ಪರಿವರ್ತನೆಗಾಗಿ ಪಾದಯಾತ್ರೆ
ಬೀದರ್: ಕೆಜೆಪಿ ಮುಖಂಡ ಡಿಕೆ ಸಿದ್ರಾಮ ಅವರು ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದಲ್ಲಿ ಶನಿವಾರ ತಾಲೂಕಿನ ಪರಿವರ್ತನೆ ಬಯಸಿ 34 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ಮಾತನಾಡಿ, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಸಾಧನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಗಮನಿಸಿ ಜನರು ಕೆಜೆಪಿಗೆ ಮತ ನೀಡಬೇಕು ಎಂದರು.
ಅಭಿವೃದ್ಧಿಗೆ ಸಹಕರಿಸಿ: ಭಾಲ್ಕಿ ತಾಲೂಕಿನಲ್ಲಿ ಪರಿವರ್ತನೆಗಾಗಿ ಪಾದಯಾತ್ರೆ ಹಮ್ಮಿಕೊಂಡಿರುವ ಡಿ.ಕೆ. ಸಿದ್ರಾಮ್ ಅವರ ಸೇವೆ ಗಮನಿಸಿ ಮುಂಬರುವ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲ್ಲಿಸುವ ಮೂಲಕ ತಾಲೂಕಿನ ಅಭಿವೃದ್ಧಿಯ ಕನಸು ನನಸಾಗಿಸಲು ಸಹಕರಿಸಿ ಎಂದ ಅವರು ಕಳೆದ 8 ವರ್ಷಗಳಿಂದ ಸಾಯಗಾಂವ್ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದಾರೆ ಎಂದರು. ಕೆಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ ಕಣಜಿ, ರಘುನಾಥರಾವ ಪವಾರ, ಪ್ರತಾಪ ಪಾಟೀಲ್, ಜಿಪಂ ಮಾಜಿ ಸದಸ್ಯ ಭೀಮಣ್ಣ ಕೊಳ್ಳೆ, ರವೀಂದ್ರ ಕಣಜಿ, ಎಂಎ ಪಾಟೀಲ್, ಹುಮನಾಬಾದ್ ಕೆಜೆಪಿ ಅಭ್ಯರ್ಥಿ ಅಶ್ರಫ್ಅಲಿ ಮಾಲಿಪಾಟೀಲ್, ವಿಜಯಕುಮಾರ ಗಾದಗಿ, ತಾಲೂಕು ಕೆಜೆಪಿ ಅಧ್ಯಕ್ಷ ಶಿವು ಲೋಖಂಡೆ, ನಾಗಶೆಟ್ಟಿ ಲಂಜವಾಡೆ, ಸಂಗಮೇಶ ಕಾರಾಮುಂಗೆ, ಕೆಡಿ ಗಣೇಶ, ಅಂಬರೀಶ ಮಲ್ಲೇಶಿ, ವಿಶ್ವನಾಥ ಚಿಮ್ಮಾ ಹಾಗೂ ವೀರಶೆಟ್ಟಿ ಪಟ್ನೆ ಮತ್ತಿತರರು ಇದ್ದರು.
ಯುವಕರು ಜಾಗೃತರಾದರೆ ಮಾತ್ರ ಬದಲಾವಣೆ ಸಾಧ್ಯ: ಯುವಕರು ಜಾಗೃತರಾದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಕೆಜೆಪಿ ಮುಖಂಡ ಡಿ.ಕೆ. ಸಿದ್ರಾಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ನೀಲಮ್ಮನಳ್ಳಿ ಗ್ರಾಮದಲ್ಲಿ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಕನಿಷ್ಠ ಮೂಲಸೌಲಭ್ಯ ಒದಗಿಸಲು ಆಗದಿದ್ದರೆ ಆತ ಜನಪ್ರತಿನಿಧಿಯೇ ಅಲ್ಲ ಎಂದ ಅವರು ತಾಲೂಕಿನಲ್ಲಿ ನೀರು ವಿದ್ಯುತ್, ರಸ್ತೆ ಇಲ್ಲದೇ ಜನತೆ ತತ್ತರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂದ ಯೋಜನೆಗಳನ್ನು ಮಾತ್ರ ಉದ್ಘಾಟಿಸಿ ಇದೇ ಸಾಧನೆ ಎಂದು ಹೇಳಿಕೊಳ್ಳುತ್ತಿರುವ ಶಾಸಕ ಈಶ್ವರ ಖಂಡ್ರೆ ಅವರು ನಿಜವಾಗಿಯೂ ತಾಲೂಕಿನ ಅಭಿವೃದ್ಧಿ ಮಾಡಿದ್ದಾರೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸವಾಲೆಸೆದರು. ಈ ಬಾರಿ ಪರಿವರ್ತನೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು. ಇದೇ ವಿಶ್ವಾಸದಿಂದ 410 ಕಿಮೀ ದೂರದ ಪಾದ ಯಾತ್ರೆಗೆ ಮುಂದಾಗಿದ್ದು, ಒಂದು ಬಾರಿ ಕ್ಷೇತ್ರದ ಸೇವೆ ಮಾಡಲು ಆಯ್ಕೆ ಮಾಡಿ, ಅವಕಾಶ ನೀಡಿ ಎಂದು ಡಿ.ಕೆ. ಸಿದ್ರಾಮ್ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

