ಕಾವೇರಿ ಅನ್ಯಾಯದ ವಿರುದ್ಧ ಹೋರಾಟಕ್ಕೆ ಶಕ್ತಿ ಕೊಡು
ಕ.ಪ್ರ.ವಾರ್ತೆ ಮೈಸೂರು ಮಾ.29
ಕಾವೇರಿ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಋಣ ತೀರಿಸುವ ಶಕ್ತಿಯನ್ನು ದೇವರು ನೀಡಿದರೆ ತೀರಿಸುತ್ತೇನೆ. ಇಲ್ಲವಾದರೆ ನೋವಲ್ಲಿಯೇ ಹೋಗುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ತಾಲೂಕಿನ ಜಯಪುರದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಶುಕ್ರವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡಿ, ನಾನು ಈಗ ಚುನಾವಣೆಯ ಬಗ್ಗೆ ಏನೂ ಮಾತನಾಡುವುದಿಲ್ಲ. ಕಾವೇರಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ಕಾವೇರಿ ತೀರ್ಪಿನಿಂದ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಶಕ್ತಿ ಕೊಡು ಎಂದು ತಾಯಿ ಚಾಮುಂಡೇಶ್ವರಿಯನ್ನು ಕೇಳುತ್ತಿದ್ದೇನೆ. ನನಗೆ ನಿಮ್ಮ ಋಣ ತೀರಿಸುವ ಶಕ್ತಿ ನೀಡಿದರೆ ತೀರಿಸುತ್ತೇನೆ. ಇಲ್ಲವಾದರೆ ನೋವಲ್ಲಿಯೇ ಹೋಗುತ್ತೇನೆ ಎಂದರು.
ನಮ್ಮ ಕಾವೇರಿ ಮಾತೆಯನ್ನು ಉಳಿಸಿಕೊಳ್ಳಬೇಕು. ಇದೆ ನನ್ನ ಗುರಿ. ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವ ನಾಲ್ಕು ಮಂದಿ ಮಂತ್ರಿಗಳಿದ್ದರೂ ಪ್ರಯೋಜನ ಆಗಲಿಲ್ಲ. ಕಾವೇರಿ ಐತೀರ್ಪಿನ ಅಧಿಸೂಚನೆ ಆದೇಶವನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದು ನನ್ನು ಹುಟ್ಟುಹಬ್ಬದ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ. ನಾಚಿಗೆ ಆಗಬೇಕು ನಮ್ಮವರಿಗೆ. ಆಕೆಯ ಮನೆ ಬಾಗಿಲಿಗೆ ಹೋಗಿ ಬುದ್ಧಿ ಕಲಿತುಕೊಳ್ಳಿ ಎಂದು ಕಿಡಿಕಾರಿದರು.
ಕುರ್ಚಿಗಾಗಿ ರಾಜಕೀಯ ಮಾಡಿಲ್ಲ: ನಾನು ಎಂದೂ ಕುರ್ಚಿಗಾಗಿ ರಾಜಕೀಯ ಮಾಡಿಲ್ಲ. ಹೋರಾಟವನ್ನೂ ಮಾಡಿಲ್ಲ. ನನ್ನ ಮಗನನ್ನು ಮುಖ್ಯಮಂತ್ರಿ ಮಾಡುವುದು ನನ್ನ ಕೈಯಲ್ಲಿ ಇಲ್ಲ. ಬದಲಿಗೆ ಕಾವೇರಿ ನೀರು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದ್ರೋಹ ಬಗೆದಿವೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮನಮೋಹನ್ ಸಿಂಗ್ ಸರ್ಕಾರ ತಮಿಳುನಾಡು ಪರ ವಹಿಸಿಕೊಂಡಿತು. ಈಗ ಆಗಿರುವುದೇನು? ಇಂದಿಗೆ ಮಾತ್ರ ನೀರಿನ ಸಮಸ್ಯೆ ಉಂಟಾಗಿಲ್ಲ. ಮುಂದಿನ ಪೀಳಿಗೆಯೂ ಇದರ ನೋವು ಅನುಭವಿಸಬೇಕಾಗುತ್ತದೆ ಎಂದು ದೇವೇಗೌಡರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

