ಮೈಸೂರು

ಸಾಲುಂಡಿಯಲ್ಲಿ ಶುದ್ಧ ನೀರಿನದೇ ಸಮಸ್ಯೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮೇ 24
ಮೈಸೂರು ತಾಲೂಕು ಡಿ. ಸಾಲುಂಡಿ ಗ್ರಾಮವು ಕಳೆದ ಒಂದು ತಿಂಗಳಿಂದ ನೀರಿನ ಕೊರತೆಯಿಂದ ಬಳಲುತ್ತಿದೆ. ಇದೀಗ ಡೆಂಘೀ ರೂಪದಲ್ಲಿ ಬಂದೆರಗಿದ ಜವರಾಯನ ಅಟ್ಟಹಾಸದಿಂದ ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಅಲ್ಲದೆ, ಡೆಂಘೀಗೆ ಮೂಲ ಕಾರಣವೇ ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ಅನೈರ್ಮಲ್ಯತೆ.
ಮೈಸೂರು ತಾಲೂಕು ಜಯಪುರ ಹೋಬಳಿಯ ಡಿ. ಸಾಲುಂಡಿ ದೊಡ್ಡ ಗ್ರಾಮ. ಇಲ್ಲಿ 800 ಮನೆಗಳಿವೆ. ಕುರುಬ, ನಾಯಕ, ವಿಶ್ವಕರ್ಮ, ಮಡಿವಾಳ ಸಮಾಜಕ್ಕೆ ಸೇರಿದ ಒಟ್ಟು 5000 ಕ್ಕಿಂತ ಹೆಚ್ಚು ಮಂದಿ ವಾಸ ಮಾಡುತ್ತಿದ್ದಾರೆ. ಇಲ್ಲಿನ ಬಹುತೇಕ ಮಂದಿ ಕೃಷಿಯನ್ನೇ ತಮ್ಮ ಮೂಲ ಕಸುಬನ್ನಾಗಿ ಮಾಡಿಕೊಂಡಿದ್ದು, ಕೂಲಿ ಕಾರ್ಮಿಕರು ಹಾಗೂ ಸರ್ಕಾರಿ ಉದ್ಯೋಗಿಗಳು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಇತ್ತೀಚೆಗೆ ತಲೆ ಎತ್ತಿದ ರಿಯಲ್ ಎಸ್ಟೇಟ್‌ನಿಂದ ಕೆಲವರು ತಮ್ಮ ಜಮೀನನ್ನು ಕಳೆದುಕೊಂಡು ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ. ಗ್ರಾಮದ ಹಳೆಯ ತಲೆಮಾರಿನವರನ್ನು ಹೊರತುಪಡಿಸಿದರೆ ಶೇ. 85 ರಷ್ಟು ಮಂದಿ ಶಿಕ್ಷಿತರಾಗಿದ್ದಾರೆ.
ಹೀಗೆ ಸಮತೋಲಿತ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನಕ್ಕೆ ಬೇಸಿಗೆ ಸಂದರ್ಭದಲ್ಲಿ ನೀರಿನದ್ದೆ ಸಮಸ್ಯೆಯಾಗಿದೆ. ಗ್ರಾಮದಲ್ಲಿ ಐದು ಕೊಳವೆ ಬಾವಿಗಳಿದ್ದು, ಅಲ್ಲಿಂದ ವಿದ್ಯುತ್‌ಚಾಲಿತ ಪಂಪುಗಳ ಮೂಲಕ ನೀರೆತ್ತಿ ಸಂಗ್ರಹಿಸಲು ನಾಲ್ಕು ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಮೂರು ತೀರಾ ಹಳೆಯದಾಗಿದ್ದು, ಒಂದು ಟ್ಯಾಂಕ್‌ಅನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ಈ ಐದು ಕೊಳವೆ ಬಾವಿಗಳ ಪೈಕಿ ಮೂರರಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಹಾಗಾಗಿ ಮೂರು ಟ್ಯಾಂಕುಗಳು ನೀರಿಲ್ಲದೆ ಸ್ತಬ್ಧವಾಗಿವೆ. ಜತೆಗೆ ಮೂರು ಬೋರ್‌ವೆಲ್‌ಗಳಿದ್ದು, ಅವು ಕೂಡ ಹಲುವ ದಿನಗಳಿಂದ ಸದ್ದು ಮಾಡುತ್ತಿಲ್ಲ.
ಇದರಿಂದ ನೀರಿನ ಸಮಸ್ಯೆ ತಲೆದೋರಿದ್ದು, ಪ್ರತಿ ಬೀದಿಗೂ 15 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದರು. ಫಲಿತಾಂಶ ಬಂದ ನಂತರ ಈ ಊರನ್ನೇ ಮರೆತರು. ನೀರು ಬಿಟ್ಟ ಸಮಯದಲ್ಲಿ, ಆಗೀಗ ಬಂದು ಹೋಗುವ ಟ್ಯಾಂಕರ್‌ಗಳಲ್ಲಿ ಈ ಗ್ರಾಮದ ಜನರು ನೀರು ಪಡೆದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಒಂದು ಬಾರಿ ನೀರನ್ನು ಸಂಗ್ರಹಿಸಿದರೆ ಕಡಿಮೆಯೆಂದರೂ ಹನ್ನೆರಡು ದಿನಗಳ ಕಾಲ ಬಳಸುತ್ತಾರೆ.
ಇದೇ ಶಾಪವಾಯಿತೆ?: ಹೀಗೆ ಒಂದು ಬಾರಿ ಶೇಖರಿಸಿಕೊಟ್ಟುಕೊಂಡ ನೀರೇ ಈಗಿನ ಪರಿಸ್ಥಿತಿಗೆ ಶಾಪವಾಗಿದೆ. ಪ್ರತಿ ಮನೆಯಲ್ಲೂ ಒಂದೊಂದು ನೀರಿನ ಡ್ರಮ್‌ಗಳಿವೆ. ಒಂದು ಬಾರಿಗೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಜನರು ವಾರಪೂರ್ತಿ ಬಳಸುತ್ತಾರೆ. ಬಳಸುವಾಗ ಡ್ರಮ್ ಮುಚ್ಚದಿರುವ ಕಾರಣ ಸೊಳ್ಳೆಗಳು ತಮ್ಮ ಆವಾಸ ಸ್ಥಾನವನ್ನು ಡ್ರಮ್, ನೀರಿನ ತೊಟ್ಟಿಗಳಲ್ಲಿ ಕಂಡುಕೊಂಡಿವೆ. ಈಡಿಸ್ ಸೊಳ್ಳೆಗಳು ನೀರಿನಲ್ಲಿ ಮೊಟ್ಟೆ ಇಟ್ಟು ಮರಿಯನ್ನಾಗಿಸಿ ದಢೂತಿಯಾಗಿ ಬೆಳೆದು ಹಗಲು ಹೊತ್ತಿನಲ್ಲಿ ಕಚ್ಚುವ ರೂಢಿ ಬೆಳೆಸಿಕೊಂಡಿವೆ.
ಚಿಂತನೆ ಕೊರತೆ: ಊರಿನಲ್ಲಿ ಶಿಕ್ಷಿತರು, ಹಣವಂತರು ಸಾಕಷ್ಟಿದ್ದರೂ ಸಾಮೂದಾಯಿಕ ಚಿಂತನೆ ಇಲ್ಲದೆ ಸೊರಗಿದ್ದಾರೆ. ಯಾರಾದರೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರೂ ಕೇಳಿಸಿಕೊಳ್ಳುವ ವ್ಯವಧಾನವಿಲ್ಲ. ಗ್ರಾಪಂಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಆಗಾಗ ನಾಪತ್ತೆಯಾಗುತ್ತಾರೆ. ಇನ್ನು ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿರುವುದು ಗ್ರಾಪಂ ಗಮನಕ್ಕೆ ಇನ್ನು ಬಂದಿಲ್ಲ ಎಂಬುದು ನೋಡಿದವರಿಗೆ ಗೊತ್ತಾಗುತ್ತದೆ.
ಆರೋಗ್ಯ ಕೇಂದ್ರವಿಲ್ಲ: ಇಷ್ಟು ದೊಡ್ಡ ಊರಿನಲ್ಲಿ ಶಾಲೆಗಳು ಎರಡ್ಮೂರಿವೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಂತಾಗಿದೆ. ಖಾಸಗಿ ಆಸ್ಪತ್ರೆಗಳು ಎರಡಿದ್ದು, ವೈದ್ಯರು ಬೆಳಗ್ಗೆ, ಸಂಜೆ ಬಂದು ಹೋಗುತ್ತಾರೆ. ಏನಾದರೂ ತುರ್ತು ಚಿಕಿತ್ಸೆ ಪಡೆಯಬೇಕೆಂದರೂ ಪಕ್ಕದ ಜಯಪುರಕ್ಕೆ ಹೋಗಬೇಕಾಗುತ್ತದೆ. ಅಲ್ಲಿ 24್ಗ7 ಮಾದರಿಯಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಚಿಕಿತ್ಸಾ ಕೇಂದ್ರವಿದೆ. ಅಲ್ಲಿ ಪ್ರಸೂತಿ ವೈದ್ಯೆ, ಮಕ್ಕಳತಜ್ಞರು, ದಂತ ವೈದ್ಯರು ಸೇರಿದಂತೆ ಒಟ್ಟು ನಾಲ್ಕು ಮಂದಿ ವೈದ್ಯರಿದ್ದಾರೆ. ಜಯಪುರ ಹೋಬಳಿಯ ಡಿ. ಸಾಲುಂಡಿ, ಕೆರೆಹುಂಡಿ, ದೊಡ್ಡಹುಂಡಿ, ಮಾವಿನಹಳ್ಳಿ, ದಾರೀಪುರ, ಬರಡನಪುರದ ಗ್ರಾಮಸ್ಥರು ಬಂದು ಹೋಗುವುದರಿಂದ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಲ್ಲಿನ ವೈದ್ಯರು.
ಇಷ್ಟೆಲ್ಲಾ ಸಮಸ್ಯೆಯಿಂದ ಬಳಲುತ್ತಿರುವ ಡಿ. ಸಾಲುಂಡಿ ಗ್ರಾಮಕ್ಕೆ ಜನಪ್ರತಿನಿಧಿಗಳ ಕರುಣೆ ಬೇಕಾಗಿದೆ. ಅಗತ್ಯಕ್ಕೊಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮರ್ಪಕ ನೀರಿನ ವಿತರಣೆ, ಗ್ರಾಮ ನೈರ್ಮಲ್ಯದ ಅವಶ್ಯಕತೆ ಇದೆ. ಈಗ ನಾಲ್ಕು ಮಕ್ಕಳು ಡೆಂಘೀಗೆ ಬಲಿಯಾಗಿದ್ದು, ಮತ್ತಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ಗ್ರಾಮದ ಪೋಷಣೆಗೆ ಮುಂದಾಗಬೇಕಿದೆ.

- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.