ಮೈಸೂರು

ಸಾಹಿತ್ಯ ಸಮಾಜದ ಸಂವಹನ ಮಾಧ್ಯಮ

Published On :

ಕ.ಪ್ರ.ವಾರ್ತೆ ಮೈಸೂರು ಮೇ 19
ಸಾಹಿತ್ಯವು ವಿಚಾರಧಾರೆಯ ಜತೆಗೆ ಸಮಾಜದ ಸಂವಹನ ಮಾಧ್ಯಮವೂ ಆಗಿದೆ ಎಂದು ಕವಯತ್ರಿ ಡಾ. ಲತಾ ರಾಜಶೇಖರ್ ಹೇಳಿದರು.
ಜಗನ್ಮೋಹನ ಅರಮನೆಯಲ್ಲಿ ರತ್ನಶ್ರೀ ಪ್ರಕಾಶನವು ಭಾನುವಾರ ಏರ್ಪಡಿಸಿದ್ದ ಸಾಹಿತಿ ಹಾಗೂ ಜೆಎಸ್‌ಎಸ್ ದಂತ ಮಹಾವಿದ್ಯಾಲಯದ ಉದ್ಯೋಗಿ ಆರ್. ರವಿಶಂಕರ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮರ್ಥವಾಗಿ ಲೇಖಕ ಅಭಿವ್ಯಕ್ತಗೊಳಿಸಿದಾಗ ಮಾತ್ರ ಆತ ಉತ್ತಮ ಸಾಹಿತ್ಯ ಕೃತಿ ನೀಡಬಲ್ಲ ಹಾಗೂ ಸಮರ್ಥ ಕವಿಯಾಗಬಲ್ಲ. ಅಭಿವ್ಯಕ್ತಿಯೇ ಸಾಹಿತ್ಯದ ಬಹುಮುಖ್ಯ ಆಯಾಮ. ಆದ್ದರಿಂದ ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯ ರಚನೆಯಾಗಬೇಕಿದೆ.
ಸಾಹಿತ್ಯ ಎಂಬುದು ಕೇವಲ ವಿಚಾರಧಾರೆ ಅಥವಾ ಮನರಂಜನೆಯ ವಸ್ತುವಾಗಿ ಉಳಿದಿಲ್ಲ. ಅದೊಂದು ಸಂವಹನ ಮಾಧ್ಯಮವಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಇಂದು ಚುಟುಕು ಸಾಹಿತ್ಯ ಹಾಗೂ ಮಹಾಕಾವ್ಯಗಳ ಸಾಹಿತ್ಯ ಪ್ರವಾಹದಂತೆ ಹರಿದಿದೆ. ಜಗತ್ತಿನ ಯಾವ ಭಾಷೆಯಲ್ಲಿಯೂ ಆಗದ ಸಾಹಿತ್ಯ ಸಂಚಲನ ಹಾಗೂ ಸಾಹಿತ್ಯ ಪ್ರಕಾರಗಳ ಬೆಳವಣಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಆಗಿರುವುದು ಎಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಎಂದರು.
ಗುಂಪುಗಾರಿಕೆ ಸಲ್ಲದು: ಸಾಹಿತ್ಯ ವಲಯದಲ್ಲಿ ಅಕಾಡೆಮಿಕ್ ಅಥವಾ ನಾನ್ ಅಕಾಡೆಮಿಕ್ ಎಂಬ ತಾರತಮ್ಯ ಹಾಗೂ ಗುಂಪುಗಾರಿಕೆ ಸಲ್ಲದು. ಇದರಿಂದಾಗಿ ವ್ಯಕ್ತಿಗತ ನಷ್ಟಕ್ಕಿಂತ ಸಾಹಿತ್ಯದ ಬೆಳಣಿಗೆಗೆ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಆದ್ದರಿಂದ ಈ ಕ್ಷೇತ್ರದಲ್ಲಿರುವ ಗುಂಪುಗಾರಿಕೆ ನಿರ್ಮೂಲನೆಯಾಗಬೇಕು ಹಾಗೂ ಎಲ್ಲರೂ ಒಂದೇ ಕುಟುಂಬದವರಂತೆ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಿಸಿದರು.
ಕೊನೆಯ ಕಥೆ ಕಾದಂಬರಿಯನ್ನು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಹಾಗೂ ಚೈತ್ರಯಾತ್ರೆ ಕವನ ಸಂಕಲನವನ್ನು ಕವಯತ್ರಿ ಡಾ.ಲತಾ ರಾಜಶೇಖರ್ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮವನ್ನು ಸಾಹಿತಿ ಬನ್ನೂರು ಕೆ. ರಾಜು ಉದ್ಘಾಟಿಸಿದರು. ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್, ಬುದ್ಧಿಜೀವಿ ಬಳಗದ ಅಧ್ಯಕ್ಷ ಭೇರ್ಯ ರಾಮಕುಮಾರ್ ಮುಖ್ಯ ಅತಿಥಿಯಾಗಿದ್ದರು. ಸಾಹಿತಿ ಹಾಗೂ ಅಂಕಣಕಾರ ಡಿ.ಎನ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಆರ್. ರವಿಶಂಕರ್ ಇದ್ದರು.

ಸ್ವಂತ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ: ಮುರುಳೇಶ್
ಕ.ಪ್ರ.ವಾರ್ತೆ ಮೈಸೂರು ಮೇ 19
ದೇಶದ ಆಧಾರ ಸ್ತಂಭವಾಗಿರುವ ಯುವಕರು ಮತ್ತು ಮಹಿಳೆಯರು ಸ್ವಂತ ಉದ್ದಿಮೆ ಪ್ರಾರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬಹುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕ ಮುರುಳೇಶ್ ಹೇಳಿದರು. ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಮತ್ತು ಆವಿಷ್ಕಾರ ತಂತ್ರಜ್ಞಾನ ಕೇಂದ್ರದಿಂದ ಏರ್ಪಡಿಸಿದ್ದ ಒಂದು ವಾರದ ಅವಧಿಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ಭಾರತದ ಮುಖ್ಯ ಸಮಸ್ಯೆಗಳಲ್ಲಿ ಒಂದಾಗಿರುವ ನಿರುದ್ಯೋಗ ನಿವಾರಣೆ ಮಾಡುವ ಮೂಲಕ ದೇಶ ಸೇವೆ ಮಾಡಬಹುದು ಎಂದರು.
ಮಾರ್ಕೆಟಿಂಗ್ ಆ್ಯಂಡ್ ಬಿಸಿನೆಸ್ ಡೆವಲಪ್‌ಮೆಂಟ್ ನಿರ್ದೇಶಕ ಸಂದೇಶ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಆಸೆಗಳಿರುತ್ತವೆ. ಆದರೆ, ಕೇವಲ ಆಸೆಗಳಿಂದ ಯಶಸ್ಸು ಸಾಧ್ಯವಿಲ್ಲ. ಆಸೆಯನ್ನು ಬಯಕೆಗಳಾಗಿ ಬದಲಾಯಿಸಿಕೊಂಡವನು ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.