ರಾಯಚೂರು

ನಮ್ಮ ಸಮಸ್ಯೆಯೇಕೆ ಅರ್ಥವಾಗ್ತಿಲ್ಲ?

Published On :

ನಾಳೆ ಅಂಗನವಾಡಿ ನೌಕರರ ಪ್ರತಿಭಟನೆ, ವೆಚ್ಚ ಮರುಪಾವತಿಗೆ ಒತ್ತಾಯ
ರಾಯಚೂರು: ಮಕ್ಕಳಿಗೆ ಮೊಟ್ಟೆ ನೀಡಿದ್ದಕ್ಕೆ ಹಣ ಮರುಪಾವತಿಸಿಲ್ಲ. ಕಟ್ಟಿಗೆಗೆ ನೀಡುವ ಹಣ ಸಾಕಾಗುತ್ತಿಲ್ಲ. ಹತ್ತು ವರ್ಷಗಳ ಹಿಂದೆ ನಿಗದಿ ಮಾಡಿದ ಬಾಡಿಗೆ ಕಡಿಮೆ ಎಂದು ಮಾಲೀಕರು ಹೊರಹಾಕುತ್ತಿದ್ದಾರೆ. ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ.
- ಹೀಗೆಂದು ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಎಚ್.ಪದ್ಮಾ ಅಳಲು ತೋಡಿಕೊಂಡರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ರಾಯಚೂರು ತಾಲೂಕಿನಲ್ಲಿ ಒಟ್ಟು 570 ಅಂಗನವಾಡಿ ಕೇಂದ್ರಗಳಿವೆ. 250 ನಗರದಲ್ಲಿ ಮತ್ತು 320 ಗ್ರಾಮೀಣ ಭಾಗದಲ್ಲಿವೆ. ಈ ಕೇಂದ್ರಗಳ ಪೈಕಿ ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ದೇವಾಲಯಗಳಲ್ಲಿ, ಗುಡಿಸಲುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದರು.
ಏಪ್ರಿಲ್‌ನಿಂದ ಹಣ ಪಾವತಿಯಾಗಿಲ್ಲ: ಅಂಗನವಾಡಿ ಕೇಂದ್ರಗಳ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವಿಷಯದಲ್ಲಿಯೂ ಆಡಳಿತ ಅಂಗನವಾಡಿ ನೌಕರರಿಗೆ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ನೀಡುವಂತೆ ಕಳೆದ ಏಪ್ರಿಲ್‌ನಲ್ಲಿ ಸೂಚಿಸಿದೆ. ಅದರಂತೆ ನೌಕರರು ಏಪ್ರಿಲ್‌ನಿಂದ ಇದುವರೆಗೆ ಮೊಟ್ಟೆ ಮತ್ತು ಹಾಲು ನೀಡಿದೆ. ಆದರೆ ಸಂಬಂಧಿಸಿದ ಇಲಾಖೆಯಿಂದ ಇದುವರೆಗೆ ಅದರ ಹಣ ಮರುಪಾವತಿಯಾಗಿಲ್ಲ ಎಂದು ಆರೋಪಿಸಿದರು.
ಪ್ರತಿ ಮೊಟ್ಟೆಗೆ ಸರ್ಕಾರ 3.50 ನೀಡುವುದಾಗಿ ಹೇಳಿದೆ. ಆದರೆ ನಗರದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 4 ಆಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ 4.50ರಿಂದ 5ರವರೆಗಿದೆ. ಆದರೂ ನೌಕರರು ಸ್ವಂತ ಖರ್ಚಿನಲ್ಲಿ ಮೊಟ್ಟೆ ತಂದು ಮಕ್ಕಳಿಗೆ ಕಳೆದ ಏಪ್ರಿಲ್‌ನಿಂದ ಒದಗಿಸಿದ್ದಾರೆ. ಆದರೆ ಏಪ್ರಿಲ್ ತಿಂಗಳಿನ ಹಣ ಮಾತ್ರ ಪಾವತಿಸಿದ್ದು, ಮೇ ತಿಂಗಳಿಂದ ಈವರೆಗೆ ನಯಾಪೈಸೆ ಮರುಪಾವತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಾಡಿಗೆಯೂ ಹೆಚ್ಚಳ: ಅದೇ ರೀತಿ ಮಕ್ಕಳಿಗೆ ಏಪ್ರಿಲ್‌ನಲ್ಲಿ ಹಾಲು ವಿತರಿಸಿದ್ದಕ್ಕೆ ಪ್ರತಿಯಾಗಿ ಆ ಹಣ ಮರುಪಾವತಿಸಿಲ್ಲ. ಇನ್ನು ಅಂಗನವಾಡಿ ಕೇಂದ್ರಗಳಿಗೆ ಮೊದಲು 100 ಇದ್ದ ಬಾಡಿಗೆಯನ್ನು ಕೆಲ ವರ್ಷಗಳ ಹಿಂದೆ 500ಕ್ಕೆ ಹೆಚ್ಚಿಸಲಾಗಿದೆ. ಆದರೆ ಸದ್ಯ ಬಾಡಿಗೆಯ ದರದಲ್ಲಿ ಏರಿಕೆಯಾಗಿದೆ. ಮಾಲೀಕರು ಹೆಚ್ಚಿನ ಬಾಡಿಗೆಗೆ ಬೇಡಿಕೆಯಿರಿಸಿ ಅನೇಕ ಕಡೆ ಕೇಂದ್ರಗಳಿಂದ ಸಾಮಾನು ಹೊರಹಾಕಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕನಿಷ್ಠ 1500ರಿಂದ 2 ಸಾವಿರವರೆಗೆ ಬಾಡಿಗೆ ನಿಗದಿ ಮಾಡಬೇಕು. ಅಂಗನವಾಡಿ ಕೇಂದ್ರಗಳು ಸದ್ಯ ಬೆ.10ರಿಂದ ಸಂಜೆಯ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಎರಡು ಬಾರಿ ಅಡುಗೆ ತಯಾರಿಸಲಾಗುತ್ತಿದೆ. ಆದರೆ ಕಟ್ಟಿಗೆಯ ಖರೀದಿಗೆ ಸರ್ಕಾರ ಕೇವಲ 100 ನೀಡುತ್ತಿದ್ದು, ಈ ಹಣವನ್ನೂ ಸರಿಯಾಗಿ ಪಾವತಿಸುತ್ತಿಲ್ಲ.
ಅಧಿಕಾರಿಗಳಿಗೇಕೆ ಅರ್ಥವಾಗುತ್ತಿಲ್ಲ?: ತಿಂಗಳಿಗೆ 100 ಕಟ್ಟಿಗೆ ಯಾತಕ್ಕೂ ಸಾಲದು. ಹೀಗಾಗಿ ಕೇಂದ್ರಗಳಲ್ಲಿ ನೌಕರರೇ ಸ್ವಂತ ಹಣದಿಂದ ಅಡುಗೆಗೆ ಕಟ್ಟಿಗೆ ಖರೀದಿ, ಮೊಟ್ಟೆ ಖರೀದಿ ಸೇರಿದಂತೆ ಅನೇಕ ವೆಚ್ಚಗಳನ್ನು ಭರಿಸುವಂತಾಗಿದೆ. ಆದರೆ ಅಧಿಕಾರಿಗಳು ಕೇಂದ್ರಕ್ಕೆ ನಿರಂತರ ಭೇಟಿ ನೀಡಿ ಕೇಂದ್ರಗಳ ಕಾರ್ಯವೈಖರಿಯತ್ತಲೇ ಗಮನಹರಿಸುತ್ತಿದ್ದಾರೆಯೇ ವಿನಾ ನೌಕರರ ಸಮಸ್ಯೆ ಅರ್ಥೈಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮೊಟ್ಟೆ ಮತ್ತಿತರೆ ವೆಚ್ಚಗಳ ಮರುಪಾವತಿಗೆ ಜಿಲ್ಲಾ ಖಜಾನೆಯಲ್ಲಿ ಖರೀದಿಗೆ ಪ್ರತಿಯಾಗಿ ರಸೀದಿ ಕೇಳುತ್ತಿರುವುದಾಗಿ ಹೇಳಿ ಮರುಪಾವತಿಗೆ ವಿಳಂಬ ಮಾಡುತ್ತಿದ್ದಾರೆ. ಆದರೆ ಮೊಟ್ಟೆ, ಕಟ್ಟಿಗೆ ಖರೀದಿಗೆ ಪ್ರತಿಯಾಗಿ ರಸೀದಿ ತರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಾಳೆ ಪ್ರತಿಭಟನೆ: ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಫೆ. 4ರಂದು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಎಲ್ಲ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಸಂಧ್ಯಾ, ಕೆ.ಜಿ. ವೀರೇಶ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.