ರಾಯಚೂರು

ಬಜೆಟ್ ಕಣ್ಣೊರೆಸುವ ತಂತ್ರವಷ್ಟೇ

Published On :

ರಾಯಚೂರು: ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಾರಾಯಣಪುರ ಬಲದಂಡೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ಸೇರಿದಂತೆ ನೀರಾವರಿ ಪ್ರದೇಶದ ರೈತರ ಸಮಸ್ಯೆ ಕಡೆಗಣಿಸಿದ್ದಾರೆ. ಬಡವರಿಗೆ 2 ದರದಲ್ಲಿ ಅಕ್ಕಿ ನೀಡುವ ಯೋಜನೆ ಪ್ರಕಟಿಸಿದ್ದು ಬಡವರನ್ನು ಗುರುತಿಸುವ ಕಾರ್ಯ ಇದುವರೆಗೆ ಸರ್ಕಾರದಿಂದ ನಡೆದಿಲ್ಲ. ಇಂಥ ಬಜೆಟ್ ಘೋಷಣೆಗಳಿಂದ ಲಾಭವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಆರೋಪಿಸಿದರು.
  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾರಾಯಣಪುರ ಬಲದಂಡೆ ಮತ್ತು ತುಂಗಭದ್ರಾ ಎಡದಂಡೆಯ ರೈತರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಿಗೆ ಬಜೆಟ್ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಸಿಎಂ ಶೆಟ್ಟರ್ ಮಾಡಿಲ್ಲ ಎಂದು ದೂರಿದರು.
2ಕ್ಕೆ ಕೆಜಿ ಅಕ್ಕಿ ಬಡವರಿಗೆ ದೊರೆಯದು: ಬಜೆಟ್ ಪೂರ್ವ ಸಭೆಯಲ್ಲಿ ರೈತ ಸಂಘದ ಸೂಚಿಸಿದ ಕೆಲ ಸಲಹೆಗಳನ್ನು ಪರಿಗಣಿಸಿರುವುದೇ ಸಾಧನೆ ಎನ್ನಬಹುದು. ಬಡ ವರ್ಗದವರಿಗೆ ಅನುಕೂಲ ಕಲ್ಪಿಸುವಲ್ಲಿ ಬಜೆಟ್ ವಿಫಲವಾಗಿದೆ. ಬಡವರಿಗೆ ಪಡಿತರ ವ್ಯವಸ್ಥೆಯಲ್ಲಿ 2ಕ್ಕೆ ಕೆಜಿ ಅಕ್ಕಿ ನೀಡುವ ಘೋಷಣೆಯನ್ನು ಸರ್ಕಾರ ಮಾಡಿದೆ. ಆದರೆ ಬಿಪಿಎಲ್ ಕಾರ್ಡುಗಳು ಶ್ರೀಮಂತರ ಪಾಲಾಗಿದ್ದು, ಬಡವರಿಗೆ ಈ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ ಎಂದು ಆರೋಪಿಸಿದರು.
ಬಡ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಅಗತ್ಯ ಯೋಜನೆಗಳು ಬಜೆಟ್‌ನಲ್ಲಿಲ್ಲ. ಸೌರಶಕ್ತಿ ಪಂಪ್‌ಸೆಟ್, ಬತ್ತ ಕಟಾವು ಯಂತ್ರಕ್ಕೆ ಸಹಾಯಧನ ನೀಡಿಕೆಯಂಥ ಕೆಲ ಅಂಶಗಳನ್ನು ಹೊರತುಪಡಿಸಿದರೆ, ಕೃಷಿ ಬಜೆಟ್ ಎಂಬುದು ಕಣ್ಣೊರೆಸುವ ತಂತ್ರವಷ್ಟೇ ಎಂದರು.
13ರಂದು ಗ್ರಾಮ ಸ್ವರಾಜ್ಯ ಕೇಂದ್ರ ಉದ್ಘಾಟನೆ: ರಾಜ್ಯ ರೈತ ಸಂಘದಿಂದ ಪ್ರೊ. ಎಂ.ನಂಜುಂಡಸ್ವಾಮಿ ಅವರ 77ನೇ ಜಯಂತಿ ಅಂಗವಾಗಿ ಫೆ.13ರಂದು ಚಾಮರಾಜನಗರ ಜಿಲ್ಲೆಯ ಹೊಂಡರಬಾಳು ಮತ್ತು ಜ್ಯೋತಿಗೌಡನಪುರ ಗ್ರಾಮದ ನವೋದಯ ಶಾಲೆಯ ಪಕ್ಕದಲ್ಲಿನ ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರದಲ್ಲಿ ಗ್ರಾಮ ಸ್ವರಾಜ್ಯ ಕೇಂದ್ರದ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಾಲ್ಕು ದಿನಗಳವರೆಗೆ ನಡೆಯುವ ಕಾರ್ಯಕ್ರಮದಲ್ಲಿ ರೈತರ ಮುಂದಿನ ಸವಾಲುಗಳು, ಸದ್ಯದ ರಾಜಕೀಯ ಪರಿಸ್ಥಿತಿಗೆ ಸಂಬಂಧಿಸಿ ರೈತರ ರಾಜಕೀಯ ನಿಲುವು, ಮೂಲ ಬಿತ್ತನೆ ಬೀಜೋತ್ಪಾದನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಜ್ಞರಾದ ದೇವನೂರು ಮಹಾದೇವ, ಪುಟ್ಟಣ್ಣಯ್ಯ, ಪ್ರೊ. ರವಿವರ್ಮ ಕುಮಾರ್, ಸುಭಾಷ್ ಪಾಳೇಕರ್ ಸೇರಿದಂತೆ ಅನೇಕರು ಉಪನ್ಯಾಸ ನೀಡಲಿದ್ದಾರೆಂದು ಹೇಳಿದರು.
ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಗ್ರಾಮ ಸ್ವರಾಜ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಪ್ರೊ. ಎಂ.ಡಿ.ಎನ್. ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಂಸದ ಧ್ರುವನಾರಾಯಣ್, ವಾಟಾಳ್ ನಾಗರಾಜ್, ಪಿಜಿಆರ್ ಸಿಂಧ್ಯಾ, ಹಿರಿಯ ನಟ ಅಶೋಕ್, ಲೋಹಿಯಾವಾದಿ ಯೋಗೇಂದ್ರ ಯಾದವ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸಮಾವೇಶಕ್ಕೆ ವಿದೇಶಿ ಕೃಷಿತಜ್ಞರು: ನಾಲ್ಕು ದಿನಗಳವರೆಗೆ ನಡೆಯುವ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 300 ಯುವಕರು, 200 ಜನ ಸಾಹಿತಿಗಳು, ಪತ್ರಕರ್ತರಿಗೆ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ ಎಂದ ಅವರು, ವಿದೇಶದಿಂದಲೂ ತಜ್ಞರು ಪಾಲ್ಗೊಳ್ಳುವರೆಂದು ತಿಳಿಸಿದರು. ಲಕ್ಷ್ಮಣಗೌಡ ಕಡಗಂದೊಡ್ಡಿ, ನರಸಿಂಗರಾವ್ ಕುಲಕರ್ಣಿ, ಜಯಪ್ಪ ಸ್ವಾಮಿ, ವೀರನಗೌಡ, ನರಸಿಂಹಲು  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.