ಮೈಸೂರು

ಕಾವೇರಿ ಉಳಿಸಿಕೊಳ್ಳೋದೇ ಗುರಿ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.29
ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಋಣ ತೀರಿಸುವ ಶಕ್ತಿಯನ್ನು ದೇವರು ನೀಡಿದರೆ ತೀರಿಸುತ್ತೇನೆ. ಇಲ್ಲವಾದರೆ ನೋವಲ್ಲಿಯೇ ಹೋಗುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ಜಯಪುರದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಶುಕ್ರವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಈಗ ಚುನಾವಣೆಯ ಬಗ್ಗೆ ಏನೂ ಮಾತನಾಡುವುದಿಲ್ಲ. ಕಾವೇರಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ಕಾವೇರಿ ತೀರ್ಪಿನಿಂದ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಶಕ್ತಿಕೊಡು ಎಂದು ತಾಯಿ ಚಾಮುಂಡೇಶ್ವರಿಯನ್ನು ಕೇಳುತ್ತಿದ್ದೇನೆ. ನನಗೆ ನಿಮ್ಮ ಋಣ ತೀರಿಸುವ ಶಕ್ತಿ ನೀಡಿದರೆ ತೀರಿಸುತ್ತೇನೆ. ಇಲ್ಲವಾದರೆ ನೋವಲ್ಲಿಯೇ ಹೋಗುತ್ತೇನೆ ಎಂದರು.
ನಮ್ಮ ಕಾವೇರಿ ಮಾತೆಯನ್ನು ಉಳಿಸಿಕೊಳ್ಳಬೇಕು. ಇದೆ ನನ್ನ ಗುರಿ. ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವ ನಾಲ್ಕು ಮಂದಿ ಮಂತ್ರಿಗಳಿದ್ದರೂ ಪ್ರಯೋಜನ ಆಗಲಿಲ್ಲ. ಕಾವೇರಿ ಐತೀರ್ಪಿನ ಅಧಿಸೂಚನೆ ಆದೇಶವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದು ನನ್ನು ಹುಟ್ಟುಹಬ್ಬದ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ. ನಾಚಿಗೆ ಆಗಬೇಕು ನಮ್ಮವರಿಗೆ. ಆಕೆಯ ಮನೆ ಬಾಗಿಲಿಗೆ ಹೋಗಿ ಬುದ್ಧಿ ಕಲಿತುಕೊಳ್ಳಿ ಎಂದು ಕಿಡಿಕಾರಿದರು.
ಕುರ್ಚಿಗಾಗಿ ರಾಜಕೀಯ ಮಾಡಿಲ್ಲ: ನಾನು ಎಂದೂ ಕುರ್ಚಿಗಾಗಿ ರಾಜಕೀಯ ಮಾಡಿಲ್ಲ. ಹೋರಾಟವನ್ನೂ ಮಾಡಿಲ್ಲ. ನನ್ನ ಮಗನನ್ನು ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿ ಇಲ್ಲ. ಬದಲಿಗೆ ಕಾವೇರಿ ನೀರು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದ್ರೋಹ ಬಗೆದಿವೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮನಮೋಹನ್ ಸಿಂಗ್ ಸರ್ಕಾರ ತಮಿಳುನಾಡು ಪರ ವಹಿಸಿಕೊಂಡಿತು. ಈಗ ಆಗಿರುವುದೇನು? ಇಂದಿಗೆ ಮಾತ್ರ ನೀರಿನ ಸಮಸ್ಯೆ ಉಂಟಾಗಿಲ್ಲ. ಮುಂದಿನ ಪೀಳಿಗೆಯೂ ಇದರ ನೋವು ಅನುಭವಿಸಬೇಕಾಗುತ್ತದೆ ಎಂದು ದೇವೇಗೌಡರು ತಿಳಿಸಿದರು.
ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದಾಗ ತ್ರಿಸದಸ್ಯ ಪೀಠದ ಬಗ್ಗೆ ನಂಬಿಕೆ ಇಲ್ಲ ಎಂದು ಅರ್ಜಿ ಹಾಕಲು ಹೇಳಿದ್ದೆ. ಅಲ್ಲದೆ ನಾನೊಬ್ಬನೇ ಕಾವೇರಿ ನೀರಿಗೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಮಾಡಿದ್ದೆ.
ಆದರೆ ಧರ್ಮಸಿಂಗ್ ಮತ್ತು ಎಸ್.ಎಂ. ಕೃಷ್ಣ ಸರ್ಕಾರ ಬಂದ ಬಳಿಕ ಏನಾಯಿತು ಎಂಬುದು ಗೊತ್ತಿದೆ ಎಂದ ಅವರು, ನದಿ ನೀರು ಹಂಚಿಕೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬ ಎಳೆಯನ್ನು ಹಿಡಿದು ಈಗ ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ ಎಂದರು.
ಆದರೆ ನನ್ನ ಹೇಳಿಕೆಗೆ ಈ ಭಾಗದ ಕಾಂಗ್ರೆಸ್ ನಾಯಕರು ಮೊಸಳೆ ಕಣ್ಣೀರು ಎನ್ನುತ್ತಾರೆ. ಬಿಜೆಪಿ ಜತೆ ಒಳಸಂಚು ಎನ್ನುತ್ತಾರೆ. ಆದರೆ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕಾವೇರಿ ವಿಷಯದಲ್ಲಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿಸಿದರು. ಜಿ.ಟಿ. ದೇವೇಗೌಡರು ಈಗ ಮತ್ತೆ ಜೆಡಿಎಸ್‌ಗೆ ಬಂದಿದ್ದಾರೆ. ಅವರ ಹಿಂದಿನ ದಿನಗಳನ್ನು ಈಗ ಪ್ರಸ್ತಾಪಿಸುವುದಿಲ್ಲ. ಪಿ.ಜಿ.ಆರ್. ಸಿಂಧ್ಯಾ ನನ್ನನ್ನೇ ಸೋಲಿಸಿದವರು. ಅವರನ್ನು ಕರೆದು ನಾನು ಗೃಹಮಂತ್ರಿ ಮಾಡಿದ್ದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು, ನಿವೃತ್ತ ಎಸಿಪಿ ಚಲುವರಾಜು, ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜು ಮುಂತಾದವರು ಜಿ.ಟಿ. ದೇವೇಗೌಡ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮಹಿಳೆಯರಿಂದ ಉದ್ಘಾಟನೆ: ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ದೇವೇಗೌಡರು ವೇದಿಕೆಯಲ್ಲಿದ್ದ ನಾಗವೇಣಿ ಎಂಬುವರಿಂದ ಕಾರ್ಯಕ್ರಮ ಉದ್ಘಾಟಿಸಿದರು. ಮುತ್ತೈದೆಯರಿಂದ ಕಾರ್ಯಕ್ರಮ ಉದ್ಘಾಟಿಸಬೇಕು ಎಂಬುದು ಶಾಸ್ತ್ರವಂತೆ. ಬಳಿಕವಷ್ಟೇ ದೀಪದ ಮತ್ತೊಂದು ತುದಿಯನ್ನು ದೇವೇಗೌಡ ಬೆಳಗಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ಶಿವಕುಮಾರ್, ಜಿಲ್ಲಾ ಖಜಾಂಚಿ ಬೆಳವಾಡಿ ಶಿವಮೂರ್ತಿ, ಬೀರಿಹುಂಡಿ ಬಸವಣ್ಣ, ಎಪಿಎಂಸಿ ಅಧ್ಯಕ್ಷ ಹೊನ್ನಗಿರಿಗೌಡ, ನಾಗವೇಣಿ, ಸಿದ್ದೇಗೌಡ, ಮಹದೇವ, ಹರೀಶ್, ಶರಾವತಿ ವೆಂಕಟೇಶ್, ಚಿಕ್ಕರಾಜೇಗೌಡ, ಅಬ್ದುಲ್ ಮುತಾಲಿಕ್, ಗೊರೂರು ಮಹೇಶ್ ಇತರರು ಇದ್ದರು.

2 ದಿನಗಳಲ್ಲಿ ಜೆಡಿಎಸ್ ಪಟ್ಟಿ
ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಬಂಧ ಒಂದೆರಡು ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಜತೆ ಮಾತನಾಡುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ತಾಲೂಕಿನ ಜಯಪುರದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಶುಕ್ರವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೊಂದು ಕ್ಷೇತ್ರದಲ್ಲಿ ಆರರಿಂದ ಏಳುಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಆದ್ದರಿಂದ ಪಟ್ಟಿ ಅಂತಿಮಗೊಳಿಸಲು ಕುಮಾರಸ್ವಾಮಿ ಅವರಿಗೆ ಕಷ್ಟವಾಗುತ್ತಿದೆ. ನಾನು ಕಾವೇರಿ ನೀರಿನ ಬಗ್ಗೆ ಹೆಚ್ಚು ಗಮನ ನೀಡಿದ್ದೇನೆ. ಒಂದೆರಡು ದಿನದಲ್ಲಿ ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿ ಪಟ್ಟಿ ಅಂತಿಮಗೊಳಿಸುವುದಾಗಿ ತಿಳಿಸಿದರು. ನನಗೆ ಆರೋಗ್ಯ ಸಮಸ್ಯೆ ಇರುವುದರಿಂದ ಕಾವೇರಿ ನದಿ ನೀರಿನ ಹಂಚಿಕೆ ಮತ್ತು ನನ್ನ ಹಿಂದಿನ ಹೋರಾಟಗಳ ಬಗ್ಗೆ ಹೆಚ್ಚು ಮಾತನಾಡಲು ಆಗುತ್ತಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.