ಅಸ್ಪೃಶ್ಯತೆ: ತಪ್ಪಿತಸ್ಥರಿಗೆ ಶಿಕ್ಷೆಗೆ ಒತ್ತಾಯ
ಮೈಸೂರು: ಎಚ್.ಡಿ. ಕೋಟೆ ತಾಲೂಕಿನ ಹೊಳೆಹುಂಡಿ ಗ್ರಾಮದಲ್ಲಿ ನಡೆದ ಸಿದ್ಧರಾಮೇಶ್ವರ ಜಾತ್ರೆಯಲ್ಲಿ ಪೂಜೆ ಸಲ್ಲಿಸಲು ಹೋದ ದಲಿತ ಮಹಿಳೆ ಪುಟ್ಟಮ್ಮ ಅವರು ದೇವಸ್ಥಾನ ಪ್ರವೇಶಿಸಿದಂತೆ ತಡೆವೊಡ್ಡಿ ನಿಂದಿಸಿ ಅಸ್ಪೃಶ್ಯ ಆಚರಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತರ ಹಕ್ಕುಗಳ ಹೋರಾಟ ಸಮಿತಿ ಒತ್ತಾಯಿಸಿದೆ. ಹೊಳೆಹುಂಡಿ ಗ್ರಾಮದ ಅಪ್ಪಾಜಿಗೌಡ ಮತ್ತು ಕಾಳಸ್ವಾಮಿ ಎಂಬವರು ಜಾತಿ ನಿಂದನೆ ಮಾಡಿ, ಪುಟ್ಟಮ್ಮ ಅವರನ್ನು ದೇವಸ್ಥಾನದಿಂದ ಹೊರ ಹಾಕಿದ್ದರು. ಅದನ್ನು ಪ್ರಶ್ನಿಸಿದ ರವಿ, ಅಶ್ವತ್ಥ್, ಪ್ರಸಾದ್, ಮಹೇಶ್ ಅವರ ಮೇಲೆ ಸವರ್ಣೀಯರ ಗುಂಪೊಂದು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ದರಾಮು, ಸ್ವಾಮಿ, ಬೀರೇಗೌಡ, ಅಪ್ಪಾಜಿಗೌಡ, ಕಾಳಸ್ವಾಮಿ ವಿರುದ್ಧ ಪಟ್ಟಣ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸಿದ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಿತಿ ಸಂಚಾಲಕ ಸೋಮಶಂಕರ್ ಕೋರಿದ್ದಾರೆ.
ಎನ್‌ಎಸ್‌ಎಸ್ ಶಿಬಿರ
ವಿದ್ಯಾವರ್ಧಕ ಕಾನೂನು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು ಏ. 1ರಿಂದ 7ರವರೆಗೆ ಮೈಸೂರು ತಾಲೂಕು ಇಲವಾಲ ಹೋಬಳಿಯ ಸಾಗರಕಟ್ಟೆ ಗ್ರಾಮದಲ್ಲಿ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಕೃಷಿಕ ಸಮಾಜದ ಸದಸ್ಯ ಕೆ. ಬಸವರಾಜು ಅವರು ಏ.1ರ ಸಂಜೆ 6ಕ್ಕೆ ಶಿಬಿರ ಉದ್ಘಾಟಿಸುವರು. ಕಾನೂನು ಅರಿವು- ನೆರವು ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭವು ಏ. 7ರ ಬೆಳಗ್ಗೆ 11ಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ್ ಶ್ರೀಪಾದ್ ಸಂಕೊಳ್ಳಿ ಉದ್ಘಾಟಿಸವರು. ಸ್ವಚ್ಛತೆ, ಶೈಕ್ಷಣಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸ, ಕಾನೂನು ಅರಿವು- ನೆರವು ಕಾರ್ಯಕ್ರಮ, ಆರೋಗ್ಯ ತಪಾಸಣೆ, ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಬಿ. ವಾಸುದೇವ, ಶಿಬಿರಾಧಿಕಾರಿ ಎಚ್.ಎಸ್. ಶಿವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಕೃಷ್ಣೇಗೌಡ ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ನೇಮಕ
ನಗರ ಕಾಂಗ್ರೆಸ್ ಚಾಮರಾಜ ಕ್ಷೇತ್ರದ ದೇವರಾಜ ಬ್ಲಾಕ್‌ನ ಉಪಾಧ್ಯಕ್ಷರಾಗಿ ಎ.ಟಿ. ಮೊಹಮ್ಮದ್, ದೇವರಾಜ ಅರಸ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ.ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಎನ್. ನಂಜುಂಡ, ದೇವರಾಜು ಅರಸು ಬ್ಲಾಕ್‌ನ ವಾರ್ಡ್ ನಂ. 11ರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಪುಷ್ಪ, ಉಫಾಧ್ಯಕ್ಷರಾಗಿ ಉಷಾ, ಕಾರ್ಯದರ್ಶಿಯಾಗಿ ಸಿ. ರೂಪ, ಯುವ ಕಾಂಗ್ರೆಸ್‌ನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಪಿ. ರಘುವೀರ್, ವಾರ್ಡ್ ನಂ. 7ರ ಕಾರ್ಯದರ್ಶಿಯಾಗಿ ಎಸ್. ಚಂದ್ರಶೇಖರ್, ವಾರ್ಡ್ ನಂ. 4ರ ಅಧ್ಯಕ್ಷರಾಗಿ ಕಾರ್ತಿಕ್, ಪ್ರಧಾನ ಕಾರ್ಯದರ್ಶಿಯಾಗಿ ಸುಂದರ್ ನೇಮಕವಾಗಿದ್ದಾರೆ. ನಗರ ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್. ಮಹೇಶ್ವರಿ, ನಗರ ಜೆಡಿಎಸ್ ಕಾರ್ಯದರ್ಶಿಯಾಗಿ ಮಂಜುನಾಥ್, ಬಿಎಸ್‌ಆರ್ ಕಾಂಗ್ರೆಸ್ ಕೆ.ಆರ್. ಕ್ಷೇತ್ರದ ಗೌರವ ಅಧ್ಯಕ್ಷರಾಗಿ ಎ.ಎನ್. ಯೋಗೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಂ. ಪುಟ್ಟರಾಜು, 5ನೇ ವಾರ್ಡ್ ಅಧ್ಯಕ್ಷರಾಗಿ ಪಿ. ನಾಗೇಂದ್ರ, 6ನೇ ವಾರ್ಡ್ ಅಧ್ಯಕ್ಷರಾಗಿ ಎಸ್. ದೇವರಾಜ್, 6ನೇ ವಾರ್ಡ್ ಅಧ್ಯಕ್ಷರಾಗಿ ಎಸ್. ವಿಶ್ವನಾಥ್ ನೇಮಕವಾಗಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೈಸೂರಿನ ರೈಲು ನಿಲ್ದಾಣದ 4ನೇ ಫ್ಲಾಟ್‌ಫಾರಂ ಶೌಚಾಲಯದ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಶನಿವಾರ ಪತ್ತೆಯಾಗಿದೆ. ಚಹರೆ- 50 ವರ್ಷ, 5.3 ಅಡಿ ಎತ್ತರ, ಕೃಶವಾದ ಶರೀರ, ಗೋದಿ ಮೈಬಣ್ಣ, ಕೋಲು ಮುಖ, ಗಡ್ಡ- ಮೀಸೆ ಬಿಟ್ಟಿದ್ದಾರೆ. ಹಸಿರು ಬಣ್ಣದ ತುಂಬು ತೋಳಿನ ಉಲ್ಲನ್ ಸ್ವೆಟರ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

