ಕರಿಯಪ್ಪ ತಾತನ ಜಾತ್ರಾ ವೈಭವ
ಮುದಗಲ್: ಪಟ್ಟಣ ಸಮೀಪದ ಜಕ್ಕರಮಡು ತಾಂಡಾದಲ್ಲಿ ಶುಕ್ರವಾರ ಕರಿಯಪ್ಪ ತಾತನ ಜಾತ್ರಾಮಹೋತ್ಸವ ಅದ್ಧೂರಿಯಿಂದ ಜರುಗಿತು. ಪಂಚಮಿ ದಿನವಾದ ಶುಕ್ರವಾರ ಬೆಳಗಿನ ಜಾವ ಕಳಸದ ಮೆರವಣಿಗೆ ದೇವಸ್ಥಾನ ತಲುಪಿದ ಬಳಿಕ ಗುಡಿಗೆ ಕಳಸಾರೋಹಣ ಜರುಗಿತು. ದೇವರ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ಜರುಗಿತು. ಸಂಜೆ 5ರ ಸುಮಾರಿಗೆ ನೂರಾರು ಭಕ್ತರ ಮಧ್ಯೆ ಉಚ್ಚಾಯ ಎಳೆಯಲಾಯಿತು. ತಿಪ್ಪಣ್ಣ ರಾಠೋಡ್, ದಾದಪ್ಪ ರಾಠೋಡ, ಹುಸೇನ್ಸಾಬ ಕಂದಲ್ಲ, ಲೋಕಪ್ಪ, ಭೀಮಪ್ಪ, ಶೇಖರಪ್ಪ, ಚಿಂತಾಮಣಿ, ಗ್ರಾಪಂ ಉಪಾಧ್ಯಕ್ಷ ಅಮರೇಶ ರಾಠ್ಡ್, ಮಾಜಿ ಅಧ್ಯಕ್ಷ ಹನುಮಂತ, ಆನಂದ ಇತರರು ಇದ್ದರು.
ಸಿಎಂ ಪ್ರವಾಸ: ಪೂರ್ವಭಾವಿ ಸಭೆ 4ಕ್ಕೆ
ರಾಯಚೂರು: ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆ.12 ಮತ್ತು 13ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಆ.4ರಂದು ಪೂರ್ವಭಾವಿ ಸಿದ್ಧತೆ ಸಭೆಯನ್ನು ಕರೆಯಲಾಗಿದೆ. ಸಿಎಂ ಜಿಲ್ಲೆಯ ಸಿಂಧನೂರು, ಮಾನವಿ ಹಾಗೂ ರಾಯಚೂರು ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಆ.13 ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಈ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯನ್ನು ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆ.4ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಾರುತಿ ತಿಳಿಸಿದ್ದಾರೆ.
ಆರ್ಟಿಪಿಎಸ್ 1ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದನೇ ಘಟಕವು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ವಿದ್ಯುತ್ ಕೇಂದ್ರದ ಒಂದನೇ ಘಟಕದಲ್ಲಿ ಕಂಡುಬಂದ ದೋಷದಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದು, 4ನೇ ಘಟಕ ಈಗಾಗಲೇ ವಾರ್ಷಿಕ ದುರಸ್ತಿಯಲ್ಲಿದೆ. ಕೆಲ ದಿನಗಳ ಹಿಂದೆ ವಿದ್ಯುತ್ ಬೇಡಿಕೆ ಕೊರತೆ ಕಾರಣವೊಡ್ಡಿ ಸ್ಥಗಿತಗೊಳಿಸಿದ್ದ 8ನೇ ಘಟಕವನ್ನು ಪುನಾ ಉತ್ಪಾದನೆಗೆ ತೊಡಗಿಸಿದ್ದು, ಶುಕ್ರವಾರ ಬೆಳಗ್ಗೆ 900 ಮೆ.ವ್ಯಾ. ವಿದ್ಯುತ್ ಒಟ್ಟು ಉತ್ಪಾದಿಸಲಾಗಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.
ಜೆಡಿಎಸ್ ಪಕ್ಷದ ಪದಾಧಿಕಾರಿಗಳ ನೇಮಕ
ಲಿಂಗಸ್ಗೂರು: ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದ ಜನತಾದಳ(ಜಾತ್ಯತೀತ) ಪಕ್ಷದ ನೂತನ ಪದಾಧಿಕಾರಿಗಳನ್ನು ಶಾಸಕ ಮಾನಪ್ಪ ವಜ್ಜಲರ ಶಿಫಾರಸ್ಸಿನ ಮೇರೆಗೆ ತಾಲೂಕು ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ತಾಲೂಕು ಘಟಕದ ಕಾರ್ಯದರ್ಶಿಯಾಗಿ ಶ್ರೀಧರ ಆಚಾರ್ಯ ಜಾಗೀರದಾರ, ತಾಲೂಕು ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷರಾಗಿ ಗದ್ದೆಪ್ಪ ಪವಾರ್ ಹಾಗೂ ತಾಲೂಕು ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಮಹಿಬೂಬಸಾಬ ಮುಲ್ಲಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ನೀಡಿದ ಜವಬ್ದಾರಿ ತಕ್ಷಣ ವಹಿಸಿಕೊಂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕೆಂದು ಆದೇಶ ನೀಡಿದ್ದಾರೆ.
ಹಿರಿಯ ವಕೀಲರ ನಿಧನ: ಸಂತಾಪ
ರಾಯಚೂರು: ನಗರದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ನ್ಯಾಯವಾದಿ ಮೊಹ್ಮದ್ ಉಸ್ಮಾನ್ ಅಲಿ ಅವರಿಗೆ ನ್ಯಾಯವಾದಿಗಳ ಸಂಘದಿಂದ ಸಂತಾಪ ವ್ಯಕ್ತಪಡಿಸಲಾಯಿತು. ಸಂಘದ ಎಲ್ಲ ನ್ಯಾಯವಾದಿಗಳು ಒಂದು ದಿನದ ಕಲಾಪದಿಂದ ದೂರವುಳಿದು ಗೌರವ ಸಲ್ಲಿಸಿದರು. ಸಂಘದ ಆವರಣದಲ್ಲಿ ನಡೆದ ಸಂತಾಪ ಸಭೆಯಲ್ಲಿ ವಕೀಲರು ಸೇರಿ ಸಂತಾಪ ಸೂಚಿಸಿದರು. ಸಂತಾಪ ಸಭೆಯಲ್ಲಿ ನ್ಯಾಯಾಧೀಶರಾದ ಪಿ.ಜಿ.ಎಂ. ಪಾಟೀಲ್, ಯೋಗೀಶ್ ಕರಗುದರಿ, ನಾರಾಯಣ, ಚೆಲುವಮೂರ್ತಿ, ಎಂ.ಬಿ. ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ಭಾನುರಾಜ್ ಸೇರಿ ಅನೇಕರು ಪಾಲ್ಗೊಂಡಿದ್ದರು. ಸಂಘದ ಹಿರಿಯ ಸದಸ್ಯ ಕೆ. ಮಹಾದೇವಪ್ಪ, ಮೊಹ್ಮದ್ ಅಲಿ, ಜಿ.ಟಿ. ರೆಡ್ಡಿ, ಬಸವನಗೌಡ ಕೊಪ್ಪರ ಹಾಗೂ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಬಿ. ಕುಲಕರ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

