ಮೈಸೂರು

ಅಧ್ಯಕ್ಷರಿಲ್ಲದೇ ಆಯೋಗ ಅಂಗವಿಕಲ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.30
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರಿಲ್ಲದೆ ಅಂಗವಿಕಲವಾಗಿದೆ. ಚುನಾವಣೆ ಮುಗಿದ ನಂತರವಾದರೂ ಸರ್ಕಾರ ತುರ್ತಾಗಿ ಅಧ್ಯಕ್ಷರನ್ನು ನೇಮಿಸಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಆಶಿಸಿದರು.
ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹೊಸ ಆಯಾಮಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಸಂಸ್ಥೆಗೆ ಮುಖ್ಯಸ್ಥರು ಅವಶ್ಯಕ. ಅವರಿದ್ದಾಗ ನಡೆಯುವಷ್ಟು ಕೆಲಸ ಅವರ ಅನುಪಸ್ಥಿತಿಯಲ್ಲಿ ನಡೆಯುವುದಿಲ್ಲ. ಈ ದೌರ್ಬಲ್ಯವನ್ನು ನಮ್ಮ ಆಯೋಗವನ್ನು ಕಾಡುತ್ತಿದೆ. ಅಧ್ಯಕ್ಷರಿಲ್ಲದ ಆಯೋಗ ಅಂಗವಿಕಲವಾಗುವ ಸಾಧ್ಯತೆ ಇರುತ್ತದೆ ಎಂದರು.
ಈ ಭೂಮಿ ಉದಯವಾದಾಗಲೇ ಜನಿಸಿದ ಪ್ರತಿಯೊಂದು ಪ್ರಾಣಿಗೂ ಮೂಲಭೂತವಾಗಿ ಹಕ್ಕುಗಳು ಬಂದಿತೆ ಹೊರತು, ಯಾರಿಂದಲೋ ಬಳುವಳಿಯಾಗಿ ಬಂದಿಲ್ಲ. ಪ್ರತಿಯೊಬ್ಬರು ಪರಸ್ಪರ ಹಕ್ಕುಗಳನ್ನು ಗೌರವಿಸಿ, ರಕ್ಷಿಸಬೇಕು. ಜವಾಬ್ದಾರಿಯುತ ಸರ್ಕಾರವು ಮಾನವ ಹಕ್ಕುಗಳನ್ನು ರಕ್ಷಿಸಲು ವೇದಿಕೆ ಸ್ಥಾಪಿಸಿತು. ಈ ವೇದಿಕೆಯು ಕೇವಲ ಹಕ್ಕುಗಳ ರಕ್ಷಣೆ ಬಗ್ಗೆ ಘೋಷಣೆ ಮಾಡಿದರೆ ಸಾಲದು. ಆ ಘೋಷಣೆಯೇ ಪರಿಹಾರ ಸೂಚಿಸುವಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಆಶಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ಭಾರತೀಯ ಸಮಾಜದಲ್ಲಿ ಯಾವುದೇ ಕಾರ್ಯ ಮಾಡುವ ಮುನ್ನ ಜಾತಿ, ಧರ್ಮ ಎಳೆದು ತರುತ್ತಾರೆ. ಹೀಗಿದ್ದ ಮೇಲೆ ನಾವು ಮಾನವ ಹಕ್ಕು ರಕ್ಷಿಸಲು ಹೇಗೆ ಸಾಧ್ಯ. ಪ್ರತಿಯೊಬ್ಬರು ಬದುಕಲು ಸ್ವತಂತ್ರರು ಎಂಬುದು ದೇಶದಲ್ಲಿ ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ ಎಂದರು.
ಭಾರತ ಬಡನತನಕ್ಕೆ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ಮಾನವ ಹಕ್ಕುಗಳನ್ನು ಅತಿ ಹೆಚ್ಚಾಗಿ ಉಲ್ಲಂಘಿಸಲಾಗುತ್ತಿದೆ. ಜನರಿಂದ ಆರಿಸಿ ಬಂದ ಪ್ರತಿನಿಧಿಗಳು ಕುಡಿಯುವ ನೀರು, ಮೂಲ ಸವಲತ್ತು ಕಲ್ಪಿಸಲು ವಿಫಲರಾಗಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ ಕಾಡುವುದು ಸಹಜ. ಆದರೆ, ಚಳಿಗಾಲದಲ್ಲೂ ನೀರಿನ ಅಭಾವ ಕಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತವು ಬಡತನ, ಅನಕ್ಷರತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಇಲ್ಲಿನ ಮಹಿಳೆಯರು ಹೆರಿಗೆಗೆ ಮುಂಚೆ ಸಾಯುತ್ತಿದ್ದಾರೆ. ಹೀಗಾಗಿ ಮಾನವ ಹಕ್ಕುಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಟಿ.ಡಿ. ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಬಿ.ವಿ. ಸಾಂಬಶಿವಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿನಿ ವಿಪಂಚಿ ರಘುರಾಂ ಪ್ರಾರ್ಥಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಚ್.ಎಲ್ ಪ್ರಕಾಶ್ ವಂದಿಸಿದರು.
67 ಸಾವಿರ ಪ್ರಕರಣ ದಾಖಲು: ರಾಜ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಆಯೋಗದಲ್ಲಿ ಈವರೆಗೆ 67 ಸಾವಿರ ಕೇಸುಗಳು ದಾಖಲಾಗಿವೆ. ಆಯೋಗವೇ ಮಾಧ್ಯಮದ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ 6 ಸಾವಿರ ಕೇಸುಗಳನ್ನು ದಾಖಲಿಸಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಹೇಳಿದರು. ಪರಿಹಾರ ಒದಗಿಸುವಲ್ಲಿ ಆಯೋಗ ಮತ್ತು ಪೊಲೀಸರ ಪಾತ್ರ ಮಹತ್ತರವಾಗಿದೆ. ಒಂದು ವೇಳೆ ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ಆಯೋಗವೇ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತದೆ. ನಾಗರಿಕ ಸಮಾಜವು ಬದುಕಲು ಎಲ್ಲರೂ ಸ್ವತಂತ್ರರು ಎಂಬ ತಿಳಿವಳಿಕೆ ಮೂಡಿಸಿಕೊಳ್ಳಬೇಕು. ಶೋಷಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡಬೇಕು ಎಂದು ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.