ಇನ್ನು 10 ದಿನ ಮಾತ್ರ ನೀರು!
ಕ.ಪ್ರ.ವಾರ್ತೆ , ಮೈಸೂರು , ಮೇ 17
ಕೃಷ್ಣರಾಜ ಸಾಗರ ಜಲಾಶಯ ನೀರಿಲ್ಲದೆ ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ತೀವ್ರ ಬವಣೆ ಎದುರಿಸುವ ಸಂಕಷ್ಟ ಎದುರಾಗಿದೆ.
ಬೇಸಿಗೆ ಕಾಲದಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗುವುದು ಸಹಜ. ಆದರೆ ಈ ಬಾರಿ ಎಂದೆಂದೂ ಕಾಣದಂತಹ ಕುಸಿತ ಉಂಟಾಗಿ ಕೆಆರ್ಎಸ್ನ ಒಡಲು ಬರಿದಾಗಿರುವ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ಕಾವೇರಿ ನೀರನ್ನು ಆಶ್ರಯಿಸಿದ್ದ ಪ್ರದೇಶದ ಜನರು ಕುಡಿಯುವ ನೀರಿಗೆ ಆತಂಕ ಪಡುವಂತಾಗಿದೆ.
ಇಲ್ಲಿನ ನಗರದ ಜನಸಂಖ್ಯೆ 15 ಲಕ್ಷವಿದ್ದು, ನಿತ್ಯ ಕುಡಿಯುವ ನೀರಿನ ಅವಶ್ಯಕತೆಗೆ ಕನಿಷ್ಠ 200 ಎಂಎಲ್ಡಿ ನೀರು ಅಗತ್ಯವಿದೆ. ಬೇಡಿಕೆಗಿಂತ 100 ಎಂಎಲ್ಡಿ ಕಡಿಮೆ ಪ್ರಮಾಣ ದೊರೆಯುತ್ತಿರುವುದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಬೆಳಗೊಳ 1ನೇ ಹಂತದಿಂದ ನೀರು ದೊರೆಯುವ ಸಾಮರ್ಥ್ಯ 13.5 ಎಂಎಲ್ಡಿ, ಆದರೆ ಈಗ ಲಭ್ಯ 0 ಎಂಎಲ್ಡಿ. ಬೆಳಗೊಳ 2 ನೇ ಹಂತ 22.7 ದೊರೆಯುವ ಸಾಮರ್ಥ್ಯ. ಲಭ್ಯವಿರುವುದು 0 ಎಂಎಲ್ಡಿ. ಹೊಂಗಳ್ಳಿ 2ನೇ ಹಂತ 22.25 ಸಾಮರ್ಥ್ಯ, ಲಭ್ಯವಿರುವುದು 15 ಎಂಎಲ್ಡಿ. ಹೊಂಗಳ್ಳಿ 3ನೇ ಹಂತ ಸಾಮರ್ಥ್ಯ 41.8, ಲಭ್ಯವಿರುವುದು 25 ಎಂಎಲ್ಡಿ. ಮೇಳಾಪುರ 2ನೇ ಹಂತ ಸಾಮರ್ಥ್ಯ 41 ಲಭ್ಯವಿರುವುದು 24 ಎಂಎಲ್ಡಿ ಹಾಗೂ ಬಿದರಗೂಡು 1ನೇ ಹಂತದ ಸರಬರಾಜು ಕೇಂದ್ರದ ಸಾಮರ್ಥ್ಯ 30 ಎಂಎಲ್ಡಿ ಆದರೆ ಲಭ್ಯವಿರುವುದು 20 ಎಂಎಲ್ಡಿ ಮಾತ್ರ.
63 ಅಡಿಗೆ: ಕೃಷ್ಣರಾಜಸಾಗರ ಜಲಾಶಯದ ಮಟ್ಟ ಗರಿಷ್ಠ 124 ಅಡಿಯಿದ್ದು, ಇದೀಗ 63 ಅಡಿಗೆ ತಲುಪಿದೆ. ಈಗಿರುವ ನೀರಿನ ಪ್ರಮಾಣವು ಮೈಸೂರು ಮತ್ತು ಬೆಂಗಳೂರು ನಗರಕ್ಕೆ 10 ದಿನಕ್ಕೆ ಸರಬರಾಜು ಮಾಡಬಹುದಾಗಿದೆ. ತಳಮಟ್ಟದವರೆಗೆ ನೀರೆತ್ತಲು ಇಲ್ಲಿ ಅವಕಾಶವಿಲ್ಲ. ಏಕೆಂದರೆ 50 ಅಡಿಯ ಕೆಳಗಿರುವ ನೀರು ಗೋಟಿನ ಮೂಲಕ ಹೊರಗೆ ಹರಿಯುವುದಿಲ್ಲ. ಹೀಗಾಗಿ 1931 ರಲ್ಲಿ ನಿರ್ಮಿಸಲಾದ ಈ ಜಲಾಶಯದ ಇತಿಹಾಸದಲ್ಲಿ ಈವರೆಗೆ 50 ಅಡಿಯ ಕೆಳಗಿರುವ ಗೇಟ್ಗಳನ್ನು ತೆರೆದಿಲ್ಲ. ಅದು ತೆರೆಯದ ಕಾರಣ ತುಕ್ಕು ಹಿಡಿದಿದ್ದು ಅದನ್ನು ತೆಗೆದರೆ ಮತ್ತೆ ಮುಚ್ಚಲು ಪ್ರಯಾಸ ಪಡಬೇಕಿದೆ ಎನ್ನಲಾಗಿದೆ.
ರಾಜ್ಯದ ಎರಡನೇ ಮಹಾನಗರವಾಗಿರುವ ಮೈಸೂರಿನ 65 ವಾರ್ಡ್ಗಳಲ್ಲಿಯೂ ನೀರಿನ ಬವಣೆ ತೀವ್ರಗೊಂಡಿದೆ. ಕೆಲವು ಭಾಗದಲ್ಲಿ 2 ದಿನಕ್ಕೊಮ್ಮೆ, ಕೆಲವು ಭಾಗದಲ್ಲಿ 3 ದಿನಕ್ಕೊಮ್ಮೆ ಹಾಗೂ ಇನ್ನೂ ಕೆಲವು ಕಡೆ 5 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅನುಕೂಲವುಳ್ಳವರು ಮನೆಯಲ್ಲಿ ಸಂಪ್ ನಿರ್ಮಿಸಿಕೊಂಡಿರುವುದರಿಂದ ಅದರಲ್ಲಿ ಶೇಖರಿಸಿಕೊಂಡು ಬಳಕೆ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಜನರು ಮನೆಯಲ್ಲಿರುವ ತೊಟ್ಟಿ, ಡ್ರಮ್, ಹಂಡೆ ಮುಂತಾದ ಪಾತ್ರ ಪಗಡೆಗಳಿಗೆ ಅಷ್ಟೆ ಯಾಕೆ ಬಾಟಲಿಗಳಿಗೂ ನೀರು ಸಂಗ್ರಹಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಕೆಲವರು ತಮ್ಮ ವಾಹನಗಳಲ್ಲಿ ಬಿಂದಿಗೆಯನ್ನು ಕಟ್ಟಿಕೊಂಡು ನೀರು ಸಂಗ್ರಹಿಸಲು ಪರಿತಪಿಸುವ ದೃಶ್ಯ ಈಗ ಎಲ್ಲೆಡೆ ಕಾಣಬಹುದು. ಕೆಲವು ಬಡಾವಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈ ಪಂಪ್ಗಳಿಂದಲೂ ಜನರು ನೀರು ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಒಟ್ಟಾರೆ ದೈನಂದಿನ ಕಾರ್ಯಗಳಿಗೆ ಹಾಗೂ ಮನುಷ್ಯನ ದೈನಂದಿನ ಬದುಕಿಗೆ ಅತ್ಯಗತ್ಯವಾದ ಜಲವು ಇಂದು ಅಮೃತವೂ ಅತ್ಯಮೂಲ್ಯವೂ ಆಗಿದೆ.
ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ
ನಗರ ಪಾಲಿಕೆ ಸದಸ್ಯರು ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳಲ್ಲಿ ಜನಪರ ಕಾಳಜಿ ಕಾಣುತ್ತಿಲ್ಲ. ಕೆಆರ್ಎಸ್ನಲ್ಲಿ ನೀರು ತುಂಬ ಕಡಿಮೆಯಾಗಿರುವುದರಿಂದ ಮುಂದೆ ಇನ್ನೂ ಪರಿಸ್ಥಿತಿ ಉಲ್ಬಣವಾಗಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ನೀರಾವರಿ ಇಲಾಖೆಯ ಪರಿಣಿತರ ಸಭೆ ಕರೆದು ಚರ್ಚಿಸಬೇಕು. ತಳಮಟ್ಟದಲ್ಲಿರುವ ನೀರನ್ನು ಪಂಪ್ ಮಾಡಲು ಬೇಕಾದ ಅಗತ್ಯ ಯಂತ್ರಸಾಧನ ವ್ಯವಸ್ಥೆ ಮಾಡಲು ತಾಂತ್ರಿಕ ತಜ್ಞರ ಸಲಹೆ ಪಡೆಯಬೇಕು. ಆದರೆ ಈವರೆಗೆ ಜಿಲ್ಲಾಡಳಿತವಾಗಲಿ ಅಥವಾ ನೀರಾವರಿ ಇಲಾಖೆಯಾಗಲಿ ಮುಂದಾಗಿಲ್ಲ. ನೀರಿನ ಸಮಸ್ಯೆ ಕೇವಲ ಚುನಾಯಿತ ಪ್ರತಿನಿಧಿಗಳಿಗೆ ಪ್ರಚಾರದ ವಸ್ತುವಾಗಬಾರದು. ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನವಾಗಬೇಕು. ಮೈಸೂರು ಹಾಗೂ ಮಂಡ್ಯ ಜಿಲ್ಲಾಧಿಕಾರಿಯವರು ತಜ್ಞರ ಸಭೆ ಕರೆದು ಈ ಬಗ್ಗೆ ಚರ್ಚಿಬೇಕು.
-ಎಂ. ಲಕ್ಷ್ಣ್ಮಣ್, ಸಂಚಾಲಕ, ಎಸಿಐಸಿಎಂ
-ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

