ಚಿರತೆ ದಾಳಿಗೆ ಹಸು ಬಲಿ
ಹುಣಸೂರು: ತಾಲೂಕಿನ ಹನಗೋಡು ಹೋಬಳಿ ತಟ್ಟೆಕೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ದೇವೇಂದ್ರ ಎಂಬವವರಿಗೆ ಸೇರಿದ ಹಸು ಬಲಿಯಾಗಿದ್ದು, ಭಾನುವಾರ ಮೇಯಲು ಹಸು ಹಾಗೂ ಕರುವನ್ನು ದೇವೇಂದ್ರ ಬಿಟ್ಟಿದ್ದರು. ಸಂಜೆಯಾದರೂ ಹಸು ಬಾರದಿದ್ದಾಗ ಹುಡುಕಿಕೊಂಡು ಹೋದಾಗ ಊರಿಂದ ಸ್ವಲ್ಪ ದೂರದ ಪಾಳು ಜಾಗದಲ್ಲಿ ಹಸು ಸತ್ತು ಬಿದ್ದಿತ್ತು. ಕರು ಪಾರಾಗಿದೆ. ಈ ಭಾಗದಲ್ಲಿ ಚಿರತೆದಾಳಿ ಹೆಚ್ಚಾಗುತ್ತಿದೆ. ಹಸು, ಕರು, ನಾಯಿಗಳು ಪ್ರತಿದಿನ ಬಲಿಯಾಗುತ್ತಿವೆ. ಸಾರ್ವಜನಿಕರು ಭಯಗೊಂಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೇವೇಂದ್ರ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಭೇರ್ಯ ಶಾಲೆಗೆ ಪ್ರಶಸ್ತಿ
ಭೇರ್ಯ: ಹೊಸ ಅಗ್ರಹಾರ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಭೇರ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇತ್ತೀಚಿಗೆ ಗಂಧನಹಳ್ಳಿ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲಾ ಶಾಲೆಗಳಿಗಿಂತ ಭೇರ್ಯ ಶಾಲೆಯ ಬಾಲಕಿಯರು ಮೆಲುಗೈ ಸಾಧಿಸಿ ಸಮಗ್ರ ಪ್ರಶಸ್ತಿ ಪಡೆದು ಮತ್ತು ಶಾಲೆಯ ವಿದ್ಯಾರ್ಥಿ ಕವಿತಚೌಧರಿ ವೈಯಕ್ತಿಕ ಚಾಂಪಿಯನ್ ಪಡೆದಿರುವುದು ನಮ್ಮ ಶಾಲೆಗೆ ಒಳ್ಳೆಯ ಹೆಸರು ಬಂದಿದೆ ಎಂದು ದೈಹಿಕ ಶಿಕ್ಷಕಿ ಪುಷ್ಪಾವತಿ ತಿಳಿಸಿದರು. ಬಾಲಕಿಯರಲ್ಲಿ ಕವಿತಾ ಚೌಧರಿ, ಯೋಗೇಶ್ವರಿ, ಪ್ರಮೋದಿನಿ, ಗೀತಾ, ಸಾನೀಯ ಹಾಗೂ ಬಾಲಕರಲ್ಲಿ ನಂದೀಶ, ಕಿರಣ, ಚಂದುವಿಗೆ ಬಹುಮಾನ ಬಂದಿದೆ. ಮುಖ್ಯಶಿಕ್ಷಕ ವೆಂಕಟೇಶ್ ಮಾರ್ಗದರ್ಶನ ನೀಡಿದ್ದರು. ಇವರನ್ನು ಸಹಶಿಕ್ಷಕಿಯರಾದ ಪವಿತ್ರಾ, ಮಂಜುಳಾಂಭ, ಗೋಪಿಕಾಂಭ, ಶ್ರುತಿ ಅಭಿನಂದಿಸಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಸಜ್ಜು
ಹುಣಸೂರು: ಪಟ್ಟಣದಲ್ಲಿ ಪ್ರಥಮ ಬಾರಿಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುನೇಶ್ವರ ಕಾವಲು ಮೈದಾನದಲ್ಲಿ ಆ.6ಕ್ಕೆ ನಡೆಯಲಿದೆ. ಹುಣಸೂರು ಕೃಷ್ಣಮೂರ್ತಿ ಹಾಗೂ ಚದುರಂಗರ ಜ್ಞಾಪಕರ್ತ ವೇದಿಕೆ ಮತ್ತು ಮಹಾಧ್ವರ ನಿರ್ಮಿಸಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ನಟರಾಜ ಸ್ವಾಮಿಗಳು, ಅಧ್ಯಕ್ಷರಾದ ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಹುಣಸೂರು ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಉಮಾಪತಿ ಅವರ ನೇತೃತ್ವದಲ್ಲಿ ವಿವಿಧ ಜನಪರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಹುಣಸೂರಿನ ಜೀವ ನದಿ ಲಕ್ಷ್ಮಣತಿರ್ಥ ನದಿ, ತಾಲೂಕಿನ ಕೆರೆಗಳ ರಕ್ಷಣೆ, ಹುಣಸೂರು ಪುರಸಭೆಯನ್ನು ನಗರಸಭೆಯಾಗಿ ಪರವರ್ತಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ತಾಲೂಕಿನ 30 ಗ್ರಾಪಂಗಳಿಗೆ ವಿಶೇಷ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಕಾರ್ಯ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವುದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ವಸತಿ ರಹಿತರಿಗೆ ವಿಶೇಷ ಯೋಜನೆ ರೂಪಿಸಿ ಸರ್ಕಾರದಿಂದ ಮನೆಗಳನ್ನು ನಿರ್ಮಿಸುವುದು, ಆದಿವಾಸಿ ಬುಡಕಟ್ಟುಗಳ ಅರಣ್ಯ ಹಕ್ಕು ಮತ್ತು ಗುಣಮಟ್ಟ ಶಿಕ್ಷಣಕ್ಕೆ ಸರ್ಕಾರ ಗಮನಹರಿಸಲು ವಿನಂತಿಸುವುದು ಕುರಿತಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಪ್ರಾಸ್ತಾಪಿಸುವುದಾಗಿ ಡೀಡ್ ಸಂಸ್ಥೆ ಸಂಚಾಲಕ ಹಾಗೂ ಕಸಾಪ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.
ಮೀನುಗಾರರಿಗೆ ಸಲಕರಣೆ ವಿತರಣೆ
ಕೆ.ಆರ್. ನಗರ: ಸರ್ಕಾರದ ಸವಲತ್ತು ಪಡೆದುಕೊಳ್ಳುವವರು ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ರಾಜ್ಯ ವಲಯ ಯೋಜನೆಯಡಿ ಮೀನುಗಾರರಿಗೆ ಉಚಿತ ಹರಿಗೋಲು, ಬಲೆ ಮತ್ತು ಇತರೆ ಮೀನುಗಾರಿಕಾ ಸಾಧನಗಳನ್ನು ವಿತರಿಸಿ ಮಾತನಾಡಿದರು. ಜಿಪಂ ಸದಸ್ಯ ಸಿ.ಜೆ. ದ್ವಾರಕೀಶ್, ತಾಪಂ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ಲಕ್ಷ್ಮೀಕನಕರಾಜು, ಸದಸ್ಯರಾದ ಮೇಲೂರು ಕೃಷ್ಣೇಗೌಡ, ನಾಗಣ್ಣ, ಪುರಸಭಾ ಸದಸ್ಯ ಕೆ.ಎಲ್. ಜಗದೀಶ್, ತಾಪಂ ಇಒ ಸಿದ್ದಲಿಂಗಮೂರ್ತಿ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಭವಾನಿ, ಮುಖಂಡರಾದ ಹೊಸೂರು ಬಿ. ರಮೇಶ್, ಬಡಕನಕೊಪ್ಪಲು ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

