ಭಾರತದ ಬಗ್ಗೆ ಹೆಮ್ಮೆ ಇರಲಿ: ಡಾ.ಪ್ರಕಾಶ್
ಕ.ಪ್ರ.ವಾರ್ತೆ ಮೈಸೂರು ಮಾ.29
ವೈಜ್ಞಾನಿಕವಾದ ಹಲವು ವಿಸ್ಮಯಗಳಿರುವ ಭಾರತದ ಬಗ್ಗೆ ಹೆಮ್ಮೆ ಇರಲಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ.ವಿ. ಪ್ರಕಾಶ್ ಹೇಳಿದರು.
ಮೈಸೂರು ವಿವಿ ಯುವರಾಜ ಕಾಲೇಜು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿರುವ ಯುರೇಕಾ- 2013 ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮುಖ್ಯ ಭಾಷಣ ಮಾಡಿದರು.
ಭಾರತದ ಸಂಗೀತ, ಕಲೆಯ ಎಲ್ಲಾ ಪ್ರಕಾರದಲ್ಲಿಯೂ ವೈಜ್ಞಾನಿಕವಾದ ಹಲವು ವಿಸ್ಮಯಗಳಿವೆ. ಅವುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ದೇಶದ ಬಗ್ಗೆ ಎಲ್ಲರಿಗೂ ಹೆಮ್ಮೆ ಇರಬೇಕು. ವಿದೇಶಕ್ಕೆ ಹೋಗಿ ಪೋಷಕರನ್ನು ನೋಡಲು ಮಾತ್ರ ಭಾರತಕ್ಕೆ ಬರುತ್ತೇವೆ ಎಂಬುದು ಸರಿಯಲ್ಲ. ಇಲ್ಲಿನ ವಿಸ್ಮಯಗಳನ್ನು ತಿಳಿಯಬೇಕು ಎಂದರು. ತಂಬೂರಿ, ವೀಣೆ ಮುಂತಾದ ಪರಿಕರಗಳ ತರಂಗದಲ್ಲಿ ದೈಹಿಕ ಚಿಕಿತ್ಸೆ ಇದೆ. ಗಣಿತದಲ್ಲಿ ರಾಸಾಯನಶಾಸ್ತ್ರ ಇದೆ. ನೀರಿನಲ್ಲಿ ವಿಜ್ಞಾನ ಇದೆ, ತಿನ್ನುವ ಅನ್ನದಲ್ಲಿ ವಿಜ್ಞಾನ ಅಡಗಿದೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆಳ ಅಧ್ಯಯನ ಮಾಡಬೇಕು. ದುಡ್ಡು ನೀಡಿದರೆ ಅಕ್ಕಿ ಸಿಗುತ್ತದೆ ಎಂಬ ಭ್ರಮೆಯಲ್ಲಿ ಮುಳುಗಬೇಡಿ. ಬತ್ತ ಬೆಳೆದು ಊಟ ಮಾಡಿದರೆ ಅನ್ನದ ಮಹತ್ವ ತಿಳಿಯುತ್ತದೆ ಮತ್ತು ವೈಜ್ಞಾನಿಕ ಜ್ಞಾನ ಬೆಳೆಯುತ್ತದೆ ಎಂದು ಪ್ರಕಾಶ್ ಹೇಳಿದರು.
ವಿಜ್ಞಾನ ನಿರ್ಲಕ್ಷ್ಯ ಬೇಡ: ದೇಶದಲ್ಲಿ 17 ಸಾವಿರ ಸಾಂಪ್ರದಾಯಿಕ ಆಹಾರ ಪದ್ಧತಿ ಇದೆ. ಅದರಲ್ಲಿ ವಿಜ್ಞಾನ ಇದೆ. ತೆಂಗಿನಮರದಲ್ಲಿ ಏನಿದೆ ಎಂಬ ನಿರ್ಲಕ್ಷ್ಯ ಬೇಡ. ಏಕೆಂದರೆ ನೀವು ಹುಟ್ಟುವ ಮುನ್ನ ಅದು ಹುಟ್ಟಿದೆ. ಅದರ ಬಗ್ಗೆ ತಿಳಿಯಬೇಕು. ಹಿಂದಿನವರಿಗೆ ವಿಜ್ಞಾನದ ಬಗ್ಗೆ ಏನು ಗೊತ್ತು ಎಂಬ ನಿರ್ಲಕ್ಷ್ಯ ಬೇಡ. ಸಂಸ್ಕೃತದಲ್ಲಿರುವ ಅನೇಕ ವಿಷಯವನ್ನು ಅನುವಾದಿಸಿ ತಿಳಿದುಕೊಳ್ಳಬೇಕು. ಸಿಮೆಂಟಿನ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಬೃಹತ್ ಕೆಆರ್‌ಎಸ್ ನಿರ್ಮಾಣವಾಗಿರುವ ಗಾರೆಯ ಬಗ್ಗೆ ಯಾರಾದರು ಸಂಶೋಧಿಸಿದ್ದೀರಾ ಎಂದು ಪ್ರಶ್ನಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ವಿವಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಮಾತನಾಡಿ, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧಕರ ಸಂಖ್ಯೆ ತೀರ ಕಡಿಮೆ ಇದೆ. ಅಲ್ಲದೆ ಮೂಲ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯ ಇದೆ ಎಂದರು. ಪ್ರಾಂಶುಪಾಲರಾದ ಪ್ರೊ.ಎಸ್.ಎನ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಹಾ ಜಬೀನ್, ಡಾ.ಆರ್. ಗಣೇಶ್, ಡಾ.ಎಂ. ರೂಬೀ ಸಲೆಸ್ಟಿನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

