ಸಹಕಾರ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿರ್ಲಕ್ಷ್ಯ: ಆರೋಪ
ಕ.ಪ್ರ.ವಾರ್ತೆ ಕೆ.ಆರ್. ನಗರ ಮಾ.30
ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆಯಾಗಿರುವ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ನಿರ್ಲಕ್ಷಿಸಿದ್ದು, ತಾಲೂಕಿನ ರಾಜಕಾರಣಿಗಳು ಪುನರಾರಂಭಿಸಲು ಪ್ರಯತ್ನಿಸದಿರುವುದು ರೈತ ವಿರೋಧಿ ಧೋರಣೆ ತೋರಿಸುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುನಯ್‌ಗೌಡ ಟೀಕಿಸಿದರು. ಶಾಸಕರು, ಸಂಸದರು ಮತ್ತು ಬಿಜೆಪಿ ಮುಖಂಡರು ಕಾರ್ಖಾನೆಯತ್ತ ತಿರುಗಿ ನೋಡುತ್ತಿಲ್ಲ. ಸಂಸದರು ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಯಾವುದೆ ನಿಲುವು ತೆಗೆದುಕೊಳ್ಳಲಿಲ್ಲವೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಿಜವಾಗಿಯೂ ರೈತಪರ ಕಾಳಜಿ ಇದ್ದರೆ, ರೈತರಿಗೆ ಕಬ್ಬಿನ ಬಾಕಿ ಮತ್ತು ಕಾರ್ಮಿಕರ ನಾಲ್ಕು ತಿಂಗಳ ಬಾಕಿ ವೇತನ ಕೊಡಿಸಬೇಕು. ಕಾಲುವೆಗಳಲ್ಲಿ ನೀರು ಹರಿಯದೆ ಬತ್ತದ ಬೆಳೆ ಒಣಗಿದೆ. ಇದರಿಂದ ರೈತರಿಗೆ ಬೆಳೆ ನಷ್ಟವಾಗಿದ್ದು, ರೈತರಿಗೆ ಬೆಳೆನಷ್ಟ ಪರಿಹಾರ ನೀಡಿ ಚುನಾವಣಾ ವೆಚ್ಚ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಅಧಿಕಾರಿಗಳು ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುವಾಗ ಯಾರೂ ಚಕಾರ ಎತ್ತಲಿಲ್ಲ. ಕೆರೆಗಳಿಗೆ ನೀರು ಹರಿಸದಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಹಾರಂಗಿ ಬಲದಂಡೆ ಬೆಳೆಗಳಿಗೆ ನೀರು ಹರಿಸದೆ ಬೆಳೆದ ಬತ್ತ ಒಣಗಿ ಹೋದಾಗ ಧ್ವನಿ ಎತ್ತಲಿಲ್ಲ. ಆದರೆ, ಈಗ ರೈತರ ಮತದಾರರ ದಾರಿ ತಪ್ಪಿಸಲು ಇಲ್ಲದ ಪ್ರಚಾರ ಗಿಟ್ಟಿಸಲು ನೀವು ನೀಡುವ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು. ಈಗ ನಡೆಯುತ್ತಿರುವ ಚಾಮರಾಜ, ರಾಮಸಮುದ್ರ ಕಾಲುವೆಗಳ 200 ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಕಳಪೆಯಿಂದ ಕೂಡಿದ್ದು, ಅದರ ಮಾಹಿತಿ ಯಾರಿಗೂ ನೀಡದೆ ಎಲ್ಲರನ್ನು ಅಂಧಕಾರದಲ್ಲಿ ಇರಿಸಿ ಅಧಿಕಾರಿಗಳಿಗೆ ಅನುಕೂಲವಾಗುವ ಹಾಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಏ. 3ರಂದು ಸಂಘದ ಪದಾಧಿಕಾರಿಗಳು, ರೈತರು, ಬುದ್ಧಿಜೀವಿಗಳ ಸಭೆ ಕರೆದು ಚರ್ಚಿಸಿ ಮತದಾನದ ಮೌಲ್ಯ ಹಾಗೂ ರೈತರ, ಜನಸಾಮಾನ್ಯರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಎಂದು ತಿಳಿಸಿದರು. ವಿಶ್ವಾಸ್‌ಗೌಡ, ರುದ್ರೇಶ್, ಮಹದೇವ್, ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

