ಮೈಸೂರು

ಕೆ.ಆರ್. ನಗರಕ್ಕೆ ಯಾರು ಸಾರಥಿ?

Published On :

ಮೈಸೂರು: ಒಂದು ಕಡೆ ಹಾಸನ, ಮತ್ತೊಂದು ಕಡೆ ಮಂಡ್ಯ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿರುವ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರುವಾಸಿ. ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಕಳೆದ ಬಾರಿಯಿಂದ ಈ ವಿಧಾನಸಭಾ ಕ್ಷೇತ್ರವನ್ನು ಪಕ್ಕದ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಗಿದೆ.
ಕಾವೇರಿ ನದಿಯ ದಂಡೆಯಲ್ಲಿರುವ ಕೆ.ಆರ್. ನಗರ ಒಂದು ಕಾಲಕ್ಕೆ ಬತ್ತದ ಕಣಜ ಎನಿಸಿಕೊಂಡಿತ್ತು. ತಾಲೂಕಿನಲ್ಲಿ ಬತ್ತ ಹಾಗೂ ಕಬ್ಬು, ಹೊಗೆಸೊಪ್ಪು ಪ್ರಮುಖ ಬೆಳೆ. ಚುಂಚನಕಟ್ಟೆಯಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆಯೂ ಆರಂಭವಾಯಿತು. ಈಗ ಬತ್ತದ ಬೆಳೆ ಕಡಿಮೆಯಾಗಿರುವುದರಿಂದ ಅಕ್ಕಿ ಗಿರಣಿಗಳೆಲ್ಲಾ ಕಲ್ಯಾಣ ಮಂಟಪಗಳಾಗಿವೆ. ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಯೂ ರೋಗಗ್ರಸ್ತವಾಗಿದೆ.
1952ರಲ್ಲಿ ಪಕ್ಷೇತರರಾದ ಸಾಲಿಗ್ರಾಮ ಹನುಮಂತಗೌಡರ ತಮ್ಮಯ್ಯ ಆಯ್ಕೆಯಾದರು. ಈ ಚುನಾವಣೆಯಲ್ಲಿ ಡಾ.ಕೆ.ಎಸ್. ಗೌಡಯ್ಯ ಅವರು ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿದ್ದರು. 1957ರಲ್ಲಿ ಕಾಂಗ್ರೆಸ್‌ನ ಎಚ್.ಎಂ. ಚನ್ನಬಸಪ್ಪ ಆಯ್ಕೆಯಾದರು. ಈ ಚುನಾವಣೆಯಲ್ಲಿ ಡಾ.ಕೆ.ಎಸ್. ಗೌಡಯ್ಯ ಹಾಗೂ ಎಚ್.ಬಿ. ಕೆಂಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. 1962ರಲ್ಲಿ ಪಕ್ಷೇತರರಾದ ಡಾ.ಕೆ.ಎಸ್. ಗೌಡಯ್ಯ ಆಯ್ಕೆಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಎಂ. ಚನ್ನಬಸಪ್ಪ ಸೋತರು. ಚನ್ನಬಸಪ್ಪ ಅವರು ಪಕ್ಕದ ಪಿರಿಯಾಪಟ್ಟಣ ಕ್ಷೇತ್ರದಿಂದ 1967, 1972 ರಲ್ಲಿ ಆಯ್ಕೆಯಾಗಿದ್ದರು.
1967ರಲ್ಲಿ ಕಾಂಗ್ರೆಸ್‌ನ ಎಂ. ಬಸವರಾಜು ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಕೆ.ಎಸ್. ಗೌಡಯ್ಯ ಸೋತರು. 1972ರಲ್ಲಿ ಕಾಂಗ್ರೆಸ್‌ನ ಎಚ್.ಬಿ. ಕೆಂಚೇಗೌಡ ಆಯ್ಕೆಯಾದರು. ಸಂಸ್ಥಾ ಕಾಂಗ್ರೆಸ್‌ನ ಡಾ.ಎಚ್.ಎಲ್. ತಿಮ್ಮೇಗೌಡ, ಪಕ್ಷೇತರರಾಗಿದ್ದ ಎಂ. ಬಸವರಾಜು ಸೋತರು.
ಜಯಭೇರಿ: 1978ರಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಯುವ ವಕೀಲ ಎಚ್. ವಿಶ್ವನಾಥ್ ಅವರನ್ನು ಗುರುತಿಸಿ, ಕಾಂಗ್ರೆಸ್ ಟಿಕೆಟ್ ನೀಡಿದರು. ಮೊದಲ ಬಾರಿಗೆ ವಿಶ್ವನಾಥ್ ಹಾಗೂ ಜನತಾಪಕ್ಷದ ಎಚ್. ನಂಜಪ್ಪ ಮುಖಾಮುಖಿ. ವಿಶ್ವನಾಥ್‌ಗೆ ಗೆಲವು. 1983, 1985 ರಲ್ಲಿ ಮತ್ತೆ ವಿಶ್ವನಾಥ್ ಹಾಗೂ ನಂಜಪ್ಪ ನಡುವೆ ಪೈಪೋಟಿ. ಎರಡೂ ಚುನಾವಣೆಗಳಲ್ಲೂ ನಂಜಪ್ಪ ಜಯಭೇರಿ. ಎರಡೂ ಬಾರಿಯೂ ತೊಂಟದಾರ್ಯ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಇಬ್ಭಾಗ: 1989ರ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ವಿಶ್ವನಾಥ್ ಹಾಗೂ ನಂಜಪ್ಪ ಮತ್ತೆ ಮುಖಾಮುಖಿಯಾದರು. ಭಾರಿ ಅಂತರದಿಂದ ಗೆದ್ದಿದ್ದು ಮಾತ್ರ ವಿಶ್ವನಾಥ್. ಈ ಚುನಾವಣೆಯಲ್ಲಿ ಜನತಾದಳದಿಂದ ಗೌಡಯ್ಯ ಅವರ ಪುತ್ರ ಜಿ. ಪ್ರಕಾಶ್, ಬಿಜೆಪಿಯಿಂದ ಅಜಿತ್‌ರಾಜ್ ಅಭ್ಯರ್ಥಿಯಾಗಿದ್ದರು. 2ನೇ ಬಾರಿ ಗೆದ್ದ ವಿಶ್ವನಾಥ್ ಕನ್ನಡ ಮತ್ತು ಸಂಸ್ಕೃತಿ, ಅರಣ್ಯ ಖಾತೆಯ ಸಚಿವರಾದರು. 1994ರ ವೇಳೆಗೆ ಮತ್ತೆ ಜನತಾ ಪರಿವಾರ ಒಂದಾಗಿತ್ತು. ಎಸ್. ನಂಜಪ್ಪ ಅವರು 3ನೇ ಬಾರಿಗೆ ಗೆದ್ದು, ಸಚಿವರಾದರು. ವಿಶ್ವನಾಥ್ ಸೋತರು. ಬಂಗಾರಪ್ಪ ಅವರ ಕೆಸಿಪಿಯಿಂದ ಆರ್.ಎನ್. ನಾಗರಾಜ್, ಬಿಜೆಪಿಯಿಂದ ಮಿರ್ಲೆ ಶ್ರೀನಿವಾಸಗೌಡ ಸ್ಪರ್ಧಿಸಿದ್ದರು.
1999ರ ವೇಳೆಗೆ ನಂಜಪ್ಪ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಹೀಗಾಗಿ ಅವರು ಸ್ಪರ್ಧಿಸಲಿಲ್ಲ. ಬದಲಿಗೆ ಜೆಡಿಎಸ್ ಟಿಕೆಟ್ ಮಂಚನಹಳ್ಳಿ ಮಹದೇವ್ ಅವರಿಗೆ ಸಿಕ್ಕಿತು. ಬಿಜೆಪಿಯಿಂದ ಸಾಲಿಗ್ರಾಮದ ಎಸ್.ಎ. ಗೋವಿಂದರಾಜು ಸ್ಪರ್ಧಿಸಿದ್ದರು. ಆದರೆ, 3ನೇ ಬಾರಿಗೆ ಗೆದ್ದಿದ್ದು ಮಾತ್ರ ಕಾಂಗ್ರೆಸ್‌ನ ಎಚ್. ವಿಶ್ವನಾಥ್. ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾದರು. 2004 ರಲ್ಲಿ ಜೆಡಿಎಸ್‌ನ ಮಂಚನಹಳ್ಳಿ ಮಹದೇವ್ ಹಾಗೂ ಕಾಂಗ್ರೆಸ್ ವಿಶ್ವನಾಥ್ ಅವರ ನಡುವೆ ಎರಡನೇ ಮುಖಾಮುಖಿ. ಈ ಬಾರಿ ಗೆದ್ದಿದ್ದು ಮಂಚನಹಳ್ಳಿ ಮಹದೇವ್. ಇದಕ್ಕೆ ಕಾರಣವಾಗಿದ್ದು ಬಿಎಸ್ಪಿಯ ಅಸ್ಗರ್ ಪಾಷ ಪಡೆದ ಮತ. ಬಿಜೆಪಿಯಿಂದ ಸಾ.ರಾ. ಮಹೇಶ್ ಸ್ಪರ್ಧಿಸಿದ್ದರು.
2008ರ ಚುನಾವಣೆ ವೇಳೆಗೆ ಸಾ.ರಾ. ಮಹೇಶ್ ಜೆಡಿಎಸ್ ಸೇರಿ, ಆ ಪಕ್ಷದ ಅಭ್ಯರ್ಥಿಯಾದರು. ಮಂಚನಹಳ್ಳಿ ಮಹದೇವ್ ಅವರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ, ಕಾಂಗ್ರೆಸ್‌ಗೆ ಹೋದರೂ ಟಿಕೆಟ್ ಸಿಗಲಿಲ್ಲ. ಬದಲಿಗೆ ವಿಶ್ವನಾಥ್ ಅವರು 8ನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ, ಗೆದ್ದಿದ್ದು ಮಾತ್ರ ಜೆಡಿಎಸ್‌ನ ಸಾ.ರಾ. ಮಹೇಶ್. ಬಿಜೆಪಿಯಿಂದ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಬಿಎಸ್ಪಿಯಿಂದ ಡಾ.ಎಸ್.ಪಿ. ಯೋಗಣ್ಣ ಸ್ಪರ್ಧಿಸಿದ್ದರು.
ಇದೇ ಮೊದಲ ಬಾರಿಗೆ ಕಳೆದ 30 ವರ್ಷಗಳ ನಂತರ ವಿಶ್ವನಾಥ್ ಸ್ಪರ್ಧಿಸುತ್ತಿಲ್ಲ. ಅವರ ಪುತ್ರ ಅಮಿತ್ ವಿ. ದೇವರಹಟ್ಟಿಗೂ ಟಿಕೆಟ್ ಕೊಡಿಸಿಲ್ಲ. ಜೆಡಿಎಸ್‌ನಿಂದ ಶಾಸಕ ಸಾ.ರಾ. ಮಹೇಶ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ, ಅಲ್ಲಿಂದ ಕೆಜೆಪಿಯತ್ತ ಮುಖ ಮಾಡಿದ್ದ ದೊಡ್ಡಸ್ವಾಮಿಗೌಡ ಹಾಗೂ ಅವರ ಪುತ್ರ ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್ ಅವರನ್ನು ಕಾಂಗ್ರೆಸ್‌ಗೆ ವಾಪಸ್ ಕರೆತಂದು ವಿಶ್ವನಾಥ್ ಈ ಬಾರಿ ಗೌಡರಿಗೆ ಟಿಕೆಟ್ ಕೊಡಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿ. ಮಂಚನಹಳ್ಳಿ ಮಹದೇವ್ ಅವರ ಪತ್ನಿ ಅನುರಾಧಾ ಅವರಿಗೆ ಟಿಕೆಟ್ ಕೊಡಿಸುವ ಪರವಾಗಿದ್ದರು. ಆದರೆ, ಅದು ವಿಶ್ವನಾಥ್ ಅವರ ತಂತ್ರಗಾರಿಕೆಯಿಂದ ಕೈಗೂಡಿಲ್ಲ.
ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿ, ಸಚಿವರೂ ಆಗಿದ್ದ ಎಸ್. ನಂಜಪ್ಪ ಅವರ ಪುತ್ರ ಕೆ.ಎನ್. ಬಸಂತ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಹಾಲಿ ಶಾಸಕ ಸಾ.ರಾ. ಮಹೇಶ್ ಮತ್ತೆ ಅಭ್ಯರ್ಥಿಯಾಗಿದ್ದರಿಂದ ಬಸಂತ್ ಇದೀಗ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿ, ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಮಿರ್ಲೆ ಶ್ರೀನಿವಾಸಗೌಡ ಅಥವಾ ಎಪಿಎಂಸಿ ಅಧ್ಯಕ್ಷ ರಮೇಶ್ ಸ್ಪರ್ಧಿಸಬಹುದು.
ಜೆಡಿಎಸ್‌ನಲ್ಲಿ ಸಾ.ರಾ. ಮಹೇಶ್ ಟಿಕೆಟ್ ನೀಡಿಕೆ ವಿರುದ್ಧ ಬಸಂತ್ ಕೆಜೆಪಿ ಹೋಗಿದ್ದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಅನುರಾಧ ಮಹದೇವ್, ಸಾಲಿಗ್ರಾಮ ತಮ್ಮಯ್ಯ, ಮುದುಗುಪ್ಪೆ ರಮೇಶ್ ಅಧಿಕೃತವಾಗಿ ದೊಡ್ಡಸ್ವಾಮಿಗೌಡರ ಹೆಸರು ಪ್ರಕಟ ಬಳಿಕ ಯಾವ ನಿಲುವು ತಳೆಯುತ್ತಾರೆ ನೋಡಬೇಕಿದೆ.
1978ಕ್ಕೆ ಮೊದಲು ಒಕ್ಕಲಿಗರು, ಲಿಂಗಾಯಿತರು, ಕುರುಬರು ಗೆದ್ದಿದ್ದಾರೆ. 1978 ರಿಂದ ತಾಲೂಕಿನಲ್ಲಿ ಬಹುಸಂಖ್ಯಾತರಾದ ಒಕ್ಕಲಿಗರು ಹಾಗೂ ಕುರುಬರ ನಡುವೆಯೇ ಪೈಪೋಟಿ. 1978ರಿಂದ 1994 ರವರೆಗೆ ಕಾಂಗ್ರೆಸ್‌ನಿಂದ ಎಚ್. ವಿಶ್ವನಾಥ್ ಹಾಗೂ ಜನತಾ ಪರಿವಾರದಿಂದ ಎಸ್. ನಂಜಪ್ಪ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದುದು ಇದಕ್ಕೆ ಕಾರಣವಿರಬಹುದು. ಇಲ್ಲಿ ಯಾರೇ ಅಭ್ಯರ್ಥಿಗಳಾದರೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ನಡುವೆಯೇ ಹೋರಾಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.