ಮೈಸೂರು

ಪಿರಿಯಾಪಟ್ಟಣ: ಮತ ಬೇಟೆ ಜೋರು

Published On :

ಕ.ಪ್ರ.ವಾರ್ತೆ ,  ಪಿರಿಯಾಪಟ್ಟಣ ,  ಮೇ 20
ತಾವು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದು ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯೊಳಗೆ ಪಕ್ಷದ ಪ್ರಣಾಳಿಕೆಯಲ್ಲಿನ ಆರೇಳು ಭರವಸೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವೆಂಕಟೇಶ್ ಪರ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಈ ಹಿಂದೆ ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರಿಗಾಗಿ 25 ಕೆಜಿ ಅಕ್ಕಿ ವಿತರಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಅದನ್ನು 4 ಕೆಜಿಗೆ ಇಳಿಸಿ ಬಡವರ ಹೊಟ್ಟೆ ಮೇಲೆ ಬರೆ ಎಳೆದರು. ಅವರಿಗೆ ಬಡವರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಜರಿದರು.
ಉತ್ತಮ ಯೋಜನೆಗಳನ್ನು ಹಾಳು ಮಾಡಿದರು. ಬಡವರ್ಯಾರೂ ಹಸಿವಿನಿಂದಿರಬಾರದು ಎಂಬ ಉದ್ದೇಶದಿಂದ 1ಗೆ 1 ಕೆಜಿ ಅಕ್ಕಿಯಂತೆ 30 ಕೆಜಿ ಅಕ್ಕಿ ವಿತರಣೆಗೆ ತೀರ್ಮಾನ ಮಾಡಿದ್ದೇವೆ. ಇದರಿಂದಾಗಿ 98 ಲಕ್ಷ ಜನರಿಗೆ ಉಪಯೋಗವಾಗಲಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಡವರ ಬಗ್ಗೆ ಇರುವ ಬದ್ಧತೆ ತೋರಿಸುತ್ತದೆ ಎಂದರು.
ಕಣ್ಣೀರಿಗೆ ಕರಗದಿರಿ: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬಂದು ಅಳಬಹುದು. ಅವರ ಕಣ್ಣೀರಿಗೆ ಕರಗದಿರಿ ಎಂದರು. ಇನ್ನು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವುದಿಲ್ಲ. ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷರೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಕೆಜೆಪಿ ಅಭ್ಯರ್ಥಿ ಎಚ್.ಸಿ. ಬಸವರಾಜು ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರನ್ನು ಬೆಂಬಲಿಸಲಿದ್ದಾರೆ. ಹೀಗಿರುವಾಗ ಜೆಡಿಎಸ್‌ಗೆ ಮತ ನೀಡಿದರೆ ಏನೂ ಪ್ರಯೋಜನವಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟೇಶ್ ಅವರನ್ನು ಗೆಲ್ಲಿಸಿದಲ್ಲಿ ಅವರು ದೊಡ್ಡಶಕ್ತಿಯಾಗಲಿದ್ದಾರೆ. ಬಹಳ ವರ್ಷಗಳ ಸ್ನೇಹಿತರಾಗಿದ್ದು ಅವರು ಗೆದ್ದ ಮೇಲೆ ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಎಲ್ಲಾ ರೀತಿಯ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರಲ್ಲದೆ ಕೆ. ವೆಂಕಟೇಶ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಅಭ್ಯರ್ಥಿ ಕೆ. ವೆಂಕಟೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೆ ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯಮಾಡಿದೆ ಎಂದು ಮಾತನಾಡುತ್ತಿದ್ದಾರೆ. ಅವರು ದಲಿತರೊಬ್ಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಿ ನೋಡೋಣ ಎಂದು ಸವಾಲೆಸೆದರು. ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರಿಗೆ ತಪ್ಪು ಸಂದೇಶ ನೀಡುವ ಮೂಲಕ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಹೊರಟಿರುವ ಅವರ ಮಾತುಗಳಿಗೆ ಮತದಾರರು ಕಿವಿಗೊಡದಂತೆ ಹಾಗೂ ತಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್‌ಗೆ ಸೇರ್ಪಡೆ: ಇದೇ ವೇಳೆ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ವಿ.ಜಿ. ಅಪ್ಪಾಜಿಗೌಡ ಹಾಗೂ ಜಹೂರ್ ಅಲಿ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ನಂತರ ತಾಲೂಕಿನ ಬೆಕ್ಕರೆ, ಪಂಚವಳ್ಳಿ, ಸತ್ತೇಗಾಲ, ತಾತನಹಳ್ಳಿ, ಹುಣಸವಾಡಿ, ಆಲನಹಳ್ಳಿ, ಕೊಪ್ಪಾ, ಬೈಲುಕೊಪ್ಪಾ ಮತ್ತಿತರ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು.
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಜಿಪಂ ಸದಸ್ಯೆ ಮಂಜುಳಾ ರಾಜ್, ಕಾವೇರಿ ಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷಣೇಗೌಡ, ಟಿಎಪಿಸಿಎಂ ಅಧ್ಯಕ್ಷ ಪುಟ್ಟರಾಜು, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ಪಪಂ ಸದಸ್ಯೆ ಅನಿತಾಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.