ಆರೋಪ.. ಪ್ರತ್ಯರೋಪ... ಗದ್ದಲ...
ಸಿಂಧನೂರು: ಬರೀ ವ್ಯರ್ಥ ಆರೋಪ, ಪ್ರತ್ಯಾರೋಪ, ಗದ್ದಲ, ಮಾರಾಮಾರಿ.. ವಿವಿಧ ಸಮಸ್ಯೆ ಹೊತ್ತು ಬಂದು ಪರಿಹಾರ ಕಂಡುಕೊಂಡು ಹೋಗಬೇಕೆಂದ್ದು ಬಂದಿದ್ದ ಜನತೆ ಕೊನೆಗೂ ನಿರಾಶೆ...
- ಇದೆಲ್ಲ ನಡೆದದ್ದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ನಗರಸಭೆಯ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ನಗರಸಭೆಯೊಂದಿಗೆ ಸಾರ್ವಜನಿಕರ ಮುಖಾಮುಖಿ' ಕಾರ್ಯಕ್ರಮದಲ್ಲಿ.
ಸರ್ವೋಚ್ಚ ನ್ಯಾಯಾಲಯದ ಸೂಚನೆಯನ್ವಯ ಫೆ. 3ರೊಳಗೆ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೀಸಲಾತಿಯನ್ವಯ ಚುನಾವಣೆಗಳನ್ನು ನಡೆಸಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮುಖಾಮುಖಿ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಜನಪ್ರನಿಧಿಗಳು, ವಿವಿಧ ಪಕ್ಷಗಳ ಅಧ್ಯಕ್ಷರು, ಕಾರ್ಯಕರ್ತರು ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು. ಸಭೆಯ ಆರಂಭಕ್ಕೂ ಮುನ್ನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆಗಮಿಸಿದ್ದು ವಿಶೇಷವಾಗಿತ್ತು.
14 ಸದಸ್ಯರು ಆಡಳಿತ ಪಕ್ಷದಲ್ಲಿದ್ದರೂ ಬಂದಿದ್ದು 5 ರಿಂದ 6 ಜನ ಮಾತ್ರ. ಇನ್ನು ವಿಪಕ್ಷದಲ್ಲಿದ್ದ ಸದಸ್ಯರ ಪೈಕಿ 8- 9 ಜನ ಆಗಮಿಸಿದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ವೆಂಕಟರಾವ ನಾಡಗೌಡ ಆಗಮಿಸುತ್ತಿದ್ದಂತೆ ಮುಖಾಮುಖಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ಸದಸ್ಯ ಜಾಫರ ಜಾಹಗೀರದಾರ ಹಾಗೂ ಬಸವ ಕೇಂದ್ರದ ಗೌರವಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಅವರ ಮಧ್ಯೆ ತಮಾಷೆಯ ಮಾತುಗಳು ಬಿರುಸುಗೊಂಡು ಒಂದು ಸಣ್ಣ ಹಂತದ ವಾಗ್ವಾದ ನಡೆದು ತಣ್ಣಗಾಗಿತ್ತು.
ಕೆರಳಿದ ಸದಸ್ಯರು: ನಂತರ ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ, ನಗರಸಭಾ ಸದಸ್ಯರು 5 ವರ್ಷದ ಅವಧಿಯಲ್ಲಿ ಮಾಡಿದ ಸಾಧನೆ ಜನರಿಗೆ ಗೊತ್ತೇ ಇದೆ. ದಯವಿಟ್ಟು ಅವರ್ಯಾರು ಮಾತನಾಡಬಾರದು ಎಂದದ್ದು ಎಲ್ಲ ನಗರಸಭೆ ಸದಸ್ಯರನ್ನು ಕೆರಳಿಸಿತು. ಕೆಲ ಸದಸ್ಯರು ಹಾಗಾದರೆ ನಮ್ಮದೇನು ಕೆಲಸವೆಂದು ಹೊರ ನಡೆಯಲು ಯತ್ನಿಸಿದರು. ಆಗ ಪತ್ರಕರ್ತರ ಸಂಘದ ಕೆಲ ಪದಾಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು.
ಹಳೆ ಬಜಾರ್ ರಸ್ತೆ ಕುರಿತು ಎಸ್ಐಒ ಸದಸ್ಯ ಇಕ್ಬಾಲ್ ಪ್ರಶ್ನಿಸಿದಾಗ, ಸಭಾ ಭವನದಲ್ಲಿದ್ದವರೆಲ್ಲಾ ಕೇಕೆ ಹಾಕಿ ಅವರ ಪ್ರಶ್ನೆಗೆ ಚಪ್ಪಾಳೆ ತಟ್ಟಿದರು. ಅಧಿಕಾರಿಗಳ ನಿರುತ್ತರ: ಜೆಡಿಯು ಜಿಲ್ಲಾಧ್ಯಕ್ಷ ಶಾಂತಗೌಡ ಜಾಹಗೀರದಾರ ಕಾರ್ಯಕ್ರಮದ ಆರಂಭದಿಂದ ಮುಗಿಯುವತನಕ ಕೇಳಿದ ಎಲ್ಲ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಲು ತತ್ತರಿಸಿದರ. ಕೆಲವರು ಜಹಗೀರಾರರ ವರ್ತನೆಗೆ ಬೇಸರಗೊಂಡು ಅವರೊಬ್ಬರಿಗೆ ಮೈಕ ಕೊಟ್ಟರೆ ಉಳಿದವರೇನು ಮಾಡಬೇಕೆಂದೂ ಪ್ರಶ್ನಿಸಿದರು.
ಈ ಮಧ್ಯೆ ಸಾರ್ವಜನಿಕರ ಹಲವು ಪ್ರಶ್ನೆಗಳಿಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳ ಕುರಿತು ಅಂಕಿ- ಅಂಶಗಳ ಸಮೇತ ಉತ್ತರಿಸಿದರು.
ಜನತೆಗೆ ವಿಷದ ನೀರು ಕುಡಿಸುತ್ತಿದ್ದಾರೆ: ಜೆಡಿಯು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಪತ್ತಾರ ನಗರಕ್ಕೆ ಶುದ್ಧ ನೀರು ಕೊಡಲು ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ಸ್ಮಶಾನದ ರಸ್ತೆಗೆ ಕಾಯಕಲ್ಪ ಸಿಕ್ಕಿಲ್ಲ ಎಂದು ಆರೋಪಿಸಿದರು. ಆಗ ಸಭೆಯಲ್ಲಿ ತೀವ್ರ ಗದ್ದಲ, ಆರೋಪ- ಪ್ರತ್ಯಾರೋಪಗಳು ಕಂಡು ಬಂದವು. ಈ ಹಂತದಲ್ಲಿ ರೈತ ಮುಖಂಡ ನಾಗರೆಡ್ಡೆಪ್ಪ ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆದಿದೆ. ಶಾಂತಿ ಬೇಕಾಗಿಲ್ಲ, ಜನತೆಗೆ ಕುಡಿವ ನೀರಿನ ಬದಲಾಗಿ ವಿಷದ ನೀರು ಕುಡಿಸುತ್ತಿದ್ದಾರೆ. ಇದು ನಗರದ ಜನತೆಯ ದೌರ್ಭಾಗ್ಯ ಎಂದು ಆಕ್ಷೇಪಿಸಿದರು.
ಶೌಚಾಲಯ ಸಮಸ್ಯೆ: ಇದೇ ವೇಳೆ ಮಹಿಬೂಬ ಕಾಲೋನಿಯ ಮಹಿಳಾ ಶೌಚಾಲಯದ ಸಮಸ್ಯೆ ಚರ್ಚೆಗೆ ಬಂದು ಹಾಸ್ಯಮಯವಾಗೇ ಮಾಯವಾಯಿತು.
ಜಿದ್ದಾಜಿದ್ದಿ: ನಗರಸಭೆ ಮಾಜಿ ಅಧ್ಯಕ್ಷೆ ಪದ್ಮಾವತಿ ಅವರ ಮನೆಯ ಮುಂದಿನ ಶೌಚಾಲಯದ ಜಗಳದ ಕುರಿತು ಪ್ರಸ್ತಾಪಿಸುತ್ತಿದ್ದಂತೆ ವ್ಯಘ್ರಗೊಂಡ ಶಾಸಕರು ಇಲ್ಲಿ ರಾಜಕೀಯದ ವಿಚಾರ ಮಾತನಾಡಬೇಡಿ. ಅದೇನಿದ್ದರೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಎಂದರು. ಆಗ ಮತ್ತೆ ತಮ್ಮ ಮಾತನ್ನು ಜಹೀರುಲ್ಲಾ ಹಸನ್ ಮುಂದುವರೆಸಿದಾಗ ಜೆಡಿಎಸ್ ಸದಸ್ಯ ಜಿಲಾನಿಪಾಷಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಾವೇದ್ ಹುಸೇನ್ ದೇಸಾಯಿ ಮತ್ತಿತರ ಕಾರ್ಯಕರ್ತರು ದಾಂಧಲೆ ಎಬ್ಬಿಸಿದರು. ಇತ್ತ ಕಾಂಗ್ರೆಸ್ ಯುವ ಮುಖಂಡರು ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಒಂದು ಹಂತದಲ್ಲಿ ಈ ಮುಖಾಮುಖಿ ಕಾರ್ಯಕ್ರಮ ಎರಡೂ ಪಕ್ಷಗಳ ಜಿದ್ದಾಜಿದ್ದಿಯ ವೇದಿಕೆಯಾಯಿತು. ಪೊಲೀಸರು ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಈ ಮಧ್ಯೆ ವಿದ್ಯುತ್ ವ್ಯತ್ಯಯವಾಗಿ ಜನತೆ ತಮ್ಮ ಪ್ರಶ್ನೆಗಳಿಗೆ ಉತ್ತರ ಕೇಳಲು ತಾಳ್ಮೆ ಕಳೆದುಕೊಂಡು ಸಭಾಂಗಣದಿಂದ ಹೊರ ನಡೆದರು. ಅಲ್ಲಿಗೆ ಪತ್ರಕರ್ತರ ಮುಖಾಮುಖಿ ಕಾರ್ಯಕ್ರಮಕ್ಕೆ ವಂದಿಸಿ ಮುಕ್ತಾಯಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

