ರಾಯಚೂರು

ಅಸಮರ್ಪಕ ವಿದ್ಯುತ್; ಖಂಡನೆ

Published On :

ಕ.ಪ್ರ. ವಾರ್ತೆ ರಾಯಚೂರು ಆ.4
ನಗರ ಸೇರಿದಂತೆ ಜಿಲ್ಲಾದ್ಯಂತ ಅಸಮರ್ಪಕ ವಿದ್ಯುತ್ ಪೂರೈಸುತ್ತಿರುವ ಜೆಸ್ಕಾಂ ಕಾರ್ಯವೈಖರಿ ಖಂಡಿಸಿ ನಗರದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಜೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದಾಗ, ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ನಗರದ ಜೆಸ್ಕಾಂ ಮುಖ್ಯ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು, ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದಾಗ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
ಮತ್ತಷ್ಟು ಬೆಳೆ ಹಾನಿಯ ಭೀತಿ: ಈ ಸಂದರ್ಭದಲ್ಲಿ ಹೋರಾಟಗಾರರು ಜೆಸ್ಕಾಂಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಜೆಸ್ಕಾಂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದಿನದ 8 ಗಂಟೆ ಮೂರು ಫೇಸ್ ವಿದ್ಯುತ್ ಒದಗಿಸುವ ಕಾರ್ಯ ಜೆಸ್ಕಾಂ ಮಾಡುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ಮುಂಗಾರು ಮಳೆಯ ವೈಫಲ್ಯದಿಂದ ರೈತರು ಸಂಕಷ್ಟದಲ್ಲಿದ್ದು ವಿದ್ಯುತ್ ಕೈಕೊಡುವುದರಿಂದ ಮತ್ತಷ್ಟು ಬೆಳೆ ಹಾನಿಯ ಭೀತಿಯಲ್ಲಿದ್ದಾರೆಂದು ದೂರಿದರು.
ರಾಜ್ಯ ಸರ್ಕಾರ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸುವ ಭರವಸೆ ಕೊಡುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತದಿಂದಾಗಿ ರೈತರು ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿದ ಹೋರಾಟಗಾರರು ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ತ್ರಿವಿಕ್ರಮ್ ಜೋಷಿ, ನಗರಸಭೆ ಸದಸ್ಯ ನರಸಪ್ಪ ಯಕ್ಲಾಸಪುರ, ಮಹಾಲಿಂಗ, ಆಂಜಿನೇಯ ಯಕ್ಲಾಸಪುರ, ರಾಮು, ಪ್ರಮುಖರಾದ ರಮಾನಂದ ಯಾದವ, ಶರಣಮ್ಮ ಕಾಮರೆಡ್ಡಿ, ಬಂಡೇಶ ವಲ್ಕಂದಿನ್ನಿ, ರಾಮಚಂದ್ರ ಕಡಗೋಳ, ಸೇರಿ ಅನೇಕರಿದ್ದರು.

ಜೆಸ್ಕಾಂ ಕಚೇರಿಗೆ ಬಿಜೆಪಿ ರೈತ ಮೋರ್ಚಾ ಮುತ್ತಿಗೆ
ದೇವದುರ್ಗ: ಕಾಂಗ್ರೆಸ್ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಶರಣಗೌಡ ಕೊಪ್ಪರ ನೇತೃತ್ವದಲ್ಲಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಪ್ರಮುಖರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಅದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ದೂರಿದರು.
ಅಭಿವೃದ್ಧಿ ಕಾಮಗಾರಿ ಕುಂಠಿತ: ಮುಂಗಾರು ಮಳೆಯ ವೈಫಲ್ಯದಿಂದ ರೈತರು ಸಂಕಷ್ಟದಲ್ಲಿದ್ದು, ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಅಧಿಕಾರಿಗಳೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಂಬಣ್ಣ ನೀಲೋಗಲ್, ಮಲ್ಲಣ್ಣ ಸಾಹು ನಾಗರಾಳ, ಜಗನ್ನಾಥರಾಯ ಪಾಟೀಲ್, ಬಸವರಾಜ ವಕೀಲರು ಗಾಣಧಾಳ, ನಾಗರಾಜ ಅಕ್ಕರಕಿ, ಎಚ್. ಶಿವರಾಜ್, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್, ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಮಹ್ಮದ್ ಯೂನೂಸ್ ಶಹಾಪೂರಿ, ಪುರಸಭೆ ಸದಸ್ಯರಾದ ವೆಂಕಟೇಶ ಸೋಮಕಾರ, ಬಸ್ಸನಗೌಡ ವೆಂಕಟಾಪೂರ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.