ಜನರ ಹೃದಯದಲಿ ಸನ್ನಡತೆ ಬೆಳೆಸಿ
ಕ.ಪ್ರ. ವಾರ್ತೆ, ಮೈಸೂರು, ಜು.31
ಜನತೆಯ ಹೃದಯದಲ್ಲಿ ಸನ್ನಡತೆ ಬೆಳೆಸಿದರೆ ಮನಸ್ಸಿನ ನೋವುಗಳು ನಿವಾರಣೆಯಾಗುತ್ತವೆ. ಜನರಲ್ಲಿ ಒಗ್ಗಟ್ಟು ಮೂಡುತ್ತದೆ ಮತ್ತು ಈ ಭೂಮಿ ವಾಸಯೋಗ್ಯವಾದ ಗ್ರಹವಾಗುತ್ತದೆ ಎಂದು ಮಾಜಿ ರಾಷ್ಟ್ಪಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಭಿಪ್ರಾಯಪಟ್ಟರು.
ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ದೆಹಲಿಯ ಸಾಕೇತ್ನಲ್ಲಿ ನಿರ್ಮಿಸಿರುವ ಜೆಎಸ್ಎಸ್ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಿಸರವನ್ನು ಕಲ್ಮಶರಹಿತವನ್ನಾಗಿಸಬೇಕು. ಹಸಿರಾಗಿಯೂ ಶುಚಿಯಾಗಿಯೂ ಹೊಂದುವುದು ನಮ್ಮ ಆದ್ಯ ಕರ್ತವ್ಯ. ಬಡತನವನ್ನು ಹೋಗಲಾಡಿಸಬೇಕು. ಯುದ್ಧ ಭಯವಿಲ್ಲದ ಶಾಂತ ವಾತಾವರಣ ನಿರ್ಮಿಸಬೇಕು. ಎಲ್ಲ ಪ್ರಜೆಗಳೂ ಸುಖದಿಂದಿರಬೇಕು ಎಂದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಈ ಕೇಂದ್ರವನ್ನು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳಿಗೆ ಅರ್ಪಿಸಿರುವುದಾಗಿ ತಿಳಿಸಿದರು. ಪ್ರಸ್ತುತ ಅಧ್ಯಾತ್ಮಿಕ ಕೇಂದ್ರವನ್ನು ತರುಣರು ಮತ್ತು ಹಿರಿಯರ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಅವರನ್ನು ಧೀಮಂತ ರಾಷ್ಟ್ರದ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದನ್ನು ಸಫಲಗೊಳಿಸುವ ಜವಾಬ್ದಾರಿ ಇಲ್ಲಿನ ಜನರಿಗೆ ಸೇರಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ, ಅರಿವು, ಶಿಕ್ಷಣದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸುತ್ತೂರು ಶ್ರೀಮಠದ ಕಾರ್ಯಚಟುವಟಿಕೆಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಶ್ರೀಮಠದ ಚಟುವಟಿಕೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅಲ್ಲದೆ ವಿಶ್ವಾದ್ಯಂತ ವ್ಯಾಪಿಸಿರುವ ಪರಿ ಅಮೋಘವಾಗಿದೆ ಎಂದರು.
ಸಿದ್ಧಗಂಗಾ ಮಠದ ಶ್ರೀ ಕಿರಿಯ ಸ್ವಾಮೀಜಿಗಳಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕನಕಪುರ ಶ್ರೀಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಕರ್ನಾಟಕದ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರದ್ವಾಜ್ ದಂಪತಿ ಭಾಗವಹಿಸಿದ್ದರು. ಜೆಎಸ್ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್ ಸ್ವಾಗತಿಸಿದರು. ಡಾ.ಎಂ.ಎಲ್. ಗುಪ್ತ ವಂದಿಸಿದರು. ಡಾ. ನಾಗಭೂಷಣ್ ನಿರೂಪಿಸಿದರು.
ಇದೇ ವೇಳೆ ಜೆಎಸ್ಎಸ್ ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಯೋಗ ಮತ್ತು ಧ್ಯಾನ ಕೇಂದ್ರವನ್ನು ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು. ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತಕುಮಾರ್, ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್, ಪ್ರತಾಪ್ ಸಿಂಹ, ಆಯನೂರು ಮಂಜುನಾಥ್, ರಾಜೂಗೌಡ, ಸಿ.ಎಸ್. ಪುಟ್ಟರಾಜು, ಡಾ. ಪ್ರಭಾಕರ ಬಿ. ಕೋರೆ, ಸಿ.ಎಂ. ಉದಾಸಿ, ದೇವೇಂದ್ರಸಿಂಗ್ ಬೋಲೆ, ತುಳಿರಾಂತೀರ್ಥ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

