ಮೈಸೂರು

ಮರಕ್ಕೆ ಬೈಕ್ ಡಿಕ್ಕಿ: ಬಾಲಕ ಸಾವು

Published On :

ಮೈಸೂರು: ಬಾಲಕನೊಬ್ಬ ದ್ವಿಚಕ್ರವಾಹನ ಓಡಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆಸಿ, ಗಾಯಗೊಂಡು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮಂಡ್ಯ ಜಿಲ್ಲೆ ಹಲ್ಲೇಗೆರೆ ನಿವಾಸಿ ಬಾಲಸುಬ್ರಹ್ಮಣ್ಯ ಎಂಬವರ ಪುತ್ರ ಚಿರಾಗ್ (13) ಮೃತಪಟ್ಟವ. ಈತನು ಬೇಸಿಗೆ ರಜೆಗಾಗಿ ಕುವೆಂಪು ನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ. ಭಾನುವಾರ ಚಿಕ್ಕಮ್ಮನ ದ್ವಿಚಕ್ರವಾಹನ ತೆಗೆದುಕೊಂಡು ಸವಾರಿ ಮಾಡುವ ವೇಳೆ ನಿಯಂತ್ರಣ ತಪ್ಪಿ ಅನಿಕೇತನ ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದ ಚಿರಾಗ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಈ ಸಂಬಂಧ ಕುವೆಂಪುನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ತಲೆ ಮೇಲೆ ಕಲ್ಲು ಹಾಕಿ ಕೊಲೆ
ಮೈಸೂರು: ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಆರ್‌ಎಂಸಿ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ. ನಂಜನಗೂಡು ತಾಲೂಕು ನಿವಾಸಿ ದೇವಯ್ಯ ಎಂಬವರ ಪುತ್ರ ತ್ರಿಮೂರ್ತಿ (35) ಕೊಲೆಯಾದವರು. ಇವರು ತರಕಾರಿ ಸಾಗಿಸುವ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. 3-4 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿಮೂರ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹೀಗಿರುವಾಗ ಆರ್‌ಎಂಸಿ ಬಳಿಯ ಗಣೇಶ ದೇವಸ್ಥಾನದ ಗಲ್ಲಿಯೊಳಗೆ ತ್ರಿಮೂರ್ತಿ ತಲೆ ಮೇಲೆ ಕಲ್ಲು ಹಾಕಿ ಯಾರೋ ಕೊಲೆ ಮಾಡಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏರ್‌ಮನ್ ಆಯ್ಕೆಗೆ ಅರ್ಜಿ ಆಹ್ವಾನ
ಮೈಸೂರು: ಭಾರತೀಯ ವಾಯುಸೇನಾ ಪಡೆಯಲ್ಲಿ ಗ್ರೂಪ್ ಎಕ್ಸ್ (ಟೆಕ್ನಿಕಲ್) ಟ್ರೇಡ್ ಏರ್‌ಮನ್ ಹುದ್ದೆ ಆಯ್ಕೆಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಿಂದ ಏರ್‌ಮನ್‌ಗಳಾಗಿ ಆಯ್ಕೆಯಾಗುವವರ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ವಾಯುಪಡೆಯವರು ಕರ್ನಾಟಕ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ನಡೆಸಲಿದ್ದಾರೆ. 12/2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್ ವಿದ್ಯಾರ್ಹತೆ ಹೊಂದಿರುವ ಕನಿಷ್ಠ ಶೇ.50 ರಷ್ಟು ಅಥವಾ ಇಂಗ್ಲಿಷ್‌ನಲ್ಲಿ ಶೇ.50 ರಷ್ಟು ಅಂಕ ಪಡೆದಿರಬೇಕು. ಅಥವಾ 3 ವರ್ಷದ ಡಿಪ್ಲೋಮಾ ಕೋರ್ಸ್‌ನಲ್ಲಿ ಮೆಕ್ಯಾನಿಕಲ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್‌ಸ್ಟ್ರುಮೆಂಟೇಷನ್ ಟೆಕ್ನಾಲಜಿ, ಇನ್‌ಫಾರ್ಮೇಷನ್ ಟೆಕ್ನಾಲಜಿ ಯಾವುದಾದರೊಂದರಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನಿಂದ ಶೇ.50 ಅಂಕದೊಂದಿಗೆ ಪಡೆದ ಡಿಪ್ಲೋಮಾ ಸರ್ಟಿಫಿಕೇಟ್ ಹಾಗೂ ಇಂಟರ್ ಮಿಡಿಯೇಟ್ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಮೇ 23 ರೊಳಗೆ ದಿ ಪ್ರೆಸಿಡೆಂಟ್, ಸೆಂಟ್ರಲ್ ಏರ್‌ಮನ್ ಸೆಲೆಕ್ಷನ್ ಬೋರ್ಡ್, ಪೋಸ್ಟ್ ಬಾಕ್ಸ್ ನಂ. 11802, ನ್ಯೂ ಡೆಲ್ಲಿ- 110010 ಇವರಿಗೆ ಸಲ್ಲಿಸಬಹುದು. ದೂ. 080- 25592199 ಸಂಪರ್ಕಿಸಬಹುದು. ವೆಬ್‌ಸೈಟ್ www.indianairforce.nic.in ಸಂಪರ್ಕಿಸಿ.

ಸಚಿವಗೆ ಅಭಿನಂದನೆ
ಮೈಸೂರು: ಕಂದಾಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಆಲ್ ಇಂಡಿಯಾ ಅಣ್ಣಾ ಡಿಎಂಕೆ ಪಾರ್ಟಿ ಜಿಲ್ಲಾ ಶಾಖೆಯ ಮಾಜಿ ಕಾರ್ಯದರ್ಶಿ ಎಂ. ಮಾದಯ್ಯ ಅಭಿನಂದಿಸಿದ್ದಾರೆ. ಐದು ಬಾರಿ ಲೋಕಸಭೆ ಸದಸ್ಯರಾಗಿ ಹಾಗೂ ಕೇಂದ್ರ ಆಹಾರ ನಾಗರಿಕ ಸಚಿವರಾಗಿ ಸೇವೆ ಸಲ್ಲಿಸಿ ಈಗ ರಾಜ್ಯ ಕಂದಾಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಅವರು ಹರ್ಷಿಸಿದ್ದಾರೆ.

ಮೈಸೂರಿನಲ್ಲಿ ಮಳೆ
ಮೈಸೂರು: ಮೈಸೂರಿನಲ್ಲಿ ಸೋಮವಾರ ಸಂಜೆ ಮಳೆಯಾಯಿತು. ಗುಡುಗು, ಸಿಡಿಲಿನೊಂದಿಗೆ ಆಗಮಿಸಿದ ಮಳೆರಾಯ ಅರ್ಧಗಂಟೆ ಭೂಮಿ ತಂಪೆರೆದು ಮಾಯವಾದ. ಮಳೆಯಿಂದಾಗಿ ಅಲ್ಲಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದಿವೆ. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದೆ. ಉಳಿದಂತೆ ಯಾವುದೇ ಅನಾಹುತ ಸಂಭವಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.