನಾಂದಿ ಹಾಡಲು ಸೂಚಿಸಬೇಕು. ಮಹಾರಾಷ್ಟ್ರದ ಎಂಇಎಸ್ ಪುಂಡರಿಗೆ ಬೆಂಗಾವಲಾಗಿ ನಿಂತಿರುವ ಶಾಸಕ ಸಂಭಾಜಿರಾವ್, ಇತರ ಪುಂಡ ಮುಖಂಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕು. ಗಲಭೆಗೆ ಇತಿಶ್ರೀ ಹಾಡಲು ಗಡಿರಕ್ಷಣಾ ಪಡೆ ಹಾಗೂ ಗಡಿ ವಿವಾದಕ್ಕೆ ತೆರೆ ಎಳೆಯಲು ಸಮಿತಿ ರಚಿಸಬೇಕು.
ಬಂಧಿಸಿ ಶಿಕ್ಷೆಗೊಳಪಡಿಸಿ: ಬೆಳಗಾವಿ ಜಿಲ್ಲೆಯ ಮುಗ್ಧ ಮರಾಠಿಗರಿಗೆ ಇಲ್ಲದ ಆಮಿಷ ತೋರಿಸಿ ರಾಜದ್ರೋಹ ಕುಕೃತ್ಯಕ್ಕೆ ಒಗ್ಗಿಸುವ ವಿಕೃತ ಮನೋಭಾವದ ಪುಂಡರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಭಾಷಾಭಿಮಾನ, ನಾಡಿಗಾಗಿ ಪ್ರಾಣ ಕೊಡುವ ಕನ್ನಡಿಗರು ಹೋರಾಟದಲ್ಲಿ ಭಾಗಯಾಗಲಿದ್ದು, ಕೂಡಲೇ ಸರ್ಕಾರಕ್ಕೆ ನಿರ್ದೇಶನ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕೆಂದು ರಾಜ್ಯಪಾಲರಿಗೆ ಬರೆದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಶಿವರಾಜ ನಾಯಕ, ಅಜೀಜ್ ಪಾಶಾ, ಆಂಜನೇಯ ಭಂಡಾರಿ, ಅಮರೇಶ ನಾಯಕ, ಎಂ.ಜಿಲಾನಿ, ರಾಘವೇಂದ್ರ ಇನ್ನಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

