ಮಳೆ ನೀರಿನ ಕೊಯ್ಲು ಕಡ್ಡಾಯ
ಮೈಸೂರು: ನಗರದಲ್ಲಿ ಅಂತರ್ಜಲ ಮಟ್ಟ ಕುಸಿತ ತಡೆಗಟ್ಟಲು ನಿರ್ಮಾಣ ಹಂತದ ಹಾಗೂ ಹೊಸ ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಇಂಗು ಗುಂಡಿ ಅಳವಡಿಕೆ ಕಡ್ಡಾಯಗೊಳಿಸಲು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆ ತೀರ್ಮಾನಿಸಿತು.
ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯನ್ನು ನಗರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿತು.
ಸಮಿತಿ ಅಧ್ಯಕ್ಷ ಮ.ವಿ. ರಾಮಪ್ರಸಾದ್ ಮಾತನಾಡಿ, ನಗರ ಪಾಲಿಕೆ ವಲಯ ಕಚೇರಿ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಹಾಗೂ ಇಂಗು ಗುಂಡಿ ನಿರ್ಮಿಸಿರುವವರ ವಿವರ ಕೇಳಿದರು. ನಕ್ಷೆ ಅನುಮೋದನೆ ಹಾಗೂ ಸಿಆರ್ ನೀಡುವಾಗ ಮಳೆ ನೀರು ಕೊಯ್ಲು ಇದೆಯೇ, ಇಲ್ಲವೆ ಎನ್ನುವುದನ್ನು ಗಮನಿಸಬೇಕು. ಆದರೆ ಯಾವ ಅಧಿಕಾರಿಗಳೂ ನಿಯಮ ಪಾಲಿಸುತ್ತಿಲ್ಲ. ಮ್ಯಾನ್ಹೋಲ್ಗಳು ಮಳೆ ಬಂದಾಗ ಉಕ್ಕಿ ಹರಿಯುತ್ತವೆ. ಬೋರ್ವೆಲ್ ಬತ್ತಿ ಹೋಗಲು ಅಂತರ್ಜಲ ರಕ್ಷಣೆ ಮಾಡದಿರುವುದೆ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ಸದಸ್ಯ ಶಿವಕುಮಾರ್ ಮಾತನಾಡಿ, ನಗರದಲ್ಲಿ ಶೇ.95ರಷ್ಟು ಕಟ್ಟಡಗಳಿಗೆ ಮಳೆ ನೀರು ಕೊಯ್ಲು, ಇಂಗು ಗುಂಡಿ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯ, ವೈಫಲ್ಯದಿಂದ ಇಂಥ ಸಮಸ್ಯೆ ಉಂಟಾಗಿದೆ. ಇದರ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದರು.
ನಿರ್ಮಾಣ ಹಂತದ ಕಟ್ಟಡಗಳಿಗೆ ಹಾಗೂ ಹೊಸ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಹಾಗೂ ಇಂಗು ಗುಂಡಿಯನ್ನು ಕಡ್ಡಾಯವಾಗಿ ನಿರ್ಮಿಸುವಂತೆ ನೋಡಿಕೊಳ್ಳಬೇಕು. ತಪ್ಪಿದರೆ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. 30್ಢ40, 40್ಢ50 ಸೇರಿದಂತೆ 200 ಚದರ ಅಡಿ ಮನೆಗಳೂ ಮಳೆನೀರು ಕೊಯ್ಲು ಅಳವಡಿಸಬೇಕು ಎಂದರು.
ಇಂಗು ಗುಂಡಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗುವುದು. ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಲು ವಾರದೊಳಗೆ ಕಾರ್ಯಾಗಾರ ಹಮ್ಮಿಕೊಳ್ಳಲು ಸೂಚಿಸಲಾಯಿತು. ಸಾರ್ವಜನಿಕರ ಕಟ್ಟಡವಲ್ಲದೆ, ವಾಣಿಜ್ಯ ಸಂಕೀರ್ಣ, ಸಮೂಹ ಸಮಿತಿ ಗೃಹಗಳಲ್ಲಿಯೂ ಅಳವಡಿಸಬೇಕು. ಯಾರೆ ಉಲ್ಲಂಘಿಸಿದರೂ ಸಿಆರ್ ಕೊಡದಿರುವ ಜತೆಗೆ, ನೀರಿನ ಸಂಪರ್ಕ ಕಡಿತಗೊಳಿಸಲು ಸೂಚಿಸಿದರು.
ಮಳೆ ನೀರು ಕೊಯ್ಲು ಹಾಗೂ ಇಂಗು ಗುಂಡಿ ನಿರ್ಮಿಸಿಕೊಳ್ಳುವ ಸಾರ್ವಜನಿಕರಿಗೆ ನೀರಿನ ಕಂದಾಯದಲ್ಲಿ ಸಬ್ಸಿಡಿ ನೀಡಲಾಗುವುದು. ನಿರ್ಮಿಸದಿದ್ದರೆ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ತಡೆಹಿಡಿಯಲು ಸಭೆ ತೀರ್ಮಾನಿಸಿತು. ನೀರಿನ ತೆರಿಗೆ ರಿಯಾಯಿತಿ ಕುರಿತು ಮುಂದಿನ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಬಳಿಕ ಜಾರಿಗೆ ತರಲು ಸಮಿತಿ ನಿರ್ಧರಿಸಿತು. ಮಳೆ ನೀರು ಕೊಯ್ಲು ನಿರ್ಮಿಸಿಕೊಳ್ಳುವವರಿಗೆ ಸಹಾಯಧನ ನೀಡುವ ಕುರಿತು ಚರ್ಚಿಸಲು ಎಸ್ಇ ನೇತೃತ್ವದಲ್ಲಿ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಲಾಯಿತು. ಸದಸ್ಯರಾದ ಶಿವಕುಮಾರ್, ಎಂ. ರಮೇಶ್, ಅಯಾಜ್ ಪಾಷ, ಫೈರೋಜ್,ಅನುಸೂಯ, ಹೆಚ್ಚುವರಿ ಆಯುಕ್ತ ರಾಜು, ಎಸ್ಇ ಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

