ನೈಸರ್ಗಿಕ ಉತ್ಪನ್ನ ಮೇಳ ಶುರು
ಕ.ಪ್ರ.ವಾರ್ತೆ ಮೈಸೂರು ಮೇ 18
ರಾಸಾಯನಿಕ ವಸ್ತುಗಳ ಲೇಪನದಿಂದ ತಿನ್ನುವ ಆಹಾರ ಕೂಡ ಕಲುಷಿತಗೊಳ್ಳುತ್ತಿದೆ. ಇದರಿಂದ ಹೆಚ್ಚು ಕಾಲ ಬದುಕುತ್ತಿದ್ದ ಮಾನವನವ ವಯಸ್ಸು ಇಳಿಮುಖವಾಗುತ್ತಿದೆ. ಇದನ್ನರಿತ ಸಂಸ್ಥೆಯೊಂದು ನೈಸರ್ಗಿಕ ಕೃಷಿ ಪದ್ಧತಿಗೆ ಒತ್ತು ನೀಡಿ ಸಾವಯವ ಬೇಸಾಯ ಪದ್ಧತಿಯಿಂದ ಬೆಳೆದ ನೈಸರ್ಗಿಕ ಉತ್ಪನ್ನಗಳ ಮೇಳ ಆರಂಭಿಸಿದೆ.
ಕುವೆಂಪುನಗರದ ದಯಾನಂದ ಸರಸ್ವತಿ ರಸ್ತೆಯಲ್ಲಿರುವ ಗ್ರಾಮೀಣ ನ್ಯಾಚುರಲ್ ಮಳಿಗೆಯಲ್ಲಿ ಕೆಂಪಕ್ಕಿ, ಮಾವು, ಹಲಸು ಸೇರಿದಂತೆ ನೈಸರ್ಗಿಕ ಉತ್ಪನ್ನಗಳ ಮೇಳ ಏರ್ಪಡಿಸಲಾಗಿದೆ. ನೈಸರ್ಗಿಕ ಕೃಷಿ ಪದ್ಧತಿಯಿಂದ ಬೆಳೆದ ವಿವಿಧ ಅಕ್ಕಿಗಳ ಜತೆಗೆ ಸ್ವಾದಿಷ್ಟ ಹಣ್ಣುಗಳು ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿವೆ.
ರಾಜಮುಡಿ, ರತ್ನಚೂಡಿ, ಸಣ್ಣವಾಳ್ಯ, ಮಧುಮೇಹ ಅಕ್ಕಿ, ಗೌರಿಸಣ್ಣ, ಸಿದ್ದಸಣ್ಣ, ಗಂಧಸಾಲೆ, ಕರಿಜಡ್ಡು, ಮೈಸೂರು ಸಣ್ಣಕ್ಕಿ, ಅಂಬೆ ಮೊರೆ, ಬರ್ಮಾ ಬ್ಲಾಕ್, ನವರ, ಸೇಲಂಸಣ್ಣ, ರಾಜಭೋಗ ಮುಂತಾದ ಅಕ್ಕಿಯ ರಾಶಿಯೇ ಇದೆ. ಜತೆಗೆ ಮಾವಿನ ತಳಿಯಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಕೇಸರ್, ಬೇಗಂಪಲ್ಲಿ, ದಸೇರಿ, ಸಕ್ಕರೆ ತಳಿಗಳನ್ನು ಪ್ರದರ್ಶನದಲ್ಲಿಡಲಾಗಿದೆ.
ಗ್ರಾಮೀಣ ನ್ಯಾಚ್ಯುರಲ್ ಸಂಸ್ಥೆ ನಡೆಸುತ್ತಿರುವ ಬಿ. ರಾಜು, ಶ್ರೀಧರಮೂರ್ತಿ, ಎನ್. ಪ್ರಸನ್ನ, ತುಕಾರಾಂ, ಮಾರುತಿ ಎಂಬವರು ಪಾಲುದಾರಿಕೆಯಲ್ಲಿ ಈ ಮೇಳವನ್ನು ಆಯೋಜಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿ. ರಾಜು, ಮಾಲಿನ್ಯ ಮುಕ್ತದಿಂದ ಬೆಳೆದ ಆಹಾರ ಪದಾರ್ಥಗಳ ಬಗ್ಗೆ ಪ್ರಚುರಪಡಿಸುತ್ತಿದ್ದೇವೆ. ಹಳ್ಳಿಗಳಿಗೆ ಹೋಗಿ ಸಾವಯವ ಬೇಸಾಯ ಪದ್ಧತಿ ಅನುಸರಿಸುವಂತೆ ರೈತರಿಗೆ ತಿಳಿ ಹೇಳುತ್ತಿದ್ದೇವೆ. ಇಲ್ಲಿಯವರೆಗೆ 60- 70 ರೈತರನ್ನು ಸಾವಯವ ಬೇಸಾಯದತ್ತ ಮುಖ ಮಾಡಲು ಪ್ರಯತ್ನಿಸಿದ್ದೇವೆ ಎಂದರು.
ಜೂ. 1 ರಿಂದ 6ನೇ ಆರ್ಥಿಕ ಗಣತಿ
ಕ.ಪ್ರ.ವಾರ್ತೆ ಮೈಸೂರು ಮೇ 18
ಜಿಲ್ಲಾದ್ಯಂತ 6ನೇ ಆರ್ಥಿಕ ಗಣತಿ ಕಾರ್ಯವನ್ನು ಜೂ.1 ರಿಂದ 30 ರವರೆಗೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ 6ನೇ ಆರ್ಥಿಕ ಗಣತಿ ಕಾರ್ಯಾಚರಣೆಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿರುವ ಸಂಘಟಿತ ಮತ್ತು ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆ ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸಿ, ಕ್ರೋಢೀಕರಿಸಿ, ವರ್ಗೀಕರಿಸಿ ವರದಿ ತಯಾರಿಸುವುದು ಈ ಗಣತಿಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಆರ್ಥಿಕ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 1008 ಗಣತಿ ಬ್ಲಾಕ್ಗಳಿದ್ದು, 1998 ಗಣತಿದಾರರನ್ನು ಹಾಗೂ 998 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಗಣತಿ ಕಾರ್ಯದ ಸಮಗ್ರ ಮೇಲುಸ್ತುವಾರಿ ನೋಡಿಕೊಳ್ಳಲು ಗ್ರಾಮೀಣ ಪ್ರದೇಶಕ್ಕೆ 7 ಚಾರ್ಜ್ ಅಧಿಕಾರಿಗಳನ್ನು, ಪಟ್ಟಣ ಪ್ರದೇಶಕ್ಕೆ 9 ಚಾರ್ಜ್ ಅಧಿಕಾರಿಗಳನ್ನು ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ 17 ಚಾರ್ಜ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಗಣತಿಯ ಕ್ಷೇತ್ರ ಕಾರ್ಯವನ್ನು ಕಿಯೋನಿಕ್ಸ್ ಸಂಸ್ಥೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಒದಗಿಸುವ ಸಿಬ್ಬಂದಿಯಿಂದ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.
ಆರ್ಥಿಕ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಮೇ 21 ರಂದು 24 ಮಾಸ್ಟರ್ ಟ್ರೇನರ್ಗಳಿಗೆ ತರಬೇತಿ ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಒಟ್ಟು 60 ಬ್ಯಾಚುಗಳಲ್ಲಿ ಮೇ 30 ರೊಳಗೆ ನೀಡಲು ಕ್ರಮ ಜರುಗಿಸಲಾಗುವುದು. ಈ ಕಾರ್ಯಕ್ಕೆ ಎಲ್ಲ ಇಲಾಖೆಗಳ ಸಿಬ್ಬಂದಿಯ ಸೇವೆ ಪಡೆಯಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಹಾಗೂ ಗಣತಿ ಕಾರ್ಯಕ್ಕೆ ಅಗತ್ಯವಾಗಿ ಬೇಕಾಗುವ ಸಿಬ್ಬಂದಿ ಒದಗಿಸಬೇಕು.
ರಸ್ತೆ ಬದಿ, ತಳ್ಳುವ ಗಾಡಿ ವ್ಯಾಪಾರ, ವಿವಿಧ ಉದ್ಯಮಗಳು ಸೇರಿದಂತೆ ಒಟ್ಟು 5000 ಆರ್ಥಿಕ ಚಟುವಟಿಕೆಗಳ ಗಣತಿ ಕಾರ್ಯ ಕೈಗೊಳ್ಳಲಾಗುವುದು. ಮನೆ ಮತ್ತು ಉದ್ಯಮ ಪಟ್ಟಿಗಾಗಿ 6ಎ, ಉದ್ಯಮ ಗೋಷ್ವಾರೆಗಾಗಿ 6ಬಿ ಮತ್ತು 8 ಮತ್ತು ಅದಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ಯಮ ಡೈರೆಕ್ಟರಿಗಾಗಿ 6ಸಿ ಅನುಸೂಚಿ ಬಳಸಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ನಗರಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಜಿಪಂ ಹಂಗಾಮಿ ಸಿಇಒ ಎಚ್.ಜಿ. ವಸುಂಧರಾದೇವಿ, ಉಪವಿಭಾಗಾಧಿಕಾರಿ ಬಸವರಾಜ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ತಿಬ್ಬೇಗೌಡ, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ್, ಸಹಾಯಕ ನಿರ್ದೇಶಕ ಬಿ. ಶಿವಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

