ರಾಯಚೂರು

ಕಮ್ಮಿ ದರದಲ್ಲಿ ಅಕ್ಕಿ ಮಾರಾಟ; ಶ್ಲಾಘನೆ

Published On :

ರಾಯಚೂರು: ಸಮಾಜದ ಎಲ್ಲರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ಅಕ್ಕಿ ಮಾರಾಟಕ್ಕೆ ಮುಂದಾಗಿರುವ ಅಕ್ಕಿ ಗಿರಣಿ ಮಾಲೀಕರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಹೇಳಿದರು.
ನಗರದಲ್ಲಿ ಮಂಗಳವಾರ ರೈಸ್ ಮಿಲ್ಲರ್ಸ್ ಅಸೋಸಿಯೇಶನ್‌ನ ಅಕ್ಕಿ ಮಾರಾಟ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರು ಅನೇಕ ಸಾಮಾಜಿಕ ಹಾಗೂ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ: ರೈಸ್ ಮಿಲ್ಲರ್ಸ್ ಸಂಘದವರು ಅಕ್ಕಿ ದಾಸ್ತಾನು ಪ್ರಮಾಣ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಶೀಘ್ರದಲ್ಲಿಯೇ ಮನವಿ ಕಳಿಸಲಾಗುತ್ತದೆ. ಸಂಘದವರು ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲೆಂದು ಆಶಿಸಿದರು.
ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬರಗಾಲವಿದ್ದು, ಅದರಿಂದ ಬತ್ತದ ಉತ್ಪನ್ನದಲ್ಲಿ ಕುಸಿತವಾಗಿದೆ. ಇಳುವರಿಯಲ್ಲಿನ ವ್ಯತ್ಯಾಸದಿಂದಾಗಿಯೇ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಏರಿಕೆ ಕಂಡಿದೆ ಎಂದು ಹೇಳಿದರು.
ಎಲ್ಲರಿಗೂ ಮಾದರಿ: ರಾಜ್ಯದಲ್ಲಿಯೇ ಇಂಥ ಮಾರಾಟ ಕೇಂದ್ರವನ್ನು ಯಾವ ಜಿಲ್ಲೆಯಲ್ಲಿಯೂ ಇದುವರೆಗೆ ಆರಂಭಿಸಿಲ್ಲ. ಅಕ್ಕಿ ಗಿರಣಿ ಮಾಲೀಕರ ಸಮಾಜಮುಖಿ ಕಾರ್ಯಕ್ರಮವು ಎಲ್ಲ ಜಿಲ್ಲೆಯವರಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾರಾಟ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು.
ಸಂಘದ ಕೋಶಾಧ್ಯಕ್ಷ ಸಾವಿತ್ರಿ ಪುರುಷೋತ್ತಮ ಮಾತನಾಡಿ, ಸಂಘದಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಇದುವರೆಗೆ ಆಯೋಜಿಸಲಾಗಿದೆ. ಕಾರ್ಗಿಲ್ ಯೋಧರ ಕುಟುಂಬದವರಿಗೆ ಸಹಾಯ, ಅತಿವೃಷ್ಟಿ ಸಂದರ್ಭದಲ್ಲಿ ನಿರಾಶ್ರಿತರಿಗೆ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.
ಶೇ.30 ಇಳುವರಿ ಕುಸಿತ: ಪ್ರಸಕ್ತ ಸಾಲಿನಲ್ಲಿ ಬತ್ತದ ಬೆಳೆಯಲ್ಲಿ ಶೇ.30ರಷ್ಟು ಇಳುವರಿ ಕುಸಿತವಾಗಿದೆ. ಅದರಿಂದಾಗಿ ಅಕ್ಕಿಯ ದರ ಏರಿಕೆ ಕಂಡಿದೆ. ಆಂಧ್ರ, ತಮಿಳುನಾಡುಗಳಿಗೆ ಬತ್ತ ಮಾರಾಟಕ್ಕೆ ರೈತರು ಮುಂದಾಗಿರುವುದರಿಂದ ಸಹ ಬತ್ತದ ಕೊರತೆ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ದಾಸ್ತಾನು ಮಿತಿಯನ್ನು ನಿಗದಿಪಡಿಸಿರುವುದರಿಂದ ಕಡಿಮೆ ಬೆಲೆಗೆ ನೆರೆಯ ರಾಜ್ಯದಿಂದ ಬತ್ತ ಖರೀದಿಸಿ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ದಾಸ್ತಾನು ಮಿತಿಯನ್ನು ಸಡಿಲಿಸುವಂತೆ ಮನವಿ ಮಾಡಿದರು.
ಚರ್ಚೆ ಬಳಿಕ ನಿರ್ಧಾರ: ಮಾರಾಟ ಕೇಂದ್ರಗಳಲ್ಲಿ ಅಕ್ಕಿಯನ್ನು ಮುಂದಿನ ಒಂದು ತಿಂಗಳ ಅವಧಿಗೆ ಕೈಗೊಳ್ಳಲಾಗುತ್ತದೆ. ಆನಂತರದಲ್ಲಿ ಸಂಘದಲ್ಲಿ ಪುನಾ ಚರ್ಚಿಸಿ ಆನಂತರ ಕೇಂದ್ರಗಳನ್ನು ಮುಂದುವರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗುರುರಾಜ್, ಸರ್ಕಾರದ ಸೂಚನೆಯಂತೆ ಅಕ್ಕಿ ದಾಸ್ತಾನು ಮಿತಿಯನ್ನು ಪಾಲಿಸುವಂತೆ ಮನವಿ ಮಾಡಿದರು. ಆರ್‌ಡಿಎ ಸದಸ್ಯ ರವಿ, ಮಂಚಾಲ ಶ್ರೀನಿವಾಸ್ ಸೇರಿದಂತೆ ರೈಸ್ ಮಿಲ್ಲರ್ಸ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.