ಅರಮನೆ ಮತ್ತಷ್ಟು ಕಲರ್ಫುಲ್
ವಿಶ್ವವಿಖ್ಯಾತ ಮೈಸೂರು ಅರಮನೆಗೆ ರಾಜ್ಯ ಸರ್ಕಾರ ನೀಡಿದ್ದ 25 ಕೋಟಿ ಅನುದಾನದಲ್ಲಿ ಬಹು ಪುರಾತನ ಮತ್ತು ಭಾರತೀಯ ಸಂಪ್ರದಾಯದ ಅನನ್ಯ ತೈಲವರ್ಣ ನವೀಕರಣ...
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಗೆ ರಾಜ್ಯ ಸರ್ಕಾರ ನೀಡಿದ್ದ 25 ಕೋಟಿ ಅನುದಾನದಲ್ಲಿ ಬಹು ಪುರಾತನ ಮತ್ತು ಭಾರತೀಯ ಸಂಪ್ರದಾಯದ ಅನನ್ಯ ತೈಲವರ್ಣ ನವೀಕರಣ, ಬಣ್ಣದ ಸ್ಟೈನ್ ಕ್ಲಾಸ್ಗಳ ದುರಸ್ತಿ, ಚಿನ್ನ ಲೇಪಿತ ಕಲಾತ್ಮಕ ಕೆಲಸಗಳ ರಕ್ಷಣೆ ಮತ್ತು ಸಂಗೀತ ಕಾರಂಜಿ ನಿರ್ಮಿಸಲು ಅರಮನೆ ಮಂಡಳಿ ತೀರ್ಮಾನಿಸಿದೆ. ದರ್ಬಾರ್ ಸಭಾಂಗಣ ಮತ್ತು ಮೇಲಿನ ಪ್ರಾಂಗಣಗಳಲ್ಲಿನ ಚಿನ್ನಲೇಪಿತ ಕಂಬಗಳು ಮತ್ತು ಚಿನ್ನಲೇಪಿತ ಪೀಠದ ನಿಲುಗನ್ನಡಿಗೆ ಈ ಹಿಂದೆ ನವೀಕರಣ ಹೆಸರಿನಲ್ಲಿ ಸಾಮಾನ್ಯ ಬಣ್ಣ ಬಳಿದಿರುವುದು, ಕೆಲವು ಕಡೆ ಹಳದಿ ಬಣ್ಣ ಮತ್ತು ಕನ್ನಡಿಯ ಚೌಕಟ್ಟಿಗೆ ಬೆಳ್ಳಿ ಬಣ್ಣ ಬಳಿದಿರುವುದು ಈಗಷ್ಟೆ ಬೆಳಕಿಗೆ ಬಂದಿದೆ.
ಈಗ ವರ್ಣ ಕಲೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ ಅವರು ಈ ಕಾರ್ಯ ಕೈಗೊಂಡಿದ್ದಾರೆ. ಮುಂಚೆಗಿಂತ ಈಗ ದರ್ಬಾರ್ ಸಭಾಂಗಣ ಮತ್ತು ಅರಮನೆ ಮುಂದಿನ ಪ್ರಾಂಗಣ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿದೆ. ಪ್ರವಾಸಿಗರು ಕಂಬಗಳನ್ನು ಮುಟ್ಟುವುದು, ಉಗುರು ಅಥವಾ ಬೀಗದಿಂದ ಕೆರೆಯುವುದರಿಂದಾಗಿ ಎಲ್ಲಾ ಕಂಬಗಳು ತಮ್ಮ ನೈಜತೆ ಕಳೆದುಕೊಂಡಿವೆ.
ದುರಸ್ತಿ: ಈಗ ಇವುಗಳನ್ನು ಮೂರು ಹಂತಗಳಲ್ಲಿ ದುರಸ್ತಿಪಡಿಸಲಾಗುತ್ತಿದೆ. ಮೊದಲ ಹಂತ ಸುರಕ್ಷಾ ಶುದ್ಧೀಕರಣ. ಈ ಹಂತದಲ್ಲಿ ಅಳಲೆ, ಭಜೆ, ಕುರುಳೆ, ಗರಿಕೆ, ಅತಿ ಮಧುರ, ಹಾವಿನ ಸೋಲೆ, ಬೇವು ಮುಂತಾದವುಗಳನ್ನು ಕುದಿಸಿ ಶುದ್ಧೀಕರಿಸಲಾಗುತ್ತದೆ. 2ನೇ ಹಂತ ಭಿನ್ನಭಾಗ ಸರಿಪಡಿಸುವಿಕೆ. ಈ ಹಂತದಲ್ಲಿ ಶುದ್ಧ ಮರಳು, ಗಾರೆ, ಬೆಲ್ಲ, ಸುಣ್ಣ, ಆನೇಕಾಯಿ, ಬಿಲ್ವ ಮುಂತಾದ ಪದಾರ್ಥ ಮಿಶ್ರಣಗೊಳಿಸಿ ಸಿಮೆಂಟ್ನೊಂದಿಗೆ ಅರೆದು ಭಿನ್ನ ಸ್ಥಳಗಳಿಗೆ ಲೇಪಿಸಲಾಗುತ್ತದೆ. 3ನೇ ಹಂತ ವರ್ಣ ಲೇಪನ. ಈ ಹಂತದಲ್ಲಿ ಬೇರು, ಮಣ್ಣು, ಎಲೆ, ತೊಗಟೆ, ಕೆಲವು ಬೀಜ ಮತ್ತು ಹೂಗಳಿಂದ ದೇಶಿ ಬಣ್ಣ ತಯಾರಿಸಿ ವರ್ಣ ಲೇಪನ ಮಾಡಲಾಗಿದೆ. ಮತ್ತೊಂದು ಯೋಜನೆಯಲ್ಲಿ ಅರಮನೆ ಕಲ್ಯಾಣ ಮಂಟಪ, ಖಾಸಗಿ ದರ್ಬಾರ್ ಸಭಾಂಗಣದ ಣಾವಣಿ ಮೇಲಿನ ಸ್ಟೈನ್ ಗ್ಲಾಸ್ಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಕೇರಳ, ಅಮೆರಿಕ ಮತ್ತು ಇಂಗ್ಲೆಂಡ್ನಿಂದ ಕಲಾವಿದರು ಸಂಪರ್ಕಿಸಿದ್ದು, ಇನ್ನು ಕಾಮಗಾರಿ ಆರಂಭವಾಗಿಲ್ಲ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗುವ ಲಕ್ಷಣ ಇದೆ. ಉಳಿದಂತೆ ಅರಮನೆಯಲ್ಲಿನ ಮರದ ಕೆತ್ತನೆ ಕೆಲಸ ಮಾಡಲು ಸಹ ಸೂಕ್ತ ಶಿಲ್ಪಿಗಳು ಲಭ್ಯವಾಗಿಲ್ಲ.
ಸಂಗೀತ ಕಾರಂಜಿ: ಅರಮನೆ ಮುಂದಿನ ಎಡ ಮತ್ತು ಬಲ ಪಾರ್ಶ್ವದಲ್ಲಿನ ಉದ್ಯಾನವನದೊಳಗಿನ ಕಾರಂಜಿಗಳನ್ನೇ ಬಳಸಿ ಸುಮಾರು 3.60 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ನಿರ್ಮಾಣಕ್ಕೆ ಬೆಂಗಳೂರು ಮೂಲದ ರೈಟ್ಸ್ ಕಂಪನಿ ಮುಂದೆ ಬಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಕೃತಿಗಳನ್ನು ಸಂಗೀತ ಪರಿಕರಗಳಿಗೆ ಅಳವಡಿಸಿ ಈ ಸಂಗೀತ ಕಾರಂಜಿ ನಿರ್ಮಿಸಲು ತೀರ್ಮಾನಿಸಲಾಗಿದೆ.
ಪ್ರತಿದಿನ ಒಂದು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶವನ್ನು ಮಂಡಳಿ ಹೊಂದಿದೆ. ಮುಂದಿನ ದಿನಗಳಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ನಡೆಸಲು ಅವಕಾಶ ಕಲ್ಪಿಸಿಕೊಡುವ ಆಲೋಚನೆಯೂ ಇದೆ.
ಸರ್ಕಾರ ನೀಡಿದ 25 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುವ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಪೈಕಿ ಅರಮನೆ ಭದ್ರತೆ, ಛಾವಣಿ ದುರಸ್ತಿ, ಸ್ಟೈನ್ಕ್ಲಾಸ್ ಸಂರಕ್ಷಣೆ, ಕಂಬಗಳ ಸಂರಕ್ಷಣೆ, ಮಂಡಳಿ ಆತಿಥ್ಯ ಸುವ್ಯವಸ್ಥೆ, ಕಾಲ್ಸೆಂಟರ್, ಯೋಗ ಕೇಂದ್ರ, ಸ್ಟೀಲ್ ಬ್ಯಾರಿಕೇಡ್ ವ್ಯವಸ್ಥೆಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಎಲ್ಲಾ ಹಣಕಾಸಿನ ವಿವರವನ್ನು ಪಾರದರ್ಶಕತೆಯ ದೃಷ್ಟಿಯಿಂದ ವೆಬ್ಸೈಟ್ನಲ್ಲಿ ಹಾಕಲಾಗುತ್ತಿದೆ.
-.ಎಸ್. ಸುಬ್ರಹ್ಮಣ್ಯ, ಉಪ ನಿರ್ದೇಶಕರು, ಅರಮನೆ ಆಡಳಿತ ಮಂಡಳಿ
ಮೈಸೂರು ಸೇರಿದಂತೆ ದೇಶಾದ್ಯಂತ ಸಾಕಷ್ಟು ಕಲಾ ಕಾಲೇಜುಗಳು ಇದ್ದರೂ, ಭಾರತೀಯ ಸಂಪ್ರದಾಯದ ಕಲೆ ಕಲಿಸಲಾಗುತ್ತಿಲ್ಲ. ಎಲ್ಲರೂ ವಿದೇಶಿ ತೈಲ ಚಿತ್ರಗಳು ಮುಂತಾದ ಕಲೆಯ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮ ಪರಂಪರೆಯ ಇಂತಹ ಅರಮನೆಗಳಿಗೆ ಭಾರತೀಯ ತೈಲ ಪದ್ಧತಿ ಮುಖ್ಯ. ಈ ಹಿಂದೆ 24 ಕ್ಯಾರೆಟ್ ಚಿನ್ನದ ಲೇಪನದ ಮೇಲೆಯೇ ಬೇರೆ ಬೇರೆ ಬಣ್ಣ ಬಳಿದಿದ್ದಾರೆ. ಈಗ ನಾವು ಅವುಗಳನ್ನು ಸಂರಕ್ಷಿಸಿ ಮತ್ತೆ ಚಿನ್ನದ ಲೇಪನ ಮಾಡುತ್ತಿದ್ದೇವೆ.
- ಗಂಜೀಫಾ ರಘುಪತಿ ಭಟ್, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು.
- ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

