ಪಪೂ ಪರೀಕ್ಷಾ ಮಂಡಳಿ 'ಗೋವಿಂದ'
ಬೆಂಗಳೂರು: 'ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದರು' ಎಂಬ ಮಾತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಇದು ಹೇಳಿ ಮಾಡಿಸಿದಂತಿದೆ.
ಇತ್ತೀಚೆಗೆ ಇಲಾಖೆಯಲ್ಲಿ ಬಡ್ತಿ ಪಡೆದ 35 ಸಿಬ್ಬಂದಿ ಪೈಕಿ 12 ಮಂದಿಯನು ಇನ್ನು ಕಾರ್ಯರೂಪಕ್ಕೆ ಬರದ ಪದವಿ ಪೂರ್ವ ಪರೀಕ್ಷಾ ಮಂಡಳಿಗೆ ನಿಯೋಜಿಸಲಾಗಿದೆ. ಬಡ್ತಿ ಆದೇಶ ಪಡೆದ ಯಾವುದೇ ಸಿಬ್ಬಂದಿ ಇತ್ತ ಮಂಡಳಿಯ ಪ್ರಾಥಮಿಕ ಕೆಲಸದಲ್ಲೂ ನಿರತರಾಗಿಲ್ಲ. ಬದಲಾಗಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಭಾಗ, ಅದೇ ಕುರ್ಚಿ, ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪದವಿ ಪೂರ್ವ ಪರೀಕ್ಷಾ ಮಂಡಳಿ ಎಂಬ ನೂತನ ವಿಭಾಗ ಪ್ರಾರಂಭಿಸಲು 2011ರಲ್ಲಿ ಸರ್ಕಾರ ನಿರ್ಧರಿಸಿತ್ತು. ಇದಾದ ಬಳಿಕ ಮಂಡಳಿಗೆ ಒಬ್ಬ ನಿರ್ದೇಶಕರನ್ನು ನೇಮಕ ಮಾಡಿರುವುದನ್ನು ಬಿಟ್ಟರೇ ಮತ್ಯಾವ ಕೆಲಸವಾಗಿಲ್ಲ.
ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಹುದ್ದೆಯಿಂದ ವಿ.ರಶ್ಮಿ ಅವರನ್ನು ಎತ್ತಂಗಡಿ ಮಾಡಿದ ಮೂರೇ ದಿನಕ್ಕೆ ಸುಮಾರು 35 ಅಧೀಕ್ಷಕರು ಹಾಗೂ ಶೀಘ್ರಲಿಪಿಗಾರರಿಗೆ ಬಡ್ತಿ ನೀಡಲಾಯಿತು. ಇವರಲ್ಲಿ ನಾಲ್ವರು ಸಿಬ್ಬಂದಿ ವಿರುದ್ಧ ದಾಖಲಾಗಿರುವ ದೂರುಗಳು ಬಾಕಿಯಿವೆ. ಆ ದೂರುಗಳ ಬಗ್ಗೆ ಇಲಾಖೆ ವಿಚಾರಣೆಯೇ ನಡೆದಿಲ್ಲ.
ಪರೀಕ್ಷಾ ಮಂಡಳಿ ಎಲ್ಲಿದೆ?: ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪ್ರತ್ಯೇಕ ಮಂಡಳಿಯಿದೆ. ಪ್ರೊ.ಆರ್.ಗೋವಿಂದ್ ವರದಿಯಲ್ಲಿ ಹೇಳಿರುವ ಪ್ರಕಾರ ಇಂತಹ ಪ್ರತ್ಯೇಕ ಮಂಡಳಿಗಳ ಅಗತ್ಯವಿಲ್ಲ. ಪದವಿಪೂರ್ವ ಹಾಗೂ ಪ್ರೌಢ ಶಿಕ್ಷಣ ವ್ಯವಸ್ಥೆಯ ಬದಲು ಮಾಧ್ಯಮಿಕ ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಲಿದೆ. ಇದಲ್ಲದೇ ರಾಜ್ಯದಲ್ಲಿ ಒಂದೇ ಪರೀಕ್ಷಾ ಮಂಡಳಿ ಕಾಯನಿರ್ವಹಿಸಬೇಕು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೆ ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷಾ ಮಂಡಳಿಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಗೋವಿಂದ್ ವರದಿ ಅನುಷ್ಠಾನದ ಬಳಿಕ ಇವುಗಳ ಹಣೆಬರಹ ನಿರ್ಧರಿಸಿದರಾಯಿತು ಎಂದು ಭಾವಿಸಿ, ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ಅಭಿವೃದ್ಧಿಪಡಿಸುವ ಕೆಲಸವಾದರೂ ಆಗುತ್ತಿದೆಯೇ? ಖಂಡಿತಾ ಇಲ್ಲ.
ಸಿಬ್ಬಂದಿ ವಿರುದ್ಧ 14 ದೂರುಗಳು: ಕಳೆದ ಒಂದೂವರೆ ದಶಕದಿಂದ ಇದೇ ಇಲಾಖೆಯಲ್ಲಿ ಒಬ್ಬ ಅಧೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕೆಲ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆಯ ಆಡಳಿತ ಶಾಖೆಯಿಂದ ದೊಮ್ಮಲೂರಿಗೆ ವರ್ಗಾಯಿಸಲಾಗಿತ್ತು. ರಶ್ಮಿ ಅವರಿಗೆ ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು.
ಸೆಪ್ಟೆಂಬರ್ 17ರಂದು ರಾಜ್ಯ ಸರ್ಕಾರ ಈ ಅಧೀಕ್ಷಕರು ಸೇರಿದಂತೆ 35 ಸಿಬ್ಬಂದಿ ಬಡ್ತಿ ಆದೇಶ ನೀಡಿದೆ. ಇದಕ್ಕೂ ಒಂದು ವಾರ ಮುಂಚೆ ಇದೇ ಅಧಿಕಾರಿ ವಿರುದ್ಧ ಸಾರ್ವಜನಿಕರಿಂದ ದೂರೊಂದು ಬಂದಿತ್ತು. ಆದರೆ
ಅದನ್ನು ವ್ಯವಸ್ಥಿತವಾಗಿ ಮುಚ್ಚಿಡಲಾಗಿತ್ತು. ಇನ್ನುಳಿದ ಪ್ರಕರಣಗಳ ವಿಚಾರಣೆ ನಡೆಸದೇ ಪದವಿಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಗೆ ಮತ್ತೆ ಬಡ್ತಿ ನೀಡಲಾಗಿದೆ.
ಈ ಬಡ್ತಿ ಸಂರ್ದರ್ಭದಲ್ಲಿ ಜ್ಯೇಷ್ಠತೆ ಆಧಾರದ ಮೇಲೆ ಕೌನ್ಸೆಲಿಂಗ್ ನಡೆಸಿಲ್ಲ. ಹಿರಿಯ ಅಧಿಕಾರಿಗಳ ಆಪ್ತರ ತಂಡಕ್ಕೆ ಮಾತ್ರ ಮನ್ನಣೆ ನೀಡಲಾಗಿದೆ. ಕೌನ್ಸೆಲಿಂಗ್ ಮೂಲಕ ಮಾತ್ರ ಬಡ್ತಿ ನೀಡಬೇಕು ಎಂದು ಹೈಕೋರ್ಟ್‌ನಿಂದ ಆದೇಶ ಕೂಡ ಸರ್ಕಾರಕ್ಕಿದೆ. ಮತ್ತೊಂದೆಡೆ ಬಡ್ತಿ ನೀಡುವಾಗ ನಿವೃತ್ತಿ ಅಥವಾ ಬೇರೆ ರೂಪದಿಂದ ತೆರವಾದ ಹುದ್ದೆಗಳಿಗೆ ಆದ್ಯತೆ ನೀಡಬೇಕು. ಈ ನಿಯಮವನ್ನು ಇಲಾಖೆ ಸಂಪೂರ್ಣವಾಗಿ ಗಾಳಿಗೆ ತೂರಿದೆ.
ನಿರ್ದೇಶಕರು ಏನು ಮಾಡುತ್ತಿದ್ದಾರೆ?
ಈ ಮೊದಲೇ ತಿಳಿಸಿದಂತೆ ಪರೀಕ್ಷಾ ಮಂಡಳಿಗೆ ಒಬ್ಬ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಆದರೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಕಡತಗಳು ಮಂಡಳಿಯ ನಿರ್ದೇಶಕರಿಗೆ ಬರುತ್ತಿಲ್ಲ. ಕೇವಲ ನೆಪ ಮಾತ್ರಕ್ಕೆ ಇವರು ನಿರ್ದೇಶಕರಾಗಿದ್ದಾರೆ. ಮಂಡಳಿಯಲ್ಲಿ ಯಾವುದೇ ಕೆಲಸವಾಗುತ್ತಿಲ್ಲ. ಮಂಡಳಿಗೊಬ್ಬ ನಿರ್ದೇಶಕ, ಇದರ ಹೆಸರಲ್ಲಿ ಹತ್ತಾರು ನೌಕರರ ಅವಶ್ಯಕತೆ ಏನಿದೆ? ಇಲಾಖೆಯ ಉನ್ನತ ಮೂಲಗಳ ಪ್ರಕಾರ ಬಡ್ತಿ ಪಡೆದ ಯಾವುದೇ ಸಿಬ್ಬಂದಿಗೆ 6 ತಿಂಗಳಿಂದ ಸಂಬಳವೂ ದೊರಕುತ್ತಿಲ್ಲ.
ಬಡ್ತಿ ಪಡೆದ ಸಿಬ್ಬಂದಿ ಪಟ್ಟಿ
ಅಧೀಕ್ಷಕರು: ವಿಮಲ ಬಿ, ಬಾಲ್ಕಿ ವೈಜಿನಾಥ್, ವಿನಾಯಕ ಎಂ.ಜಿ, ದಾಕ್ಷಾಯಿಣಿ ಟಿ.ಸಿ, ಸುರೇಶ್ ಎಸ್.ವಿ, ನಾಗೇಶ್ ಎಸ್, ಪ್ರಭಾಕರ್.ಪಿ.ಎನ್, ಮಂಜುನಾಥ್.ಎಚ್, ಶಿವಶರಣಪ್ಪ ಸರಡಗಿ, ಸೂರ್ಯಪ್ರಕಾಶ್ ಕೆ.ಸಿ, ಮೀನಾಕ್ಷಿ ಸುಂದರಂ
ಶೀಘ್ರಲಿಪಿಗಾರರು: ಗಂಗಮ್ಮ ಎನ್.ಪಿ, ಪುಷ್ಪಾವತಿ ಎ.ಕೆ, ಜ್ಯೋತಿ ಕುಲಕರ್ಣಿ, ನಿತಿನ್ ಬಿ.ಟಿ, ರಮೇಶ್.ಎಂ, ವಿಶ್ವೇಶ್ವರ ಎಸ್.ಬಿ, ರಾಧಮ್ಮ, ಭಾಗ್ಯಲಕ್ಷ್ಮಿ, ಪ್ರಸನ್ನ ಕೆ, ಹೆಚ್.ಸಿ.ಹಿರಣ್ಣಯ್ಯ, ಸದಾಶಿವಪ್ಪ ಎಂ, ಆಶಾರಾಣಿ, ಬಿ.ಎಂ.ರಾಜೇಗೌಡ, ಜೆ.ಎನ್.ವಿರೂಪಾಕ್ಷಪ್ಪ, ಚಂದ್ರಕಾಂತ್ ವೆಂಕಮನಿ, ಅಶ್ವತ್ಥ ನಾರಾಯಣ, ಎಸ್.ಎಸ್.ಕಲಾದಗಿ, ಎಂ.ಎನ್.ವಿಜಯಲಕ್ಷ್ಮಿ, ಸಿದ್ದಲಿಂಗಸ್ವಾಮಿ ಎಂ.ಬಿ, ಸುಭಾಷಚಂದ್ರ, ಜಯಲಕ್ಷ್ಮಿ ಎಸ್.ಎಂ, ವರಹಾಲಮ್ಮ ಪಿ, ಪುರಂದರ ಪಿ, ಯಲ್ಲಪ್ಪ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

