ಚಿರತೆ ದಾಳಿಗೆ ಕುರಿ, ಮೇಕೆ ಬಲಿ
ಹುಣಸೂರು: ಚಿರತೆ ದಾಳಿಗೆ ಸುಮಾರು 20 ಸಾವಿರ ಬೆಲೆಬಾಳುವ ಸಾಕು ಪ್ರಾಣಿಗಳೆರಡು ಬಲಿಯಾಗಿರುವ ಘಟನೆ ತಾಲೂಕಿನ ವಡ್ಡಂಬಾಳು ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ಸೋಮೇಗೌಡರಿಗೆ ಸೇರಿದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಕುರಿಯನ್ನು ಕೊಂದಿದೆ. ಸೋಮವಾರ ಮಧ್ಯಾಹ್ನ ಗ್ರಾಮದ ಹೊಳೆಯಂಚಿನಲ್ಲಿರುವ ತನ್ನ ಜಮೀನಿನಲ್ಲಿ ರವಿ ಮೇಕೆಗಳನ್ನು ಮೇಯಲು ಬಿಟ್ಟಿದ್ದ ವೇಳೆ ಮೇಕೆ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಮೇಕೆಗಳ ಚಿರಾಟ ಕೇಳಿ ಅಕ್ಕ-ಪಕ್ಕದ ಜಮೀನಿನಲ್ಲಿದ್ದವರು ಕೂಗಿಕೊಂಡ ಸದ್ದಿಗೆ ಚಿರತೆ ಓಡಿಹೋಗಿದೆ. ಗ್ರಾಮದ ಪಕ್ಕದಲ್ಲೇ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಕ್ಕದ ಕಲ್ಲೂರಪ್ಪನ ಬೆಟ್ಟದ ಕಡೆಯಿಂದ ಬಂದಿರುವ ಚಿರತೆ ಸಾಕು ಪ್ರಾಣಿಗಳನ್ನು ಕೊಂದು, ತಿಂದು ಹಾಕಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಕಾಂತರಾಜ್ ಒತ್ತಾಯಿಸಿದ್ದಾರೆ.
ಮರಳಿ ಶಾಲೆಗೆ ಬಾ ಕಾರ್ಯಕ್ರಮ
ಭೇರ್ಯ: ಶಿಕ್ಷಣ ಇಲಾಖೆ ಆದೇಶದಂತೆ ಪ್ರತಿ ಗ್ರಾಮದ ವ್ಯಾಪ್ತಿಗೆ ಸೇರುವ ಶಾಲೆಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಕಾರ್ಯಕ್ರಮ ಕೆ.ಆರ್.ನಗರ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ನಡೆಯಿತು. ಕುಪ್ಪಳ್ಳಿ ಕ್ಲಸ್ಟರ್ ಸಿಆರ್ಪಿ ಕೃಷ್ಣೇಗೌಡ ಕೆಂಚನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಶಿವರಾಂ ಜೊತೆಗೂಡಿ ಶಾಲೆಯಲ್ಲಿ ದಾಖಲಾಗಿ ಬಿಟ್ಟ ಮಕ್ಕಳ ಹೆಸರನ್ನು ಗುರುತಿಸಿ, ನಂತರ ಪೋಷಕರ ಮನೆಗೆ ತೆರಳಿ ಅವರ ಮನವೊಲಿಸಿ ಶಾಲೆ ಬಿಟ್ಟಿದ್ದ ಸುನೀತಾ, ಮಂಜುಳ, ರಂಜಿತ ಎಂಬ ಮೂವರು ಹೆಣ್ಣು ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಮುಂದಾದರು. ತಾಪಂ ಸದಸ್ಯ ರವಿ, ಮುಂಜನಹಳ್ಳಿ ಪಿಡಿಒ ಲೋಲಾಕ್ಷಿ, ಮುಖ್ಯ ಶಿಕ್ಷಕ ಶಿವರಾಂ, ಆಶಾ ಕಾರ್ಯಕರ್ತೆ ಚಂದ್ರಮ್ಮ, ಮಾಜಿ ಗ್ರಾಪಂ ಸದಸ್ಯ ಕೃಷ್ಣೇಗೌಡ, ಎಸ್ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
ಬಿಜೆಪಿಯಿಂದ ಬರ ಪರಿಶೀಲನೆ
ಬೈಲಕುಪ್ಪೆ: ಈ ವರ್ಷವೂ ಕೂಡ ಮಳೆ ಇಲ್ಲದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಬರಪೀಡಿತವಾಗಿರುವುದರಿಂದ ಬಿಜೆಪಿಯಿಂದ ಬರ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಹಾರಾನಹಳ್ಳಿ ಹೋಬಳಿಯ ಬೈಲಕುಪ್ಪೆ, ಕೊಪ್ಪ, ಆವರ್ತಿ, ಚೆನ್ನಕಲ್ಕಾವಲು, ಚಿಕ್ಕಹೊನ್ನೂರು, ಹೊಡ್ಡಹೊನ್ನೂರು ಗ್ರಾಮಗಳ ಕೆರೆಕಟ್ಟೆಗಳ ಬರ ಅಧ್ಯಯನ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಈ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ, ಸರ್ಕಾರ ಯಾವುದೇ ರೀತಿಯಲ್ಲಿ ಒಂದು ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಬರದಿಂದಾಗಿ ರೈತರು ತತ್ತರಿಸಿದ್ದಾರೆ. ಕೆರೆಕಟ್ಟೆಗಳಲ್ಲಿ ಸರಿಯಾದ ಸಮಯದಲ್ಲಿ ನೀರು ತುಂಬಿಸದೆ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ರೈತರು ಪರಿತಪಿಸುವಂತಾಗಿದ್ದು, ಈ ಕೂಡಲೇ ಹೋಬಳಿಗೊಂದು ಗೋಶಾಲೆ ತೆರೆಯುವಂತೆ ಆಗ್ರಹಿಸಿದರು. ಅಲ್ಲದೇ ಪರಿಶೀಲನೆಯಿಂದ ತಯಾರಿಸುವ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಮುಖಂಡರಾದ ಹೂಟಗಳ್ಳಿ ದೇವರಾಜ್, ಎಸ್. ಗುರುಪಾದಪ್ಪ, ಯೋಗೇಶ್ ಹಾರನಹಳ್ಳಿ, ಭದ್ರಪ್ಪ ಕೊಪ್ಪ, ಕುಮಾರಸ್ವಾಮಿ ಇದ್ದರು.
ಪ್ರಾಮಾಣಿಕ ಸೇವೆ ಕೊನೆತನಕ ಉಳಿಯೋದು
ಬೈಲಕುಪ್ಪೆ: ಪೊಲೀಸ್ ಸಿಬ್ಬಂದಿ ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಪ್ರಾಮಾಣಿಕ ಸೇವೆಯೇ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಹೇಳಿದರು. ಭಾನುವಾರ ಬೈಲಕುಪ್ಪೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಠಾಣೆಯಿಂದ ವಿವಿಧ ಸ್ಥಳಗಳಿಗೆ ವರ್ಗಾವಣೆಯಾದ ಸಿಬ್ಬಂದಿಗೆ ಬೀಳ್ಕೊಡುಗೆ ನೀಡಿ ಮಾತನಾಡಿದ ಅವರು, ಗ್ರಾಮೀಣದ ಪ್ರದೇಶಗಳಲ್ಲಿ ನೂರಾರು ಅಪರಾಧಗಳು ವಿವಿಧ ರೀತಿಯಲ್ಲಿ ನಡೆಯುತ್ತಿವೆ. ಇದರಲ್ಲಿ ನೊಂದ ಜೀವಿಗಳು ನ್ಯಾಯಕ್ಕಾಗಿ ಮೂದಲು ಆಶ್ರಯಿಸುವುದು ಪೊಲೀಸರನ್ನು. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರೀತಿ ಮತ್ತು ತಾಳ್ಮೆಯಿಂದ ವರ್ತಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು. ಬೆಟ್ಟದಪುರ ಎಸ್ಐ ಅನಿಲ್ಕುಮಾರ್, ಬೈಲಕುಪ್ಪೆ ಎಸ್ಐ ಎಂ.ಮುದ್ದುಮಹದೇವ್, ಸಿಬ್ಬಂದಿ ಭಾಸ್ಕರ್, ವಿಜಯೇಂದ್ರ, ಮನೋಹರ್, ಮಹದೇವ್, ನಿಂಗರಾಜು, ಜಗದೀಶ್, ಅನಿತಾ ಇದ್ದರು.
ಆಕಸ್ಮಿಕ ಬೆಂಕಿ: ಬ್ಯಾರನ್ಗಳ ಭಸ್ಮ
ಪಿರಿಯಾಪಟ್ಟಣ: ಆಕಸ್ಮಿಕ ಬೆಂಕಿ ಅನಾಹುತಕ್ಕೆ ಎರಡು ತಂಬಾಕು ಹದಗೊಳಿಸುವ ಬ್ಯಾರನ್ಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನಲ್ಲಿ ಜರುಗಿದೆ. ತಾಲೂಕಿನ ಬಿಳಗುಂದ ಗ್ರಾಮದ ಬಿ.ಎಸ್.ರೇವಣ್ಣ ಹಾಗೂ ಕೋಮಲಾಪುರ ಗ್ರಾಮದ ಮಹದೇವ್ ಎಂಬವರಿಗೆ ಸೇರಿದ ಬ್ಯಾರನ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರು. ನಷ್ಟವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಬೀದಿ ನಾಯಿಗಳ ಹಾವಳಿಗೆ ಕುರಿಗಳು ತುತ್ತು
ಹುಣಸೂರು: ಬೀದಿ ನಾಯಿಗಳ ದಾಳಿಗೆ ಕುರಿಗಳೆರಡು ತುತ್ತಾಗಿರುವ ಘಟನೆ ತಾಲೂಕಿನ ಕಚುವಿನಹಳ್ಳಿ ಗ್ರಾ;ಮದಲ್ಲಿ ಭಾನುವಾರ ಸಂಜೆ ಜರುಗಿದೆ. ತಾಲೂಕಿನ ಹನಗೋಡು ಹೋಬಳಿಯ, ಕಚುವಿನಹಳ್ಳಿ ಗ್ರಾಮದ ಮಹದೇವಮ್ಮ ಎಂಬವರು ತಮ್ಮ ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಕೊಂದು ಸಂಪೂರ್ಣ ತಿಂದು ಹಾಕಿವೆ. ಈ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಿದ್ದು, ತಡೆಯುವಲ್ಲಿ ಗ್ರಾಪಂಗಳು ವಿಫಲವಾಗಿದ್ದು, ಆಗಾಗ್ಗೆ ಸಾಕು ಪ್ರಾಣಿಗಳ ಜೊತೆಗೆ ಮನುಷ್ಯರ ಮೇಲೂ ದಾಳಿ ನಡೆಸುತ್ತಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ದಸಂಸ ಕಿರಂಗೂರು ಸ್ವಾಮಿ ಆರೋಪಿಸಿದ್ದಾರೆ.
ನಿತ್ಯಾನಂದ ವಿರುದ್ಧ ಪ್ರತಿಭಟನೆ
ಮೈಸೂರು: ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನ ಮಾಡಿರುವ ನಿತ್ಯಾನಂದ ವಿರುದ್ಧ ವಿವಿಧ ಕನ್ನಡಪರ ಸಂಘಟನೆಯವರು ನಗರದ ಅಗ್ರಹಾರ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು. ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ವಿವಿಧ ಸಂಘಟನೆಗಳ ಮುಖಂಡರಾದ ಮೈಕ್ ಚಂದ್ರು, ವಿಕ್ರಮ್, ರಾಕೇಶ್ ಭಟ್, ಜೋಗಿ ಮಂಜು ಇದ್ದರು.
ಡಾ. ನೀತಾ ಅಮಾನತು ಹಿಂಪಡೆಯಲು ಆಗ್ರಹ
ಮೈಸೂರು: ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ನೀತಾ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಬೋಧಕರ ಸಂಘದವರು ಆಗ್ರಹಿಸಿದ್ದಾರೆ. ಡಾ.ನೀತಾ ಅವರ ಅಮಾನತಿನಿಂದ ಕೆ.ಆರ್.ಆಸ್ಪತ್ರೆ ಮತ್ತು ಚೆಲುವಾಂಬ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ವೈದ್ಯರು ಮನೋಸ್ಥೈರ್ಯ ಕಳೆದುಕೊಂಡಿದ್ದಾರೆ. ಡಾ. ನೀತಾ ಅವರು ಕರ್ತವ್ಯ ಲೋಪ ಎಸಗಿಲ್ಲ. ಹೀಗಾಗಿ, ಅಮಾನತು ಆದೇಶ ಹಿಂಪಡೆದು ಆಸ್ಪತ್ರೆಯ ಎಲ್ಲ ವೈದ್ಯರು ಮನೋಸ್ಥೈರ್ಯದಿಂದ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ವೈದ್ಯರು ಸರ್ಕಾರವನ್ನು ಕೋರಿದ್ದಾರೆ.
ಮಗುವಿನೊಂದಿಗೆ ತಾಯಿ ನಾಪತ್ತೆ
ಮೈಸೂರು: ತಾಲೂಕಿನ ಹೊಸಹುಂಡಿಯ ನಿವಾಸಿ ರಾಣಿ (24) ಮತ್ತು ಒಂದು ವರ್ಷದ ಪುತ್ರಿ ಪ್ರಗತಿ ನಾಪತ್ತೆಯಾಗಿದ್ದಾರೆ. ರಾಣಿ ಚಹರೆ- 5 ಅಡಿ ಎತ್ತರ, ಗುಂಡು ಮುಖ, ಗೋದಿ ಮೈಬಣ್ಣ, ಎಡಗೈ ಮೇಲೆ ಸಾವಿತ್ರಮ್ಮ ಎಂಬ ಹಸಿರು ಹಚ್ಚೆ ಇದೆ. ಕನ್ನಡ ಮಾತನಾಡುತ್ತಾರೆ. ಪ್ರಗತಿ ಚಹರೆ- ಗುಂಡು ಮುಖ, ಎಣ್ಣೆಗೆಂಪು ಬಣ್ಣ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2444955 ಸಂಪರ್ಕಿಸಿ.
ಯುವಕ ನಾಪತ್ತೆ: ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾದೇವಸ್ವಾಮಿ (20) ನಾಪತ್ತೆಯಾಗಿದ್ದಾರೆ. ಯಾದವಗಿರಿ ನಿವಾಸಿ ಶ್ರೀನಾಥ್ ಅಯ್ಯಂಗಾರ್ ಮಂಡಿ ಮೊಹಲ್ಲಾದಲ್ಲಿ ಬೇಕರಿ ಇರಿಸಿಕೊಂಡಿದ್ದರು. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಕನ್ನಡ ಮಾತನಾಡುತ್ತಾರೆ.
ವೃದ್ಧ ನಾಪತ್ತೆ: ವಿದ್ಯಾರಣ್ಯಪುರಂ ನಿವಾಸಿ ಎನ್.ಎಸ್. ಚಂದ್ರಮೌಳಿ ಎಂಬವರ ತಂದೆ ಸುಬ್ಯಯ್ಯ (86) ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಬೆನ್ನು ಸ್ವಲ್ಪ ಬಾಗಿರುತ್ತದೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418114, 314 ಸಂಪರ್ಕಿಸಲು ವಿವಿ ಪುರಂ ಠಾಣೆ ಪೊಲೀಸರು ಕೋರಿದ್ದಾರೆ.
ತಂಬಾಕು ಬೆಳೆಗಾರರಿಗೆ ಅನ್ಯಾಯವಾದರೆ ಹೋರಾಟ
ಪಿರಿಯಾಪಟ್ಟಣ: ತಂಬಾಕು ಬೆಳೆಗಾರರಿಗೆ ಅನ್ಯಾಯವಾಗುವ ನಿಟ್ಟಿನಲ್ಲಿ ಕ್ರಮಕೈಗೊಂಡಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಿ.ವಿ.ಜವರೇಗೌಡ ಹೇಳಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ರಾಜ್ಯದ 11 ಫ್ಲಾಟ್ಫಾರಂಗಳ ತಂಬಾಕು ಬೆಳೆಗಾರ ರೈತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಂಬಾಕು ಮಂಡಳಿಗೆ ಪತ್ರ ಬರೆದು, ವಿಶ್ವಸಂಸ್ಥೆಯ ಒಪ್ಪಂದದ ಹಿನ್ನೆಲೆ ತಂಬಾಕು ಬೆಳೆಗಾರ ರೈತರಿಗೆ ತಂಬಾಕು ಬೆಳೆಯುವ ಸಲುವಾಗಿ ಗೊಬ್ಬರ, ಬೀಜ ಸೇರಿದಂತೆ ಕೃಷಿ ಪರಿಕರಗಳನ್ನು ವಿತರಿಸದಂತೆ ಹಾಗೂ ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ನೀಡದಂತೆ ನಿರ್ದೇಶನ ನೀಡಿದ್ದಾರೆ. ಇದರಿಂದಾಗಿ ತಂಬಾಕು ಬೆಳೆಗಾರರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ತಂಬಾಕು ನಿಷೇಧ ಹಿನ್ನೆಲೆ ಪರ್ಯಾಯ ಬೆಳೆ ಬೆಳೆಯುವಂತೆ ಕೇಂದ್ರ ಸರ್ಕಾರದ ಆರೋಗ್ಯ ಮಂತ್ರಿಗಳೂ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ. ಸ್ಥಳೀಯ ಹವಾಮಾನ ಹಾಗೂ ಇಲ್ಲಿನ ಮಣ್ಣು ಯಾವ ಬೆಳೆಗೆ ಸೂಕ್ತ ಇಲ್ಲಿ ತಂಬಾಕಿಗೆ ಯಾವ ಪರ್ಯಾಯ ಬೆಳೆ ಬೆಳೆಯಬಹುದು? ತಂಬಾಕಿನಷ್ಟೆ ಲಾಭದಾಯಕ ಬೆಳೆ ಯಾವುದು ಎಂಬುದನ್ನು ಕೇಂದ್ರ ಸರ್ಕಾರ ಮೊದಲು ತಿಳಿಸಲಿ ಹಾಗೂ ಮೂರು ವರ್ಷಗಳ ಕಾಲ ಪರ್ಯಾಯ ಬೆಳೆ ಬೆಳೆದು ಲಾಭ ತೋರಿಸಿಕೊಡಲಿ. ನಂತರ ಅವರ ಕ್ರಮ ನಾವು ಸ್ವಾಗತಿಸುತ್ತೇವೆ. ಅದು ಬಿಟ್ಟು ಏಕಾಏಕಿ ತಂಬಾಕು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕ್ರಮ ಅನುಸರಿಸಿದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಠ್ಯ ಪುಸ್ತಕ ಸದ್ಬಳಕೆಯಾಗಲಿ
ಮೈಸೂರು: ವಿದ್ಯಾರ್ಥಿಗಳ ಕಲಿಕೆ ನಂತರ ಪಠ್ಯ ಪುಸ್ತಕಗಳು ಸದ್ಬಳಕೆಯಾಗಬೇಕು ಎಂದು ಕರ್ನಾಟಕ ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ಹೇಳಿದರು. ಭಾರತ ಸೇವಾದಳ ಜಿಲ್ಲಾ ಸಮಿತಿಯು ಸಂಸ್ಥೆಯ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಆಯಾಯ ವರ್ಷಗಳಲ್ಲಿ ತರಗತಿಯಿಂದ ತೇರ್ಗಡೆಯಾದ ನಂತರ ಪಠ್ಯ ಪುಸ್ತಕವನ್ನು ಪೇಪರ್ ಅಂಗಡಿಗೆ ಮಾರಾಟ ಮಾಡುವ ಬದಲು, ಅದನ್ನು ಸುಸ್ಥಿತಿಯಲ್ಲಿ ಇರಿಸಿಕೊಂಡು ಹೊಸ ವಿದ್ಯಾರ್ಥಿಗಳಿಗೆ ಕೊಡುವ ಕೆಲಸ ಮಾಡಿದರೆ ಅದು ತುಂಬ ಉಪಯುಕ್ತವಾಗಲಿದೆ ಎಂದರು. ಈ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮ ಪುಸ್ತಕಗಳನ್ನು ಜೋಪಾನವಾಗಿ ಇರಿಸಿಕೊಂಡು ಅದನ್ನು ಮತ್ತೊಬ್ಬರ ವ್ಯಾಸಂಗಕ್ಕೆ ನೀಡುತ್ತಿರುವುದು ಸಾರ್ಥಕ ಕೆಲಸ. ಇದರಿಂದ ಬಡಮಕ್ಕಳಿಗೆ ಹೆಚ್ಚಿನ ಆರ್ಥಿಕ ಹೊರೆ ತಪ್ಪಿದಂತೆ ಆಗಲಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆನಂದ, ಕಾವಲು ಪಡೆಯ ಮುಖಂಡ ರವಿಗೌಡ, ಶಾಲೆಯ ಪ್ರಾಂಶುಪಾಲ ಶ್ರೀನಿವಾಸ ಮೂರ್ತಿ ಇದ್ದರು.
ಮದುವೆ ವಸ್ತ್ರಾಭರಣಗಳ ಪ್ರದರ್ಶನ 31ರಿಂದ
ಮೈಸೂರು: ಕಲ್ಯಾಣ ವಸ್ತ್ರ ಆಭರಣ ವತಿಯಿಂದ ಮದುವೆ ವಸ್ತ್ರಾಭರಣಗಳ ಪ್ರದರ್ಶನವು ಜು.31 ರಿಂದ ಆ.2 ರವರೆಗೆ ಹೋಟೆಲ್ ರಿಗಾಲಿಸ್ನಲ್ಲಿ ನಡೆಯಲಿದೆ. ಭಾರತದ ಕರಕುಶಲ ಮತ್ತು ಸಾಂಪ್ರದಾಯಿಕ ದೃಷ್ಟಿಯಿಟ್ಟುಕೊಂಡು ಅತ್ಯಾಧುನಿಕ ವಸ್ತ್ರಭರಣಗಳ ಸಂಗ್ರಹಗಳ ಪ್ರದರ್ಶನವನ್ನು 2ನೇ ಬಾರಿಗೆ ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ಕರ್ನಲ್ ಸಂದೀಪ್ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇಳದಲ್ಲಿ ಡಿಸೈನರ್ ಸ್ಯಾರೀಸ್, ಕಾಂಜಿವರಂ ಸ್ಯಾರೀಸ್, ಡಿಸೈನರ್ ಸೂಟ್ಸ್, ಪಾಕಿಸ್ತಾನಿ ಸಲ್ವಾರ್ ಕಮೀಜ್, ಡಿಸೈನರ್ ಬ್ಲೌಸಸ್ ಲಭ್ಯವಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿ ಆಭರಣ, ಫ್ಯಾಷನ್ ಜ್ಯೂವೆಲೆರಿ, ಉತ್ತಮ ಗುಣಮಟ್ಟದ ಪಾದರಕ್ಷೆಗಳು ಸಹ ದೊರಕಲಿವೆ ಎಂದರು. ಗೋಷ್ಠಿ ನಂತರ ಫ್ಯಾಷನ್ ಶೋ ನಡೆಸಲಾಯಿತು. ರವಿ, ಸತೀಶ್ಸಿಂಗ್, ಸರವಣನ್ ಇದ್ದರು. ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಡೆಯಲಿದೆ.
ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಮೈಸೂರು- ನಾಗನಹಳ್ಳಿ ರೈಲು ನಿಲ್ದಾಣಗಳ ನಡುವೆ ಶನಿವಾರ ನಡೆದಿದೆ. ಚಹರೆ- 60 ವರ್ಷ, ಐದೂವರೆ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ದುಂಡುಮುಖ, ಅಗಲವಾದ ಹಣೆ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಹಾಗೂ ಮುಖದಲ್ಲಿ ಅರ್ಧ ಇಂಚು ಉದ್ದ ಬಿಳಿ ಗಡ್ಡ ಮೀಸೆ ಇದೆ. ಕಪ್ಪು- ಬಿಳಿ ಬಣ್ಣದ ಗೆರೆಯುಳ್ಳ ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್, ಕಾಲರ್ ಮೇಲೆ ಸ್ಯಾಮ್ಸ್ಟಿಚ್ ಎಂಬ ಲೇಬಲ್ ಇದೆ. ಹಸಿರು ಬಣ್ಣದ ಕಪ್ಪು ಚೌಕಳಿ ಇರುವ ಲುಂಗಿ ಧರಿಸಿದ್ದಾರೆ. ಮೃತರ ಜೇಬಿನಲ್ಲಿ ಜು.24 ರಂದು ಪಾಂಡವಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ಖರೀದಿಸಿದ 30 ರೈಲ್ವೆ ಟಿಕೆಟ್ ದೊರೆತಿದೆ. ಮೃತ ವ್ಯಕ್ತಿಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

