ವ್ಯಕ್ತಿತ್ವ ವಿಕಸನಕ್ಕೆ ಕಾರಂತರ ಕಾದಂಬರಿ
ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ದೇವು ಪತ್ತಾರ್
ರಾಯಚೂರು: ಕಾದಂಬರಿ ಓದುವುದು ಮನರಂಜನೆಯ ಮಾರ್ಗವಾಗಬಾರದು. ಅದರಲ್ಲೂ ಶಿವರಾಮ ಕಾರಂತರ ಕಾದಂಬರಿಗಳನ್ನು ಓದುವುದು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತದೆ. ಕಾದಂಬರಿಗಳಲ್ಲಿನ ಸಾರವು ದೈನಂದಿನ ಬದುಕಿಗೆ ತೀರಾ ಹತ್ತಿರದ್ದಾಗಿರುತ್ತದೆ ಎಂದು ಲೇಖಕ ಹಾಗೂ ಪತ್ರಕರ್ತ ದೇವು ಪತ್ತಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಎಸ್.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ಆರ್. ಆಂಜಿನೇಯುಲು ಹಾಗೂ ಎಚ್.ಜಿ. ರಾಧಾದೇವಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾರಂತರ ಸಾಹಿತ್ಯದಲ್ಲಿ ದಲಿತತ್ವ ಮತ್ತು ಸ್ತ್ರೀತ್ವದ ನೆಲೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ನೈಜ ಬದುಕಿಗೆ ಕಾಣಸಿಗುವ ಪಾತ್ರ: ಕಾರಂತರ ಕಾದಂಬರಿಗಳಲ್ಲಿ ಈ ಸಮಾಜದ ನೈಜ ಬದುಕಿನಲ್ಲಿ ಕಾಣಸಿಗುವ ಪಾತ್ರಗಳನ್ನು ಕಾಣಬಹುದಾಗಿದೆ. ಕಾರಂತರ 'ಮೈಮನಸುಗಳ ಸುಳಿಯಲ್ಲಿ' ಕಾದಂಬರಿಯಲ್ಲಿ ವೇಶ್ಯೆಯರ ಮನಸ್ಸಿನ ಒಳತಾಕಲಾಟದ ಬಗ್ಗೆ ಪಾತ್ರದ ಒಳಹೊಕ್ಕು ಕೃತಿ ರಚಿಸಿದ್ದಾರೆಂದು ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಅನುಭವಿಸುವ ಕ್ರೌರ್ಯ, ಇಲ್ಲಿನ ಸಮಾಜದ ಆಷಾಢಭೂತಿತನದ ಬಗ್ಗೆ ಕಾರಂತರು ತಮ್ಮ 'ಸರಸಮ್ಮನ ಸಮಾಧಿ' ಎಂಬ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಕಾರಂತರು 41 ಕಾದಂಬರಿಗಳನ್ನು ರಚಿಸಿದ್ದಾರೆ. 4 ಕವನ ಸಂಪುಟಗಳನ್ನು ಬರೆದಿದ್ದಾರೆಂದು ಹೇಳಿದರು.
ಶೋಷಿತರ ಪೂರಕ ಸಾಹಿತ್ಯ: ಶೋಷಿತರ, ಕೆಳವರ್ಗದವರ ಹಾಗೂ ದನಿಯಿಲ್ಲದವರ ಪರ ಕಾರಂತರು ದನಿಯಾಗಿ ಅವರ ಜೀವನದ ಹಲವು ಏಳು-ಬೀಳುಗಳು, ಜೀವನ ಶೈಲಿಯ ಬಗ್ಗೆ ಸಮಾಜಕ್ಕೆ ಪರಿಚಯಿಸುವ ಕಾರ್ಯ ಅವರ ಕಾದಂಬರಿಗಳ ಮೂಲಕ ಮಾಡಿದ್ದಾರೆ ತೋರಿಸಿದ್ದಾರೆ. ಶೋಷಿತರನ್ನು ಮುಖ್ಯಧಾರೆಗೆ ತರುವ ನಿಟ್ಟಿನಲ್ಲಿ ಆಗಿನ ಕಾಲಕ್ಕೆ ಅವರು ಚರ್ಚೆಗೆ ಪೂರಕ ಸಾಹಿತ್ಯ ರಚಿಸಿದ್ದಾರೆಂದು ಹೇಳಿದರು.
ಆಗಿನ ಕಾಲಘಟ್ಟದಲ್ಲಿ ಸಂಪ್ರದಾಯಕ್ಕೆ ಜೋತು ಬಿದ್ದಿದ್ದ ಸಮಯದಲ್ಲಿಯೇ ಶಿವರಾಮ ಕಾರಂತರು ಶೋಷಿತರು ಹಾಗೂ ಹಿಂದುಳಿದವರ ಬಗ್ಗೆ ಮೊಟ್ಟಮೊದಲ ಬಾರಿಗೆ ಸಾಹಿತ್ಯ ರಚಿಸುವ ಕಾರ್ಯ ಮಾಡಿದ್ದರು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಶೋಷಿತ ವರ್ಗದವರನ್ನು ಕರೆತರುವ ಪ್ರಯತ್ನ ಮಾಡಿದ್ದರು ಎಂದರು.
ಮಕ್ಕಳ ಬಗ್ಗೆ ಅಪಾರ ಕಾಳಜಿ: ಮಕ್ಕಳ ಬಗ್ಗೆ ಅಪಾರ ಕಾಳಜಿ, ಪ್ರೀತಿಯಿರಿಸಿಕೊಂಡಿದ್ದ ಶಿವರಾಮ ಕಾರಂತರು, ಮಕ್ಕಳಿಗಾಗಿ ಇಡೀ ಏಷಿಯಾ ಖಂಡದಲ್ಲಿಯೇ ಮೊಟ್ಟಮೊದಲ ಮಕ್ಕಳ ರೈಲು ಸಂಶೋಧಿಸಿ ಸ್ಥಾಪಿಸುವ ಮೂಲಕ ಮಕ್ಕಳ ಬಗ್ಗೆ ತಮಗಿರುವ ಪ್ರೀತಿ ಹೊರಹಾಕಿದ್ದರು. ಹಾಗೆಯೇ ಮಕ್ಕಳ ಕುತೂಹಲ ತಣಿಸುವ ನಿಟ್ಟಿನಲ್ಲಿ ಅವರಿಗಿದ್ದ ಕಳಕಳಿಯನ್ನು ಪ್ರತ್ಯೇಕಿಸಿ ಅವರ ಬದುಕು ನೋಡುವುದು ಅಸಾಧ್ಯದ ಮಾತೇ ಸರಿ ಎಂದು ಹೇಳಿದರು.
ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಸಂರಕ್ಷಿಸಿ ಕೊಡುವ ವಿಚಾರದಲ್ಲಿ ಶಿವರಾಮ ಕಾರಂತರದ್ದು ವಿಶಿಷ್ಟ ಆಸಕ್ತಿಯಿತ್ತು. ಅವರು ಪರಿಸರ ಸಂರಕ್ಷಣೆ, ಫೋಟೋಗ್ರಫಿ, ಸಾಹಿತ್ಯ, ಚಿತ್ರಕಥೆ ಜತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಲೇಖಕ ಸುದರ್ಶನ್, ಅಧ್ಯಕ್ಷತೆ ವಹಿಸಿ ಮಾಜಿ ಶಾಸಕ ಪಾಪಾರೆಡ್ಡಿ, ಭೀಮನಗೌಡ ಇಟಗಿ, ಎಸ್ಆರ್ಕೆ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಆಶಾ ಪ್ರೇಮಲತಾ ಮಾತನಾಡಿದರು. ಸಮಾರಂಭದಲ್ಲಿ ಸಾಹಿತಿ ಚಿದಾನಂದ ಸಾಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

