2900 ಕೋಟಿ ಮೀಸಲಿಗೆ ಪ್ರಸ್ತಾವನೆ
ರಾಯಚೂರು: ಮುಂಬರುವ ಬಜೆಟ್ನಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆ ನಿಟ್ಟಿನಲ್ಲಿ ನೇಮಿಸಿರುವ ಡಾ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ 2900 ಕೋಟಿ ನೀಡುವಂತ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಡಾ.ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ತ್ರಿವಿಕ್ರಮ್ ಜೋಷಿ, ಸಮಿತಿಯ ಅಧಿಕಾರವಧಿಯನ್ನು ಇನ್ನೂ ಆರು ವರ್ಷಗಳಿಗೆ ವಿಸ್ತರಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013-14ನೇ ಸಾಲಿನ ಬಜೆಟ್ನಲ್ಲಿ 2900 ಕೋಟಿ ಸಮಿತಿಗೆ ನೀಡುವಂತೆ ಮನವಿ ಮಾಡಲಾಗಿದೆ. ಈ ಹಿಂದೆ ಅನುಷ್ಠಾನ ಸಮಿತಿಯನ್ನು 8ವರ್ಷಗಳ ಅವಧಿಗೆ ರೂಪಿಸಲಾಗಿತ್ತು. ಆದರೆ ಸಮಿತಿಯು ತಡವಾಗಿ ಅಸ್ತಿತ್ವಕ್ಕೆ ಬಂದಿದ್ದರಿಂದ ಕಾರ್ಯಾವಧಿ ವಿಸ್ತರಿಸುವ ಮೂಲಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಸಮಿತಿಯಿಂದ 31ಸಾವಿರ ಕೋಟಿ: ನಂಜುಂಡಪ್ಪ ಸಮಿತಿಯು ಒಟ್ಟು 31ಸಾವಿರ ಕೋಟಿ ಒದಗಿಸಿ ರಾಜ್ಯದ 114 ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತ ಸಲಹೆ ನೀಡಿತ್ತು. ಕಳೆದ 6 ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ 10,421 ಕೋಟಿ ಸಮಿತಿಗೆ ಒದಗಿಸಲಾಗಿದೆ ಎಂದರು.
2012-13ನೇ ಸಾಲಿನಲ್ಲಿ 1342.10 ಕೋಟಿ ವೆಚ್ಚ ಮಾಡಲಾಗಿದ್ದು, ಶೇ.50ರಷ್ಟು ಸಾಧನೆ ಮಾಡಲಾಗಿದೆ. ಆರ್ಥಿಕ ವರ್ಷಾಂತ್ಯಕ್ಕೆ ಶೇ. 75ರಷ್ಟು ಸಾಧಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ರಾಜ್ಯದ 21 ಇಲಾಖೆಗಳು ಸಮಿತಿ ವ್ಯಾಪ್ತಿಗೆ ಸೇರಿವೆ. ರಾಯಚೂರು ಜಿಲ್ಲೆಯಲ್ಲಿ 18 ಇಲಾಖೆಗಳು ಸಮಿತಿಯ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿದರು.
ಎಚ್ಚರಿಕೆ: ರಾಯಚೂರು ಜಿಲ್ಲೆಗೆ ಪ್ರಸಕ್ತಾ ಸಾಲಿನಲ್ಲಿ 170.25 ಕೋಟಿ ದೊರೆತಿದ್ದು, ಈ ಪೈಕಿ 95 ಕೋಟಿ ವೆಚ್ಚ ಮಾಡಲಾಗಿದೆ. ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿರುವುದು ಈಚೆಗೆ ನಡೆಸಿದ ಸಭೆಯ ವೇಳೆ ತಮ್ಮ ಗಮನಕ್ಕೆ ಬಂದಿದ್ದು, ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಸಮಿತಿಯ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವುದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಹೊಣೆಯಾಗಿದೆ. ಈ ಬಗ್ಗೆ ಅಸಡ್ಡೆ ತೋರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ತ್ರಿವಿಕ್ರಮ್ ಜೋಷಿ ಎಚ್ಚರಿಸಿದರು.
ದೇವದುರ್ಗ ಪಟ್ಟಣದಲ್ಲಿ ಸರ್ಕಾರಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿದ್ದು, ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಮಗಾರಿ ನಿಂತಿದೆ. 3ಕೋಟಿ ಸಮಿತಿಯಿಂದ ನೀಡಲಾಗಿದ್ದು, ಕಾಮಗಾರಿಯನ್ನು ಬೇರೆಯವರಿಗೆ ವಹಿಸಿಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಸತತ ವಿದ್ಯುತ್: ಜೆಸ್ಕಾಂ ವತಿಯಿಂದ ನಿರಂತರ ಜ್ಯೋತಿ ಯೋಜನೆ ಅಡಿ ಸತತ ವಿದ್ಯುತ್ ಒದಗಿಸುವ ಕಾರ್ಯಕ್ರಮ ಜಾರಿಯಲ್ಲಿದ್ದು, ಅದಕ್ಕೆ ಸಮಿತಿಯಿಂದ ಅನುದಾನ ಒದಗಿಸಲಾಗುತ್ತಿದೆ. ಜಿಲ್ಲೆಯ ಲಿಂಗಸ್ಗೂರು ಹೊರತುಪಡಿಸಿದರೆ ಉಳಿದೆಡೆ ಈ ಕಾರ್ಯ ಅಸಮರ್ಪಕವಾಗಿದೆ. ರಾಯಚೂರು ಮತ್ತು ದೇವದುರ್ಗದಲ್ಲಿ ನಿರಂತರ ಜ್ಯೋತಿ ಯೋಜನೆ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣದ ನಿರ್ಮಾಣಕ್ಕೆ ಅಂತಿಮ ಹಂತದ ಕಾಮಗಾರಿಗೆ 75 ಲಕ್ಷ ನೀಡಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು, ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆದೇಶಿಸಲಾಗುತ್ತದೆ ಎಂದು ತಿಳಿಸಿದರು.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡುವ ಆಲೋಚನೆ ತಮ್ಮದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತದೆ. ಕಾಮಗಾರಿ ಅನುಷ್ಠಾನದಲ್ಲಿನ ವಿಳಂಬವನ್ನು ಯಾವ ಕಾರಣಕ್ಕೂ ಸಹಿಸಲಾಗದು. ಸಭೆಗಳಿಗೆ ಗೈರುಹಾಜರಾಗುವ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಮರೇಶ್ ಹೊಸಮನಿ, ಜಿಪಂ ಸಿಇಒ ಜ್ಞಾನಪ್ರಕಾಶ್, ಜಿಪಂ ಸದಸ್ಯ ಅಚ್ಯುತರೆಡ್ಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

