ಮಾನವೀಯತೆ ಮರೆತು ಯಂತ್ರಗಳಾಗದಿರಿ
ಮೈಸೂರು: ನಿರ್ವಹಣಾ ವಿದ್ಯಾರ್ಥಿಗಳು ಮಾನವೀಯತೆ ಮರೆತು ಯಂತ್ರಗಳಾಗದಿರಿ ಎಂದು ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ (ಕಾವಾ) ಮುಖ್ಯಸ್ಥ ವಿ.ಎ.ದೇಶಪಾಂಡೆ ಹೇಳಿದರು.
ಮಹಾರಾಜ ತಾಂತ್ರಿಕ ಸಂಸ್ಥೆಯ ನಿರ್ವಹಣಾ ವಿಜ್ಞಾನಗಳ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ವಿವೇಕಾನಂದ ನಾಯಕತ್ವ ಅಭಿವೃದ್ಧಿ ಸಂಸ್ಥೆಯಲ್ಲಿ ನಿರ್ವಹಣಾ ವಿಜ್ಞಾನಗಳ ಅಧ್ಯಯನ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ವೃತ್ತಿ ಅಭಿವ್ಯಕ್ತಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂಬಿಎ ಪದವೀಧರರು ತಮ್ಮ ವೃತ್ತಿಯಲ್ಲಿ ಹಗಲು ರಾತ್ರಿ ಎನ್ನದೇ ಹಣ ಸಂಪಾದನೆ ಮಾಡಲು ತೊಡಗಿಸಿಕೊಳ್ಳುವುದನ್ನು ಕಾಣಬಹುದು. ಮನೆಯಲ್ಲಿಯೂ ಕೊಠಡಿಯೊಳಗೆ ಒಬ್ಬರೇ ಕಂಪ್ಯೂಟರ್ ಮುಂದೆ ಕಾಲ ಕಳೆಯುವುದು, ಮೊಬೈಲ್ನಲ್ಲಿ ಮಾತನಾಡುವುದು ಹಾಗೂ ಟಿವಿ ನೋಡುವುದರಲ್ಲಿಯೇ ಮುಂದಾಗುತ್ತಿದ್ದಾರೆ. ಇದರಿಂದ ಮಾನವೀಯ ಮೌಲ್ಯಗಳು ಹಾಗೂ ಮನುಷ್ಯ ಸಂಬಂಧಗಳು ದೂರವಾಗಲಿದೆ ಎಂದರು. ವೃತ್ತಿ ಜತೆಗೆ ವೈಯಕ್ತಿಕ ಬದುಕಿನ ಕಡೆಯು ಸಹ ಗಮನ ಹರಿಸಬೇಕು. ಕೇವಲ ಉದ್ಯೋಗ ಹಾಗೂ ಹಣ ಸಂಪಾದನೆಯೇ ಮುಖ್ಯವಾಗಬಾರದು. ಕಲೆ, ಶಿಲ್ಪಕಲೆ, ಚಿತ್ರಕಲೆ, ಸಂಗೀತ, ಬರೆಹ ಹಾಗೂ ಓದು ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ ಉಂಟಾಗಿ ಜೀವನದಲ್ಲಿ ತೃಪ್ತಿ ಕಾಣಬಹುದು ಎಂದು ಕಿವಿಮಾತು ಹೇಳಿದರು.
ಎಂಐಟಿ ಸಂಸ್ಥೆ ಗೌರವ ಕಾರ್ಯದರ್ಶಿ ಡಾ.ವೈ.ಟಿ.ಕೃಷ್ಣಗೌಡ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಎಂಬಿಎ ಪದವಿಗೆ ತುಂಬಾ ಬೇಡಿಕೆ ಇರುವ ಕಾರಣ, ಇದರ ಅಧ್ಯಯನಕ್ಕೆ ಮಹತ್ವ ಬಂದಿದೆ. ಇದರಿಂದ ಎಷ್ಟೇ ವರ್ಷಗಳಾದರೂ ಈ ಕೋರ್ಸ್ಗೆ ಬೇಡಿಕೆ ಇದ್ದೆ ಇರುತ್ತದೆ ಎಂದರು.
ಎಂಬಿಎ ವಿಭಾಗದ ವಿದ್ಯಾರ್ಥಿಗಳು ಹೊರತಂದಿರುವ ಮ್ಯಾನ್ಯುವರ್ ವಾರ್ತಾಪತ್ರವನ್ನು ಬಿಡುಗಡೆಗೊಳಿಸಲಾಯಿತು. ಎಂಬಿಎ ಲಾಂಛನ ರೂಪಿಸಿದ ಡಾ.ಲಕ್ಷ್ಮಿಸಿಂಗ್ ರಾಥೋಡ್, ಅರ್ಪಿತಾ ಕೆ. ಈಶ್ವರ್, ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು. ವಿಭಾಗದ ಮುಖ್ಯಸ್ಥ ಡಾ.ಸತ್ಯನಾರಾಯಣ ಕಾಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಎಂಐಟಿ ಅಧ್ಯಕ್ಷ ಡಾ.ಎಸ್.ಮುರಳಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಗುರು ಹಾಗೂ ಪ್ರಾಧ್ಯಾಪಕ ಡಾ.ಎನ್.ಕೆ.ರಾಮಚಂದ್ರ ಗೌಡ ಇದ್ದರು. ಎಂ.ಸಿ.ರಚನಾ ಸ್ವಾಗತಿಸಿದರು. ಸಂಗೀತ ಮೋಹನ್ ನಿರೂಪಿಸಿದರು. ಇವ್ಲೈನ್ ನಿಶ್ಚಿತಾ ವಂದಿಸಿದರು.
ಬೋಧಕ ವರ್ಗದವರಲ್ಲಿ ಬಹುತೇಕರು ಸಂಶೋಧಕರು ಮಹಾರಾಜ ತಾಂತ್ರಿಕ ಸಂಸ್ಥೆಯನ್ನು (ಎಂಐಟಿ) ಬಹುತೇಕ ವೃತ್ತಿಪರ ಅಧ್ಯಾಪಕರೇ ಸೇರಿ ಕಟ್ಟಿದ್ದಾರೆ. ಅದೇ ರೀತಿ ಎಂಬಿಎ ವಿಭಾಗದಲ್ಲಿ ಬೋಧಿಸುತ್ತಿರುವವರಲ್ಲಿ 12 ಮಂದಿ ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಈ ಪೈಕಿ ಮೂವರು ಪೂರ್ಣಕಾಲಿಕ, ಉಳಿದವರು ಅರೆಕಾಲಿಕ ಸಂಶೋಧಕರು. ಒಬ್ಬರು ಈಗಾಗಲೇ ತಮ್ಮ ಪ್ರೌಢಪ್ರಬಂಧ ಸಲ್ಲಿಸಿದ್ದು, ಮತ್ತೊಬ್ಬರು ಸೆಪ್ಟೆಂಬರ್ನಲ್ಲಿ ಸಲ್ಲಿಸಲಿದ್ದಾರೆ. 6 ಮಂದಿಯ ಪ್ರಬಂಧಗಳು ಅಂತಿಮ ಹಂತದಲ್ಲಿರುವುದು ವಿಶೇಷ. ಎಂಬಿಎದಲ್ಲಿ 240 ವಿದ್ಯಾರ್ಥಿಗಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

