ಮೈಸೂರು

ಕಸ ಸಂಗ್ರಹಕ್ಕೆ ಕಂಟೈನರ್ ಕೊಡಿ

Published On :

- ಮಾ. ವೆಂಕಟೇಶ್
ಮೈಸೂರು: ಇದು ಬೃಂದಾವನ ಹೆಸರಿನ ವಾರ್ಡ್. ಆದರೆ ಇದರ ಕಾರ್ಯವ್ಯಾಪ್ತಿ ಕೇವಲ ಆ ಬಡಾವಣೆಗೆ ಮಾತ್ರವೇ ಸೀಮಿತವಾಗಿಲ್ಲ. ಮಂಜುನಾಥಪುರ ಸಂಪೂರ್ಣ ಭಾಗ, ಯಾದವಗಿರಿ ವಸತಿ ಪ್ರದೇಶ ಹಾಗೂ ಯಾದವಗಿರಿ ಕೈಗಾರಿಕಾ ಪ್ರದೇಶ, ಗೋಕುಲಂ, ರೈಲ್ವೆ ಕಾಲೋನಿಯ ಕೆಲವು ಭಾಗಗಳು ಸೇರಿವೆ. ಹೀಗಾಗಿ ಅಲ್ಲಿನ ಕಸದ ಸಮಸ್ಯೆಯೂ ಅಧಿಕವೇ.
ಇಲ್ಲಿನ ವಾರ್ಡ್ ವ್ಯಾಪ್ತಿಗೆ ಸೇರಿರುವ ಮಂಜುನಾಥಪುರ ಕೊಳಚೆ ಪ್ರದೇಶದಲ್ಲಿ ಕಸದ ತಾಂಡವ ತುಸು ಹೆಚ್ಚಾಗಿರುವುದನ್ನು ಕಾಣಬಹುದು. ಸುಮಾರು 300ಕ್ಕೂ ಹೆಚ್ಚಿನ ಮನೆಗಳಿವೆ. ಇದರಲ್ಲಿ ಗುಡಿಸಲುಗಳು ಇಲ್ಲವೆನ್ನುವಂತಿಲ್ಲ. ಮೈಸೂರು ಗುಡಿಸಲು ಮುಕ್ತ ನಗರ ಮಾಡುವ ಸಲುವಾಗಿ ಪಾಲಿಕೆಯು ನರ್ಮ್ ಯೋಜನೆಯಡಿ ಮನೆಗಳನ್ನು ನಿರ್ಮಿಸಿದ್ದರೂ ಇಲ್ಲಿ ಇನ್ನೂ ಗುಡಿಸಲು ವಾಸ ಜನರಿಗೆ ತಪ್ಪಿಲ್ಲ.
ಹಸಿ ಕಸ ಹಾಗೂ ಒಣಕಸವನ್ನು ವಿಂಗಡಿಸಿ ನೀಡುವ ಸಲುವಾಗಿ ಪಾಲಿಕೆ ವತಿಯಿಂದ ನೀಡಲಾಗುವ ಪ್ಲಾಸ್ಟಿಕ್ ಬುಟ್ಟಿಗಳನ್ನು ಸಹ ನೀಡಲಾಗಿದೆ. ಹಾಗಿದ್ದರೂ ಆಟೋ ಟಿಪ್ಪರ್ ಮನೆಯ ಬಳಿಗೆ ಬಂದಾಗ ತ್ಯಾಜ್ಯ ನೀಡದೆ ಎಲ್ಲೆಂದರಲ್ಲಿ ಎಸೆಯುವ ಪ್ರವೃತ್ತಿ ಕಾಣಬಹುದು. ಇದನ್ನು ತಪ್ಪಿಸಬೇಕಾದರೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು.
29ನೇ ವಾರ್ಡ್‌ನ ಈ ಭಾಗದ ವ್ಯಾಪ್ತಿಯು ಉತ್ತರಕ್ಕೆ ಬೃಂದಾವನ ಬಡಾವಣೆಯ 1ನೇ ಹಂತ ಮಳೆನೀರಿನ ಚರಂಡಿ ಬಿಂದು, ಅರಸೀಕೆರೆ ರೈಲ್ವೆ ಲೈನ್ ಮಾರ್ಗವಾಗಿ ಯಾದವಗಿರಿ ಕೈಗಾರಿಕಾ ಪ್ರದೇಶದ 2ನೇ ಹಂತದ ಮಾರ್ಗವಾಗಿ ಮೈಸೂರು ಬೆಂಗಳೂರು ರೈಲ್ವೆ ಬಿಂದುವರೆಗೆ. ಪೂರ್ವಕ್ಕೆ ಮೈಸೂರು ಬೆಂಗಳೂರು ರೈಲ್ವೆ ಲೈನ್ ಬಿಂದು, ಜಾವಾ ಕಂಪನಿ ಹಿಂಭಾಗದ ಮಾರ್ಗವಾಗಿ ರಾಮಕೃಷ್ಣ ಆಶ್ರಮದ ಕಾಂಪೌಂಡ್ ಪಕ್ಕದ ರಸ್ತೆ, ಜಾಯ್ ಐಸ್‌ಕ್ರೀಂ ವೃತ್ತ, ಯಾದವಗಿರಿ ಮುಖ್ಯರಸ್ತೆ ಮಾರ್ಗವಾಗಿ ತಾರಾಸು ವೃತ್ತದ ಬಿಂದುವರೆಗೆ. ದಕ್ಷಿಣಕ್ಕೆ ತರಾಸು ವೃತ್ತದ ಬಿಂದು, ಕೆಆರ್‌ಎಸ್ ರಸ್ತೆ ಮಾರ್ಗ, ಬಿ.ಸಿ.ಲಿಂಗಯ್ಯ ವೃತ್ತ, ವಿವಿ ಪುರಂ, ಪೊಲೀಸ್ ಠಾಣೆ ರಸ್ತೆ, ಗೋಕುಲಂ ಮುಖ್ಯರಸ್ತೆ ಮಾರ್ಗವಾಗಿ ಕೆಆರ್‌ಎಸ್ ರಸ್ತೆ ಮುಂದುವರೆದು ಅಂಚೆ ಕಚೇರಿ ಬಿಂದುವರೆಗೆ. ಪಶ್ಚಿಮಕ್ಕೆ ಕೆಆರ್‌ಎಸ್ ರಸ್ತೆ ಜಂಕ್ಷನ್‌ನಿಂದ ಮೇಟಗಳ್ಳಿ ಪಾರ್ಕ್ ರಸ್ತೆ ಮಾರ್ಗವಾಗಿ ಬೃಂದಾವನ ಬಡಾವಣೆ 1ನೇ ಹಂತದ ಮಳೆ ನೀರಿನ ಚರಂಡಿ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 11,700 ಜನಸಂಖ್ಯೆ, ಸುಮಾರು 2500 ಮನೆಗಳು ಹಾಗೂ 400 ಕ್ಕೂ ಅಧಿಕ ಉದ್ದಿಮೆಗಳಿವೆ. ಈ ಹಿಂದೆ ಇಲ್ಲಿ ಸಂಗ್ರಹಿಸುತ್ತಿದ್ದ ಕಸವನ್ನು ಎಕ್ಸೆಲ್ ಪ್ಲಾಂಟ್‌ಗೆ ರವಾನಿಸಲಾಗುತ್ತಿತ್ತು. ಆದರೆ ಕಳೆದ 1 ತಿಂಗಳಿಂದ ಇಲ್ಲಿನ ತ್ಯಾಜ್ಯವನ್ನು ಕುಂಬಾರಕೊಪ್ಪಲಿನ ಶೂನ್ಯಕಸ ನಿರ್ವಹಣಾ ಘಟಕಕ್ಕೆ ಸಾಗಿಸುವ ಕೆಲಸ ನಡೆದಿದೆ. ಆ ಮೂಲಕ ವಲಯ ವ್ಯಾಪ್ತಿಯಲ್ಲಿನ ಕಸದ ವಿಲೇವಾರಿಗೆ ಕೈ ಜೋಡಿಸಿದೆ.

ಈ ಭಾಗದಲ್ಲಿ ಕಸ ವಿಂಗಡಣೆಗೆ ಪ್ಲಾಸ್ಟಿಕ್ ಬುಟ್ಟಿಗಳನ್ನು ಸ್ವಲ್ಪ ಭಾಗಕ್ಕೆ ಮಾತ್ರ ವಿತರಿಸಲಾಗಿದೆ. ಸ್ಟಾಕ್ ಬಂದ ನಂತರ ಉಳಿದ ಮನೆಗಳಿಗೂ ನೀಡಲಾಗುವುದು. ವಾರ್ಡ್‌ನಲ್ಲಿ ಕಂಟೈನರ್ ಕೊರತೆ ಇರುವುದರಿಂದ ಎಲ್ಲೆಂದರಲ್ಲಿ ಜನರು ಕಸ ಹಾಕುತ್ತಿದ್ದಾರೆ. ಕೆಂಪೇಗೌಡ ಕಲ್ಯಾಣ ಮಂಟಪದ ಬಳಿ ಒಂದು ಕಂಟೈನರ್ ಇರಿಸಲಾಗಿದೆ. ರಾಮಾಕೃಷ್ಣ ಆಶ್ರಮದ ಮೂಲೆಯಲ್ಲಿ ಇರಿಸಿದ್ದ ಕಂಟೈನರ್ ಹಳೆದಾದ್ದರಿಂದ ಬದಲಿಸಲು ತೆಗೆದು ಹಾಕಲಾಗಿದೆ. ಈವರೆಗೆ ಹೊಸ ಕಂಟೈನರ್ ನೀಡಿಲ್ಲ. ಆಟೋಟಿಪ್ಪರ್ ಸರಿಯಾಗಿ ಒದಗಿಸಿಲ್ಲ. ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ನಿರೀಕ್ಷಕರು ಹಾಗೂ ಪರಿಸರ ಎಂಜಿನಿಯರ್‌ಗೆ ತಿಳಿಸಲಾಗಿದೆ.
- ಅನುಸೂಯ, ವಾರ್ಡ್ 30, ನಗರ ಪಾಲಿಕೆ ಸದಸ್ಯರು

ಅಸಮರ್ಪಕ ಕಸ ಸಂಗ್ರಹಣೆ: ನಿವಾಸಿ ದೂರು
ಮೈಸೂರಿನ ವಿಜಯನಗರ ರೈಲ್ವೆ ಬಡಾವಣೆಯಲ್ಲಿ ಮನೆಮನೆಯ ಕಸದ ಸಂಗ್ರಹಣೆ ಕೆಲಸ ಅಷ್ಟೇನೂ ಸಮರ್ಪಕವಾಗಿ ನಡೆದಿಲ್ಲ. ವಾರದಲ್ಲಿ ಸುಮಾರು ನಾಲ್ಕು ದಿನಗಳು ಕಸ ಸಂಗ್ರಹಣೆ ಗಾಡಿಗಳು ಮನೆ ಬಾಗಿಲಿಗೆ ಬಂದು ಹೋಗುತ್ತಿದ್ದವು. ಆದರೆ ಕಳೆದ ಕೆಲ ವಾರಗಳಿಂದ ವಾರದಲ್ಲಿ 2 ದಿನ ಬರುವುದು ಕಷ್ಟವಾಗಿದೆ. ವಲಯ ಕಚೇರಿ - 5ರ ನಿಯಂತ್ರಣ ವ್ಯಾಪ್ತಿಗೆ ಸೇರಿರುವ ಹೆಬ್ಬಾಳಿನ 27ನೇ ವಾರ್ಡ್ ನಗರ ಪಾಲಿಕೆ ಸದಸ್ಯರು ಕೆ.ಟಿ. ಚಲುವೇ ಗೌಡ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಕಸದ ಸಂಗ್ರಹಣೆ ಕೆಲಸ ಅಷ್ಟೇನೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕಸ ಸಂಗ್ರಹಿಸಲು ಬರುವ ಸಿಬ್ಬಂದಿಗೆ ಗೈರು ಹಾಜರಿಗೆ ಕಾರಣವನ್ನು ಕೇಳಿದರೆ, ಗುತ್ತಿಗೆದಾರ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎನ್ನುತ್ತಾರೆ. ಗುತ್ತಿಗೆದಾರರು ಪಾಲಿಕೆಯಿಂದ ಹಣ ಪಡೆದುಕೊಂಡಿದ್ದರೂ ಸಹ, ಈ ಕೂಲಿ ಜನರಿಗೆ ಮಾತ್ರ ಸರಿಯಾದ ಸಮಯದಲ್ಲಿ ಸಂಬಳ ವಿತರಿಸದೆ, ಅವರ ಜೀವನವನ್ನು ಅತಂತ್ರ ಸ್ಥಿತಿಗೆ ನೂಕಿದ್ದಾರೆ. ಜನರ ತೆರಿಗೆ ಹಣದಿಂದ ಪಾಲಿಕೆಯು ವರ್ಷಗಟ್ಟಲೆ ಬಿಲ್ ಪಾವತ್ತಿಸುತ್ತಲೇ ಬಂದಿದೆ. ಇಂತಹ ಗುತ್ತಿಗೆದಾರರ ವಿರುದ್ಧ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
-ನಾಗಮಂಗಲ ನರಸಿಂಹಮೂರ್ತಿ, ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.