ಕರಗದ ಕಸ ವಾರಕ್ಕೊಮ್ಮೆ ನೀಡಿ
ಮಾ. ವೆಂಕಟೇಶ್
ಮೈಸೂರು: ನಗರ ಬೆಳೆದಂತೆ ಮನೆಗಳ ನಿರ್ಮಾಣವೂ ಆಗಲಿದೆ. ಅಂತೆಯೇ ಜನಸಂಖ್ಯೆಯೂ ಹೆಚ್ಚಳವಾಗಲಿದೆ. ಇದಕ್ಕೆ ಅನುಗುಣವಾಗಿ ಕಸವೂ ಹೆಚ್ಚಾಗಲಿದೆ! ಆದರೆ ಕಸವನ್ನು ಸಮರ್ಪಕವಾಗಿ ಸಂಗ್ರಹಿಸುವುದೇ ಪರಿಹಾರವಲ್ಲ. ಶೇಖರಣೆಯಾದ ತ್ಯಾಜ್ಯವನ್ನು ಯಾವ ರೀತಿ ವಿಲೇವಾರಿ ಮಾಡುತ್ತೇವೆ ಎಂಬ ಚಿಂತನೆ ನಡೆಸುವುದು ಬಹುಮುಖ್ಯ.
ಮೈಸೂರಿನ ಬಹುತೇಕ ವಾರ್ಡ್ನ ಕಸವನ್ನು ಜೆ.ಪಿ.ನಗರದ ಎಕ್ಸೆಲ್ಪ್ಲಾಂಟ್ಗೆ ಸಾಗಿಸಲಾಗುತ್ತಿದೆ. ಆದರೆ ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕಸದ ರಾಶಿ ಬೃಹದಾಕಾರವಾಗಿ ಬೆಳೆದು, ಸುತ್ತಮುತ್ತಲಿನ ಪರಿಸರಕ್ಕೆ ತೊಂದರೆ ಉಂಟು ಮಾಡಿದೆ. ಆದ್ದರಿಂದ ಆರಂಭದಲ್ಲಿಯೇ ಇದನ್ನು ಕರಗಿಸುವ ಬಗ್ಗೆ ಸರಿಯಾದ ಯೋಜನೆಗಳನ್ನು ರೂಪಿಸಬೇಕು.
ಈ ಹಿನ್ನೆಲೆಯಲ್ಲಿ ಮೂಲದಲ್ಲಿಯೇ ಕಸದ ವಿಂಗಡಣೆ ಅತಿ ಮುಖ್ಯ. ಹಸಿ ಕಸ ಹಾಗೂ ಒಣಕಸವನ್ನು ಪ್ರತಿದಿನ ನೀಡಲಿ. ಆದರೆ ಪ್ಲಾಸ್ಟಿಕ್ ಚೀಲಗಳು, ಗಾಜಿನ ಚೂರುಗಳು, ಕಾಗದದ ಡಬ್ಬಗಳು ಮುಂತಾದ ಕೊಳೆಯದ ಪದಾರ್ಥಗಳನ್ನು ಪ್ರತ್ಯೇಕಿಸಿ ಅದನ್ನು ವಾರಕ್ಕೊಮ್ಮೆ ನೀಡಿದರೆ ಕಸದ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರ ಕಾಣಬಹುದು. ಈ ದಿಸೆಯಲ್ಲಿ ಹೊಸ ಪ್ರಯತ್ನ ನಡೆಸಲಾಗುತ್ತಿದೆ ಎನ್ನುತ್ತಾರೆ ನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ 31ನೇ ವಾರ್ಡ್ನ ನಗರ ಪಾಲಿಕೆ ಸದಸ್ಯ ಟಿ.ಗಿರೀಶ್ ಪ್ರಸಾದ್. ಪ್ಲಾಸ್ಟಿಕ್ನಿಂದ ಯಂತ್ರಗಳಿಗೆ ಬಳಸುವ ಕಚ್ಚಾ ತೈಲವನ್ನು ತೆಗೆಯುವಲ್ಲಿ ಸಂಶೋಧನೆ ನಡೆಸಿರುವ ಸಂಸ್ಥೆಯೊಂದು ಮುಂದೆ ಬಂದಿದ್ದು, ನಗರಪಾಲಿಕೆಯ ಎಲ್ಲ 65 ವಾರ್ಡ್ ವ್ಯಾಪ್ತಿಯಲ್ಲಿ ದೊರಕುವ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಲು ಮುಂದಾಗಿದೆ. ಅಲ್ಲದೆ ಅದು ಕಚ್ಚಾತೈಲ ತೆಗೆಯುವ ಘಟಕವನ್ನು ಮೈಸೂರಿನಲ್ಲಿಯೇ ಆರಂಭಿಸಲು ಆಸಕ್ತಿ ವಹಿಸಿದೆ. ಈ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿಯೂ ಚರ್ಚೆ ನಡೆದಿದೆ. ಇದು ಕಾರ್ಯಗತವಾದರೆ ತ್ಯಾಜ್ಯದಲ್ಲಿ ವಿರಾಟರೂಪವಾಗಿ ಕಂಡುಬರುವ ಪ್ಲಾಸ್ಟಿಕ್ಗೆ ಮುಕ್ತಿ ದೊರಕಲಿದೆ.
ಎಲ್ಲೆಂದರಲ್ಲಿ ಕಸ: ಗೋಕುಲಂನ ಈ ವಾರ್ಡ್ನಲ್ಲಿ ಹೆಚ್ಚಾಗಿ ವಿದ್ಯಾವಂತರು ಹಾಗೂ ಪ್ರಜ್ಞಾವಂತರು ಇರುವುದರಿಂದ ಕಸದ ತಾಂಡವ ಅಷ್ಟಾಗಿ ಕಾಣದು. ಖಾಲಿ ನಿವೇಶನಗಳಲ್ಲಿ ಹಾಗೂ ಕಂಟೈನರ್ ಬಳಿ ಕಸ ಇಲ್ಲವೆನ್ನುವಂತಿಲ್ಲ. ಕೆಲವು ನಿವಾಸಿಗಳು ಹಾಗೂ ಮನೆ ಕೆಲಸದವರು ದೂರದಲ್ಲಿ ನಿಂತು ಕಂಟೈನರ್ ಬಳಿ ಕಸ ಎಸೆಯುವುದರಿಂದ ಅದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಡಬ್ಬದೊಳಗೆ ಹಾಕಿದರೆ ಇಂತಹ ಪರಿಸರದ ಹಾನಿ ತಪ್ಪಿಸಬಹುದು.
31ನೇ ವಾರ್ಡ್ನ ಈ ಭಾಗದ ವ್ಯಾಪ್ತಿಯು ಉತ್ತರಕ್ಕೆ ಸೌತ್ ಆಫ್ ಕುಂಬಾರಕೊಪ್ಪಲು, ಪಿ.ಕೆ. ಸ್ಯಾನಿಟೋರಿಯಂ ಆಸ್ಪತ್ರೆ ಬಿಂದುವಿನಿಂದ ಆಸ್ಪತ್ರೆ ಕಾಂಪೌಂಡ್ ಗೋಡೆ ಮಾರ್ಗವಾಗಿ ಕೆಆರ್ಎಸ್ ರಸ್ತೆ ಬಿಂದುವರೆಗೆ. ಪೂರ್ವಕ್ಕೆ ಸ್ಯಾನಿಟೋರಿಯಂ ಆಸ್ಪತ್ರೆ ಗೋಡೆ ಮಾರ್ಗವಾಗಿ ಕೆಆರ್ಎಸ್ ರಸ್ತೆ ಕೂಡುವ ಬಿಂದುವಿನಿಂದ ಸಾಗಿ ಹಸುಕರು ಪಾರ್ಕ್ ಹಾಗೂ ಕೆಆರ್ಎಸ್ ರಸ್ತೆ ಕೂಡುವ ಬಿಂದುವರೆಗೆ. ದಕ್ಷಿಣಕ್ಕೆ ಹಸುಕರು ಪಾರ್ಕ್, ಗೋಕುಲಂ ಮುಖ್ಯರಸ್ತೆ ಮಾರ್ಗವಾಗಿ ವಿ.ವಿ ಪುರಂ, ಪೊಲೀಸ್ ಠಾಣೆ ರಸ್ತೆ ಬಿಂದುವರೆಗೆ. ಅಲ್ಲಿಂದ ವಿ.ವಿ.ಪುರಂ ಠಾಣೆ ಮೂಲಕ ಸಾಗಿ ಮಳೆನೀರು ಚರಂಡಿ ಬಿಂದುವರೆಗೆ, ಗೋಕುಲಂ ಸ್ಮಶಾನ ಅಡ್ಡರಸ್ತೆ ಮೂಲಕ ಸ್ಮಶಾನ ರಸ್ತೆ ಬಿಂದು. ಪಶ್ಚಿಮಕ್ಕೆ ಸ್ಮಶಾನ ರಸ್ತೆ ಬಿಂದುವಿನಿಂದ ಕಾಂಟೂರು ರಸ್ತೆ ಮಾರ್ಗವಾಗಿ ಸೌತ್ ಆಫ್ ಕುಂಬಾರಕೊಪ್ಪಲು ಹಾಗೂ ಸ್ಯಾನಿಟೋರಿಯಂ ಆಸ್ಪತ್ರೆ ಕೂಡುವ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 11,200 ಜನಸಂಖ್ಯೆ, ಸುಮಾರು 2600 ಮನೆಗಳು ಹಾಗೂ 280 ಕ್ಕೂ ಅಧಿಕ ಉದ್ದಿಮೆಗಳಿವೆ.
ಕನ್ನಡಪ್ರಭ ದಿನಪತ್ರಿಕೆಯಲ್ಲಿ ಸರಣಿಯಾಗಿ ಪ್ರಕಟವಾಗುತ್ತಿರುವ ಮೈಸೂರು ಕಸಬ್ ವರದಿಯೂ ಮೈಸೂರು ನಗರದ ವಾರ್ಡ್ಗಳ ಕಸದ ಸಮಸ್ಯೆಗಳ ವಸ್ತು ಸ್ಥಿತಿ ಬಿಂಬಿಸುತ್ತಿದೆ. ವರದಿ ಕಟುಸತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತರೆ ವಾರ್ಡ್ಗಳಂತೆ ನಮ್ಮ ವಾರ್ಡ್ನಲ್ಲಿಯೂ ಪೌರಕಾರ್ಮಿಕರ ಹಾಗೂ ಕಂಟೈನರ್ ಕೊರತೆಯಿದೆ. 2007 ರಲ್ಲಿ ಸ್ವಚ್ಛತೆಗೆ ಟೆಂಡರ್ ಕರೆಯಲಾಗಿದ್ದು ಇಂದಿಗೂ ಅದನ್ನೇ ಮುಂದುವರಿಸಲಾಗಿದೆ. ಈಗ ಭೌಗೋಳಿಕವಾಗಿ ಮೈಸೂರು ಸಾಕಷ್ಟು ಬೆಳೆದಿದೆ. ಮನೆಗಳು ಹಾಗೂ ಜನಸಂಖ್ಯೆಯೂ ಹೆಚ್ಚಿದೆ. ಇದರಿಂದಾಗಿ ಸಹಜವಾಗಿ ತ್ಯಾಜ್ಯ ಉತ್ಪಾದನೆಯೂ ಅಧಿಕವಾಗಿದೆ. ಇತ್ತೀಚೆಗೆ ಮೇಯರ್ ನಿಯೋಗವು ಸರ್ಕಾರಕ್ಕೆ ಒತ್ತಡ ತಂದ ಹಿನ್ನೆಲೆಯಲ್ಲಿ ಹೊಸ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ಸಿಕ್ಕಿದೆ. ಇದರಿಂದ ಎಲ್ಲ ವಾರ್ಡ್ಗಳಿಗೂ ಸಿಬ್ಬಂದಿ ಹೆಚ್ಚಳವಾಗಲಿದೆ. 1500 ಮಂದಿ ಇದ್ದ ಪೌರಕಾರ್ಮಿಕರ ಸಂಖ್ಯೆ 2500 ಕ್ಕೆ ಹೆಚ್ಚಾಗಲಿದೆ. ಈಗಾಗಲೇ ಹಸಿಕಸ ಹಾಗೂ ಒಣಕಸ ವಿಂಗಡಿಸಿ ನೀಡುವ ಸಲುವಾಗಿ ಪ್ರತಿವಾರ್ಡ್ಗೆ 2300 ಬುಟ್ಟಿಗಳಂತೆ 1.5 ಲಕ್ಷ ಬುಟ್ಟಿಗಳನ್ನು ತರಿಸಲಾಗಿದೆ. ಇದೆಲ್ಲಾ ಅನುಷ್ಠಾನಗೊಂಡರೆ ನಗರ ಮತ್ತಷ್ಟು ಸ್ವಚ್ಛ, ಸುಂದರವೂ ಆಗಲಿದೆ.
ಟಿ ಟಿ.ಗಿರೀಶ್ ಪ್ರಸಾದ್, ವಾರ್ಡ್ 31, ನಗರ ಪಾಲಿಕೆ ಸದಸ್ಯರು ಹಾಗೂ ಅಧ್ಯಕ್ಷರು., ಆರೋಗ್ಯಸ್ಥಾಯಿ ಸಮಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

