33 ಸಾವಿರ ದಂಡ ವಸೂಲಿ
ಕ.ಪ್ರ.ವಾರ್ತೆ , ಹುಣಸೂರು , ಮೇ 17
ಇಲ್ಲಿನ ವಿವಿಧ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಇಂಟರ್ಸೆಪ್ಟರ್ ವಾಹನದ ಮೂಲಕ ಸಂತೆ ದಿನವಾದ ಗುರುವಾರ ಪ್ರಕರಣ ದಾಖಲಿಸಿ 33 ಸಾವಿರ ದಂಡ ವಸೂಲಿ ಮಾಡಿದರು. ಒಟ್ಟು 102 ಪ್ರಕರಣಗಳಲ್ಲಿ 39 ಪ್ರಕರಣಗಳು ಅತಿವೇಗ, 11 ಪ್ರಕರಣ ಚಾಲನಾ ಪರವಾನಗಿ ಹೊಂದದಿರುವುದು ಸೇರಿದ್ದವು. ಉಳಿದಂತೆ ವಿಮೆ, ಮೊಬೈಲ್ ಬಳಕೆ ಸೇರಿದಂತೆ ಪ್ರಕರಣ ದಾಖಲಾಯಿತು.
ಬೆಂಕಿಗೆ ಹುಲ್ಲಿನ ಮೆದೆ ಭಸ್ಮ
ಕ.ಪ್ರ.ವಾರ್ತೆ , ಹುಣಸೂರು , ಮೇ 17
ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿ, ಸಾವಿರಾರು ರು.ಗಳ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಉಯಿ ಗೌಡನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದೆ. ಬಿಳಿಕೆರೆ ಹೋಬಳಿಯ ಉಯಿಗೌಡನಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರಿಗೆ ಸೇರಿದ ಸುಮಾರು 30 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹುಲ್ಲನ್ನು ತಮ್ಮ ಜಮೀನಿನ ಮನೆಯ ಹಿಂಭಾಗ ಇಟ್ಟುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಎರಡರ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹುಲ್ಲು ಭಸ್ಮವಾಗಿದೆ. ಕೂಡಲೇ ಅಕ್ಕಪಕ್ಕದ ರೈತರೆಲ್ಲಾ ಬೆಂಕಿ ನಂದಿಸಲು ನೀರು ಹಾಕಿ ಅಗ್ನಿಶಾಮಕ ದಳಕ್ಕೆ ದೂರು ನೀಡಿದರು. ಅಗ್ನಿ ಶಾಮಕದಳ ಠಾಣಾಧಿಕಾರಿ ಪುಟ್ಟಣ್ಣಶೆಟ್ಟಿ ಮತ್ತು ಸಿಬ್ಬಂದಿ ಬಂದು ಬೆಂಕಿ ಆರಿಸಿದಾದರೂ ಹುಲ್ಲು ಸಂಪೂರ್ಣ ಸುಟ್ಟು ಹೋಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಳೆ ಬರುವ ಸಾಧ್ಯತೆ
ಮೈಸೂರು: ಜಿಲ್ಲೆಯಲ್ಲಿ ಮೇ 18 ರಿಂದ 21 ರವರೆಗೆ ಚದುರಿದಂತೆ ಅಲ್ಲಲ್ಲಿ ತುಂತುರುನಿಂದ ಸಾಧಾರಣ ಮಳೆ ಬರುವ ಸಾಧ್ಯತೆಯಿದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ.
ಮುಂಗಾರು ಮಳೆ ಸಮಯದಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ ಮತ್ತು ಚಪ್ಪೆರೋಗ ಬರುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಬೇಕು. ಸಾಕಷ್ಟು ಮಳೆ ಬಂದಿರುವ ಪ್ರದೇಶಗಳಲ್ಲಿ ಜಮೀನನ್ನು ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ, ಬಿತ್ತನೆಗೆ ಸೂಕ್ತ ರೀತಿಯಲ್ಲಿ ತಯಾರಿಸಿಕೊಳ್ಳುವುದು. ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು. ಉತ್ತಮವಾಗಿ ಮಳೆ ಬಂದಿರುವುದರಿಂದ ಹಸಿರೆಲೆ ಗೊಬ್ಬರಗಳಾದ ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡುವುದು ಎಂದು ಅವರು ಸಲಹೆ ನೀಡಿದ್ದಾರೆ ದೂ. 0821- 2591267 ಸಂಪರ್ಕಿಸಬಹುದು.
ಶ್ರೀರಂಗಪಟ್ಟಣ: ರೈಲು ನಿಲುಗಡೆ ರದ್ದು
ಮೈಸೂರು: ಶ್ರೀರಂಗಪಟ್ಟಣದ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದ ಮೈಸೂರು - ಟ್ಯೂಟಿಕಾರನ್ - ಮೈಸೂರು ಎಕ್ಸ್ಪ್ರೆಸ್ (16732, 16731) ರೈಲುಗಾಡಿಯ ನಿಲುಗಡೆಯನ್ನು ಜು.1 ರಿಂದ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೇಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿ ಜಾಗೃತಿಗೆ ಬೀದಿ ನಾಟಕ
ಮೈಸೂರು: ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ರೂಪಿತವಾಗಿರುವ ಸಹಾಯವಾಣಿ ಕುರಿತು ಅರಿವು ಮೂಡಿಸಲು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮತ್ತು ಚೈಲ್ಡ್ಲೈನ್ ಇಂಡಿಯಾ ಫೌಂಡೇಷನ್ ವತಿಯಿಂದ ಶುಕ್ರವಾರ ನಗರದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.
ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನದ ಅಂಗವಾಗಿ ನಗರದ ಪ್ರಭಾ ಚಿತ್ರಮಂದಿರ ಮುಂಭಾಗ ಮಕ್ಕಳ ರಕ್ಷಣೆ ಕುರಿತಂತೆ ಬೀದಿ ನಾಟಕವನ್ನು ಪ್ರದರ್ಶಿಸಿದ ಆರ್ಎಲ್ಎಚ್ಪಿ ಸಂಸ್ಥೆಯ ಸಿಬ್ಬಂದಿ ಮಕ್ಕಳು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಮೋಸದ ಜಾಲಕ್ಕೆ ಬಲಿಯಾಗುವ ಮಕ್ಕಳು ಕಣ್ಮರೆಯಾಗುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿರುವ ಬಹುಮುಖ್ಯ ಸಂಗತಿಯಾಗಿದೆ. ಇದರಿಂದ ಮಕ್ಕಳನ್ನು ಪಾರು ಮಾಡಲು ಜನರಲ್ಲಿ ಅರಿವಿನ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರು ಸಹ ಮಕ್ಕಳ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲಬೇಕು. ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಲ್ಲಿ 1098 ಸಹಾಯವಾಣಿಗೆ ತಿಳಿಸಬಹುದು ಎಂದು ತಿಳಿ ಹೇಳಲಾಯಿತು.
ಆರ್ಎಲ್ಎಚ್ಪಿ, ಓಡಿಪಿ ಹಾಗೂ ನಿಸರ್ಗ ಫೌಂಡೇಶನ್ ಆಶ್ರಯದಲ್ಲಿ ನಡೆದ ಬೀದಿ ನಾಟಕದಲ್ಲಿ ಆರ್ಎಲ್ಎಚ್ಪಿ ಸಂಸ್ಥೆಯ ಮೋಹನ್, ನಿಂಗರಾಜು, ಯೋಗೇಶ್, ದಾಕ್ಷಾಯಣಿ, ಜ್ಯೋತಿ, ಲೋಕೇಶ್, ಅನಿಲ್, ಧನರಾಜ್, ಅನಸೂಯ ಹಾಗೂ ರೇಣುಕಾ ಇದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಭಿನಂದನೆ
ಮೈಸೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ ಅವರನ್ನು ಯುವರಾಜ ಕಾಲೇಜು ಅಧ್ಯಾಪಕರ ಸಂಘ ಅಭಿನಂದಿಸಿದೆ. ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಕಾಲೇಜಿನ ಪ್ರತಿಯೊಬ್ಬರಿಗೂ ಒಂದು ಐತಿಹಾಸಿಕ ವಿಷಯವಾಗಿದೆ. ತಾವು ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಗೆ, ನಿರೀಕ್ಷೆಗೂ ಮೀರಿದಂತೆ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ, ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ದು, ಉತ್ತುಂಗಕ್ಕೇರಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಸಂಘದ ಕಾರ್ಯದರ್ಶಿ ಡಾ.ಎಂ.ಆರ್. ಜನಾರ್ದನ ಆಶಿಸಿದ್ದಾರೆ.
ಮೂಗೂರು ಅಭಿನಂದನೆ: ಮುಖ್ಯಮಂತ್ರಿಯಾಗಿ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರನ್ನು ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ ಅಭಿನಂದಿಸಿದ್ದಾರೆ.
ಚಿತ್ರಮಂದಿರ ದಶಮಾನೋತ್ಸವ
ಚಾಮರಾಜನಗರ: ನಗರದ ಅತ್ಯುತ್ತಮ ಚಿತ್ರಮಂದಿರವಾದ ಸಿಂಹ ಮೂವೀ ಪ್ಯಾರಡೈಸ್ನ 10ನೇ ವಾರ್ಷಿಕೋತ್ಸವ ಸಮಾರಂಭ ಮೇ 22ರಂದು ನಡೆಯಲಿದೆ ಎಂದು ಚಿತ್ರಮಂದಿರದ ಮಾಲೀಕ ಎ. ಜಯಸಿಂಹ ತಿಳಿಸಿದರು. ನಗರದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರಮಂದಿರ ಪ್ರಾರಂಭಗೊಂಡು ಮೇ 22ಕ್ಕೆ ಹತ್ತು ವರ್ಷವಾಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ 11 ಗಂಟೆಗೆ ಚಿತ್ರಮಂದಿರದ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ಸಮಾರಂಭ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಹಿಸಲಿದ್ದು, ಗುಂಡ್ಲುಪೇಟೆ ಶಾಸಕ ಎಚ್.ಎಸ್. ಮಹದೇವಪ್ರಸಾದ್ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಉಚಿತವಾಗಿ ಡಾ. ರಾಜ್ ಅಭಿನಯದ ಭಕ್ತ ಪ್ರಹ್ಲಾದ ಚಿತ್ರ ಪ್ರದರ್ಶಿಸಲಾಗುವುದು ಎಂದರು.
ಬೇಗೂರಲ್ಲಿ ಬಸವ ಜಯಂತಿ ಆಚರಣೆ
ಗುಂಡ್ಲುಪೇಟೆ: ತಾಲೂಕಿನ ಬೇಗೂರಿನಲ್ಲಿ ಬಸವ ಜಯಂತಿ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಯಿತು. ಗ್ರಾಮದ ಹೊರವಲಯದ ಬಂಡಿಗೆರೆ ಮಾದಪ್ಪನ ದೇವಸ್ಥಾನದಿಂದ ಬಸವೇಶ್ವರರ ಭಾವಚಿತ್ರ ಹೊತ್ತ ಪಲ್ಲಕ್ಕಿ ಮೆರವಣಿಗೆ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂದಿ ಕಂಭ ಹಾಗು ವೀರಭದ್ರ ಕುಣಿತದೊಂದಿಗೆ ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಬೇಗೂರಿನ ಗುರುಕಾರ್ ಮಹೇಶ್, ಮಂಜಶೆಟ್ಟಿ, ಕಮರಹಳ್ಳಿ ಮಂಜು, ಎಸ್.ಮಲ್ಲಿಕಾರ್ಜುನಸ್ವಾಮಿ, ರಂಗೂಪುರ ಸಂತೋಷ್, ರಾಮಣ್ಣ, ಬೆಳಲವಾಡಿ ರೇವಣ್ಣ, ಗುಂಡಪ್ಪ, ಪದ್ದು, ಮಲ್ಲಿಕಾ, ಶ್ರೀಕಂಠಪ್ಪ ಇತರೆ ಗ್ರಾಮಸ್ಥರು ಇದ್ದರು.
ಸಚಿವ ಸ್ಥಾನ ನೀಡಲು ಆಗ್ರಹ
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆಯಾಗಿರುವ ಅತ್ಯಂತ ಹಿಂದುಳಿದ ಉಪ್ಪಾರ ಜನಾಂಗದ ಮುಖಂಡ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ನಗರಸಭಾ ಸದಸ್ಯ ಸಿ.ಬಂಗಾರು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಜನಾಂಗದ ಸುಮಾರು 35 ಲಕ್ಷ ಮಂದಿ ಕಾಂಗ್ರೆಸ್ ಬೆಂಬಲಿಸ್ದಿದ್ದು, ಜನಾಂಗದ ಏಕೈಕ ಪ್ರತಿನಿಧಿಯಾಗಿರುವ ಪುಟ್ಟರಂಗಶೆಟ್ಟರಿಗೆ ಸಚಿವ ಸ್ಥಾನ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಮಂಜುನಾಥ್ಗೆ ಸಚಿವ ಸ್ಥಾನ ನೀಡಿ
ಹುಣಸೂರು: ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಚ್.ಪಿ. ಮಂಜುನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಮತ್ತು ಪಕ್ಷದ ವರಿಷ್ಠರಲ್ಲಿ ಮುಖಂಡರಾದ ಗೌರಿಪುರ ಮಹದೇವ್ ಮತ್ತು ಸುರೇಂದ್ರ ಒತ್ತಾಯಿಸಿದ್ದಾರೆ.
ವೃತ್ತಿಪರ ಮಾರ್ಗದರ್ಶನ
ಹುಣಸೂರು: ಇಲ್ಲಿನ ಜೀನಿಯಸ್ ಕೋಚಿಂಗ್ ಸೆಂಟರ್ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕ ವಿಶ್ವನಾಥ ಭರಣಿ ಅವರ ಮಾರ್ಗದರ್ಶನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಉತ್ತೀರ್ಣರಾದ ಹಾಗೂ ಅನುತ್ತೀರ್ಣರಾದ ಯುವ ವಿದ್ಯಾರ್ಥಿಗಳಿಗೆ ಮತ್ತು ಡಿ.ಇಡಿ, ಬಿ.ಇಡಿ ಮತ್ತಿತರ ಕೋರ್ಸ್ಗಳನ್ನು ಪೂರೈಸಿದ ನಿರುದ್ಯೋಗಿಗಳಿಗೆ ಒಂದು ದಿನದ ಉಚಿತ ವೃತ್ತಿಪರ ಮಾರ್ಗದರ್ಶನ ಏರ್ಪಡಿಸಿದೆ. ಮೇ 19ರ ಬೆಳಗ್ಗೆ 10ಕ್ಕೆ ರೋಟರಿ ಭವನದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಆಸಕ್ತರು 9945315404 ಸಂಪರ್ಕಿಸಬಹುದು.
ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಬನ್ನೂರು: ಬನ್ನೂರು- ವಾಜಮಂಗಲ ಎಸ್ಎಫ್ಸಿ ಲೈನ್ನ ತುರ್ತು ಕಾಮಗಾರಿ ಇರುವುದರಿಂದ ಮೇ 18ರ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಬನ್ನೂರು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಬನ್ನೂರು ಪುರಸಭೆ ವ್ಯಾಪ್ತಿ, ಕೊಡಗಳ್ಳಿ ಗ್ರಾಪಂ, ಬಿ.ಸಿ. ಹಳ್ಳಿ ಗ್ರಾಪಂ, ಬೀಡನಹಳ್ಳಿ ಗ್ರಾಪಂ, ಹನುಮನಾಳು ಗ್ರಾಪಂ, ಅಂಕನಹಳ್ಳಿ ಗ್ರಾಪಂ, ಹೆಗ್ಗೂರು ಗ್ರಾಪಂ, ಮಲಿಯೂರು ಗ್ರಾಪಂ, ಅತ್ತಳ್ಳಿ ಗ್ರಾಪಂ, ಕೇತುಪುರ ಗ್ರಾಪಂ, ರಂಗಸಮುದ್ರ ಗ್ರಾಪಂ, ತುಂಬಲ ಗ್ರಾಪಂ ಮತ್ತು ಚಿದ್ರವಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು ಮತ್ತು 66 ಕೆ.ವಿ ನಂಜಾಪುರ ಏತ ನೀರಾವರಿ ಸ್ಥಾವರದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಇಇ ಮನವಿ ಮಾಡಿದ್ದಾರೆ.
ಸಾಲ ಮನ್ನಾ ಮಾಡಲು ಆಗ್ರಹ
ಹುಣಸೂರು: ಬರದಿಂದ ತತ್ತರಿಸಿರುವ ರೈತರ ಎಲ್ಲ ಸಾಲ ಮನ್ನಾ ಮಾಡುವಂತೆ ಮುಖ್ಯಮಂತ್ರಿಯವರನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ಗೆ ಒತ್ತಾಯಿಸಿದ್ದಾರೆ. ಕಳೆದ ಎರಡು ವರ್ಷದಿಂದ ರಾಜ್ಯಾದ್ಯಂತ ರೈತರು ಬರದಿಂದ ತತ್ತರಿಸಿ ಬ್ಯಾಂಕ್ಗಳಿಂದ ಪಡೆದ ಸಾಲ ಕಟ್ಟಲಾರದೆ, ಪುನಃ ಹೊಸ ಸಾಲ ಪಡೆಯಲಾರದ ಸ್ಥಿತಿಗೆ ತಲುಪಿದ್ದು, ಮತ ಗಳಿಕೆಗಾಗಿ ಕೆಲವೊಂದು ವರ್ಗದ ಸಾಲವನ್ನು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನ್ನಾ ಮಾಡಿದ್ದು, ಇದರ ಜೊತೆಗೆ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಘೋಷಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ರೈತ ಸಂಘದ ಗೌರವಾಧ್ಯಕ್ಷ ನಾಗಣ್ಣಾಚಾರ್ ಇದ್ದರು.
ಮೈಸೂರಿನಿಂದ ಯಶವಂತಪುರ ರೈಲು
ಮೈಸೂರು: ಬೆಂಗಳೂರು ಸಿಟಿ - ಮೈಸೂರು ಎಕ್ಸ್ಪ್ರೆಸ್ ವಿಶೇಷ (ಸಂಖ್ಯೆ 06222) ಹಾಗೂ ಮೈಸೂರು - ಬೆಂಗಳೂರು ಸಿಟಿ- ಮೈಸೂರು (06221) ರೈಲುಗಾಡಿಯು ಯಶವಂತಪುರ ರೈಲು ನಿಲ್ದಾಣದವರೆಗೆ ಸಂಚಾರವನ್ನು ವಿಸ್ತರಿಸಲಾಗಿದೆ. ಮಧ್ಯಾಹ್ನ 1.30 ಕ್ಕೆ ಅಲ್ಲಿಂದ ಹೊರಟು, ಮೈಸೂರನ್ನು ಸಂಜೆ 5. 15ಕ್ಕೆ ತಲುಪಲಿದೆ. ಅಂತೆಯೇ ಮೈಸೂರಿನಿಂದ ಬೆಳಗ್ಗೆ 8.15 ಕ್ಕೆ ಬಿಡುವ ರೈಲು ಯಶವಂತಪುರ ನಿಲ್ದಾಣವನ್ನು ಬೆಳಗ್ಗೆ 11.25 ಕ್ಕೆ ತಲುಪಲಿದೆ ಎಂದು ನೈಋತ್ಯ ರೇಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
21ಕ್ಕೆ ದಸಂಸ ಜಿಲ್ಲಾ ಸಮಿತಿ ಸಭೆ
ಮೈಸೂರು: ದಸಂಸ ವತಿಯಿಂದ ಇಲ್ಲಿನ ಚಾಮುಂಡಿ ಅತಿಥಿಗೃಹದಲ್ಲಿ ಮೇ 21ರ ಬೆಳಗ್ಗೆ 11ಕ್ಕೆ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ಸಭೆ ಕರೆಯಲಾಗಿದೆ. ತಾಲೂಕು ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಸಂಚಾಲಕ ಶಿವಕುಮಾರ್ ಮನವಿ ಮಾಡಿದ್ದಾರೆ.
ರೈಲು ಸಂಚಾರ ರದ್ದು
ಮೈಸೂರು ವಿಭಾಗಕ್ಕೆ ಸೇರಿರುವ ಅರಸೀಕೆರೆ ಜಂಕ್ಷನ್ ಎರಡನೇ ಹಂತದ ರೈಲು ಹಳಿಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರಸೀಕೆರೆ - ಬೀರೂರು ನಡುವೆ ಸಂಚರಿಸುತ್ತಿದ್ದ ಕೆಲವು ರೈಲುಗಳನ್ನು ರದ್ದು ಪಡಿಸಲಾಗಿದೆ. ಅರಸೀಕೆರೆ - ಮೈಸೂರು ಪ್ಯಾಸೆಂಜರ್ (ಸಂಖ್ಯೆ 56265) ಮೇ 20 ರಿಂದ 22 ರವರೆಗೆ, ಅರಸೀಕೆರೆ - ಮೈಸೂರು ಪ್ಯಾಸೆಂಜರ್ ( 56267) 20 ರಿಂದ 22 ರವರೆಗೆ, ಅರಸೀಕೆರೆ - ಮೈಸೂರು ಪ್ಯಾಸೆಂಜರ್ (ಸಂಖ್ಯೆ 56266) ಮೇ 20 ರಿಂದ 22 ರವರೆಗೆ ಸಂಚರಿಸುವುದಿಲ್ಲ ಎಂದು ನೈಋತ್ಯ ರೇಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸಾಮೂಹಿಕ ವಿವಾಹ
ಮೈಸೂರು: ನಂಜನಗೂಡು ತಾಲೂಕಿನ ದೇವನೂರಿನ ಶ್ರೀ ಗುರುಮಲ್ಲೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀ ಮನ್ನಿರಂಜನ ಗುರುಮಲ್ಲೇಶ್ವರ ಸ್ವಾಮೀಜಿಗಳ 114ನೇ ವಾರ್ಷಿಕ ಸಂಸ್ಮರಣ ಆರಾಧನಾ ಮಹೋತ್ಸವದ ಅಂಗವಾಗಿ ಜೂ.27ರಂದು ವೀರಶೈವ ವಧು-ವರರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದೆ ಎಂದು ಸಮಿತಿ ಕಾರ್ಯದರ್ಶಿ ಡಿ.ಎಸ್. ಸದಾಶಿವಮೂರ್ತಿ ಹೇಳಿದ್ದಾರೆ. ಮದುವೆಯಾಗುವ ಅರ್ಹ ಜೋಡಿಗಳಿಗೆ ಉಚಿತವಾಗಿ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ, ಷರ್ಟ್, ಪಂಚೆ, ವಲ್ಲಿಗಳನ್ನು ನೀಡಲಾಗುತ್ತದೆ. ಜೂ.5ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮೊ. 9164416976 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

