ಎಂಡಿಎ ಆಯುಕ್ತರ ವಿರುದ್ಧ ದೂರು
ಅಂಶಿ ಪ್ರಸನ್ನಕುಮಾರ್
ಕ.ಪ್ರ. ವಾರ್ತೆ, ಮೈಸೂರು, ಜು.24
ಸುಮಾರು ಎರಡು ವರ್ಷಗಳಾದರೂ ಮಾಹಿತಿ ನೀಡದ ಆರೋಪದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ಪಾಲಯ್ಯ ಅವರ ವಿರುದ್ಧ ನಗರಪಾಲಿಕೆ ಮಾಜಿ ಸದಸ್ಯ ಎಂ.ಸಿ. ಚಿಕ್ಕಣ್ಣ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾರೆ.
ಚಿಕ್ಕಣ್ಣ ಅವರು ಮಾಹಿತಿ ಹಕ್ಕು ಕಾಯ್ದೆ- 2005ರ ಅನ್ವಯ 2012ರ ಅ.4 ರಂದು ಅರ್ಜಿ ಸಲ್ಲಿಸಿ, ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಅವರು ಕುವೆಂಪುನಗರ ಗಗನಚುಂಬಿ ಜೋಡಿ ರಸ್ತೆಯಲ್ಲಿ ಚಿಕ್ಕಮ್ಮಾನಿಕೇತನ ಸಮುದಾಯ ಭವನ ನಿರ್ಮಿಸಿದ್ದಾರೆ. ಆ ನಿವೇಶನ ಪಡೆಯಲು ಸಲ್ಲಿಸಿದ ಅರ್ಜಿ, ನಿವೇಶನ ಮಂಜೂರಾತಿಯಾದ ಪೂರ್ಣ ಕಡತ ಕೋರಿದ್ದರು. 30 ದಿನಗಳೊಳಗೆ ಮಾಹಿತಿ ನೀಡಬೇಕಿತ್ತು. ಆದರೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಚಿಕ್ಕಣ್ಣ ಅವರು 2013ರ ಮಾ.19 ರಂದು ಎಂಡಿಎ ಆಯುಕ್ತರಿಗೆ ಪತ್ರ ಬರೆದು, ಸೋಮಶೇಖರ್ ಅವರು ಆ ನಿವೇಶನವನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದು, ಸಮುದಾಯ ಭವನ ನಿರ್ಮಿಸಿದ್ದಾರೆ. ಆದ್ದರಿಂದ ಕಡತದ ನಕಲು ಕೊಡಿ, ಇಲ್ಲವೇ ಸಾಧ್ಯವಿಲ್ಲ ಎಂಬ ಹಿಂಬರಹ ನೀಡಿ ಎಂದು ಕೋರಿದ್ದರು. 2013ರ ಏ.2 ರಂದು ಎಂಡಿಎ ವಿಶೇಷ ತಹಸೀಲ್ದಾರ್ ಹಿಂಬರಹ ನೀಡಿ, ಪ್ರಾಧಿಕಾರದಿಂದ ಮಂಜೂರಾಗಿರುವ ನಿವೇಶನ ಸಂಖ್ಯೆ, ಅಳತೆ, ಬಡಾವಣೆ ಬಗ್ಗೆ ಲಿಖಿತ ಮೂಲಕ ತಿಳಿಸಿದರೆ ಪರಿಶೀಲಿಸಿ, ನಿಯಮಾನುಸಾರ ಮಾಹಿತಿ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು. ಇದಕ್ಕೆ ಮಾರುತ್ತರ ನೀಡಿದ ಚಿಕ್ಕಣ್ಣ, ನಾನು ಅರ್ಜಿ ಸಲ್ಲಿಸುವಾಗಲೇ ಎಲ್ಲ ವಿವರ ನೀಡಿದ್ದೇನೆ. ಹೀಗಿದ್ದರೂ ಮಾಹಿತಿ ಕೊಡಬಾರದು ಎಂಬ ಕಾರಣಕ್ಕೆ ಕುಂಟುನೆಪ ಹೇಳುತ್ತಿದ್ದೀರಿ ಎಂದು ಆಕ್ಷೇಪಿಸಿದ್ದರು. ಅಲ್ಲದೇ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಮಾಹಿತಿ ಕೊಡಿಸುವ ದಿಕ್ಕಿನಲ್ಲಿ ವಿಚಾರಣೆ ನಡೆಸಲಾಗುವುದು ಎಂದು 2013ರ ಜು.24, ಅ.15 ಹಾಗೂ 2014ರ ಫೆ.13 ರಂದು ತಿಳಿವಳಿಕೆ ಪತ್ರ ನೀಡಿದ್ದರು. ಅದರಂತೆ ಚಿಕ್ಕಣ್ಣ ವಿಚಾರಣೆಗೆ ಹಾಜರಾದರೂ ಯಾವುದೇ ಮಾಹಿತಿ ನೀಡಲಿಲ್ಲ. ಅಧಿಕಾರಿಗಳು ಸರಿಯಾದ ಸಹಕಾರ ನೀಡುತ್ತಿಲ್ಲ. ಅಲ್ಲದೇ ಆಯುಕ್ತರಿಗೆ ಬೆಂಗಳೂರು ಕಾರ್ಯಕ್ರಮ, ಮುಖ್ಯಮಂತ್ರಿಗಳ ಆಗಮನ- ಹೀಗೆ ಹಲವು ಕಾರಣಗಳಿಂದ ಮುಂದಕ್ಕೆ ಹೋಗುತ್ತದೆ. ಆದ್ದರಿಂದ ನಾನು ಕೇಳಿರುವ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಅವರು ಕೋರಿ, ಮಾಹಿತಿ ಆಯೋಗಕ್ಕೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

