ಮೈಸೂರು

ಅತ್ಯಾಚಾರ ಪ್ರಕರಣ ಖಂಡಿಸಿ ಪ್ರತಿಭಟನೆ

Published On :

ಹುಣಸೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಆತ್ಯಾಚಾರ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ದಿನಕ್ಕೆ ಕನಿಷ್ಠ 5 ಆತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದರೂ ರಾಜ್ಯದ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಪಟ್ಟಣದಲ್ಲಿ ಎಬಿವಿಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಮಹಿಳಾ ಪದವಿ ಕಾಲೇಜು ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕೋಟೆ ವೃತ್ತದಲ್ಲಿ ಜಮಾವಣೆಗೊಂಡು ಕೈಯಲ್ಲಿ ಘೋಷಣಾ ಫಲಕ ಹಿಡಿದು, ಹೊರಟು ಪಟ್ಟಣದ ಜೆಎಲ್‌ಬಿ ರಸ್ತೆ, ಕಾರ್ಖಾನೆ ರಸ್ತೆ, ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಬೈಪಾಸ್ ರಸ್ತೆ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿ, ಕೆಲ ಹೊತ್ತು ಧರಣಿ ನಡೆಸಿದರು. ಮೆರವಣಿಗೆಯುದ್ದಕ್ಕೂ ಆತ್ಯಾಚಾರಿಗಳ, ಮುಖ್ಯಮಂತ್ರಿ, ಗೃಹಸಚಿವರ ಹಾಗೂ ಪೊಲೀಸರ ವಿರುದ್ದ ಧಿಕ್ಕಾರ ಕೂಗಿದರು.
ಎಬಿವಿಪಿಯ ಪುಷ್ಪಲತಾ, ಮಂಜುಳಾ, ಪಲ್ಲವಿ ಮಾತನಾಡಿ, ಬೆಂಗಳೂರಿನ ಶಾಲೆಯೊಂದರಲ್ಲಿ 6 ವರ್ಷದ ಮಗುವಿನ ಮೇಲೆ ಆತ್ಯಾಚಾರ ನಡೆಸಿರುವ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಪ್ರಬಲ ಕಾನೂನು ಜಾರಿಗೆ ತರಬೇಕು. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಮಹಿಳೆಯರು, ವಿದ್ಯಾರ್ಥಿನಿಯರ ನೆರವಿಗೆ ಬರಬೇಕೆಂದು ಆಗ್ರಹಿಸಿದರು. ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ನಮೋ ಬ್ರಿಗೇಡ್, ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಮುಖಂಡರಾದ ವರದರಾಜಪಿಳ್ಳೆ, ದೊಡ್ಡಹನುಮೇಗೌಡ, ಸುಧಾಕರ, ಯೋಗೇಶ, ಕೃಷ್ಣ, ಮಹೇಶ ಭಾಗವಹಿಸಿದ್ದರು.
ಕರವೇಯಿಂದ ರಸ್ತೆ ತಡೆ
ನಂಜನಗೂಡು: ರಾಜ್ಯಾದ್ಯಂತ ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಹಾಗೂ ಕಿರುಕುಳ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹುಲ್ಲಹಳ್ಳಿ ಘಟಕದ ಅಧ್ಯಕ್ಷ ಎಚ್.ಎಂ. ರವೀಂದ್ರ ನೇತೃತ್ವದಲ್ಲಿ ಸೋಮವಾರ ರಸ್ತೆ ತಡೆ ನಡೆಸಿದರು  ನಂಜನಗೂಡು ತಾಲೂಕು ಹುಲ್ಲಹಳ್ಳಿಯ ಜೆಎಸ್‌ಎಸ್ ಕಾಲೇಜು ಮುಂಭಾಗದಿಂದ ಹೊರಟ ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ ಘೋಷಣೆ ಕೂಗುತ್ತ ದಿ. ಸೋಮಶೇಖರ್ ವೃತ್ತಕ್ಕೆ ಆಗಮಿಸಿ  ರಸ್ತೆ ತಡೆ ನಡೆಸಿದರು. ಸಮಾಜದಲ್ಲಿ ನಡೆಯುವ ಘಟನಾವಳಿಗಳಿಗೆ ಸ್ಪಂದಿಸುವ ಕರವೇ ಬಣದ ಮುಖಂಡರು ಅತ್ಯಾಚಾರ ಪ್ರಕರಣದ ವಿರುದ್ಧದ ಬೃಹತ್ ಚಳವಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ಸಾಥ್ ನೀಡಿದರು. ಕರವೇ ಹುಲ್ಲಹಳ್ಳಿ ಘಟಕದ ಅಧ್ಯಕ್ಷ ಎಚ್.ಎಂ. ರವೀಂದ್ರ, ಮುಖಂಡರಾದ ನಾಗರಾಜು, ಬಸಪ್ಪ, ಸೋಮಣ್ಣ, ಗಣೇಶ, ಆನಂದ್, ಕುಮಾರ್, ಸಮೀವುಲ್ಲಾ, ವಿದ್ಯಾರ್ಥಿನಿಯರಾದ ಶಿಲ್ಪ, ಶಶಿಕಲಾ, ಸೌಮ್ಯ, ಕಾವ್ಯ, ಆಶಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.