ಗುಂಡು ಎಸೆತ ಆಟದ ವೇಳೆ ವಿದ್ಯಾರ್ಥಿ ಸಾವು
ಹುಣಸೂರು: ಶಾಲೆಯ ಆವರಣದಲ್ಲಿ ಗುಂಡು ಎಸೆತ ಆಟದ ಅಭ್ಯಾಸದ ವೇಳೆ ವಿದ್ಯಾರ್ಥಿಯೋರ್ವನ ತಲೆಗೆ ಆಕಸ್ಮಿಕವಾಗಿ ತಗುಲಿ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಇಲ್ಲಿನ ಹಳೇ ತಾಲೂಕು ಕಚೇರಿ ಬಳಿಯ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಶ್ರೀಧರ್ (12) ಮೃತ ವಿದ್ಯಾರ್ಥಿ. ಈತ ಹನಗೋಡು ಬಳಿಯ ಕಿರಂಗೂರಿನ ವೇದಾವತಿ ಮತ್ತು ಕುಮಾರ್ ಅವರ ಅವಳಿ ಮಕ್ಕಳಲ್ಲಿ ಒಬ್ಬ,
ತಾಲೂಕು ಮಟ್ಟದ ಕ್ರೀಡಾಕೂಟವಿದ್ದರಿಂದ ಶುಕ್ರವಾರ ಮಧ್ಯಾಹ್ನ ಊಟದ ಬಿಡುವಿನ ವೇಳೆ ವಿದ್ಯಾರ್ಥಿಗಳೆ ಆಟವಾಡುತ್ತಿದ್ದಾಗ ಗುಂಡು ಎಸೆತದ ವೇಳೆ ಅರಿವಿಲ್ಲದೆ ಬಂದ ಈತನ ತಲೆಯ ಮೇಲೆ ಬಿದ್ದಿದೆ. ತಕ್ಷಣ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟನು.
ವಿಷಯ ತಿಳಿಯುತ್ತಿದ್ದಂತೆ ಕುಟುಂಬದವರ ರೋದನ ಮುಗಿಲುಮಟ್ಟಿತು. ಬಿಇಒ ಕಚೇರಿ ಬಳಿ ಗ್ರಾಮಸ್ಥರು ಜಮಾಯಿಸಿ ಪ್ರತಿಭಟಿಸಿದರು.
ಶಾಸಕ ಎಚ್.ಪಿ. ಮಂಜುನಾಥ್ ಮೃತಪಟ್ಟ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಸಂಬಂಧಿಸಿದ ಶಿಕ್ಷಕರು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಾಲಕಿ ಮೇಲೆ ಅತ್ಯಾಚಾರ: ವ್ಯಕ್ತಿ ಬಂಧನ
ಮೈಸೂರು: ಐದಾರು ತಿಂಗಳಿಂದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭವತಿಯಾಗಲು ಕಾರಣನಾದ ವ್ಯಕ್ತಿಯೊಬ್ಬನನ್ನು ಉದಯಗಿರಿ ಠಾಣೆ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.ಗೌಸಿಯಾನಗರ ನಿವಾಸಿ ಮಕ್ಬುಲ್ ಪಾಷ (53) ಬಂಧಿತ ಆರೋಪಿ. ಸಣ್ಣ ಅಂಗಡಿಯೊಂದನ್ನು ನಡೆಸುತ್ತಿರುವ ಈತನಿಗೆ ವಿವಾಹವಾಗಿ ಮಕ್ಕಳು ಮತ್ತು ಮೊಮ್ಮಕ್ಕಳೂ ಇದ್ದಾರೆ.
ಈತನ ಅಂಗಡಿಗೆ ಅಕ್ಕಿ ತರಲು ಬಂದಿದ್ದ ಪಕ್ಕದ ಮನೆಯ 14 ವರ್ಷದ ಬಾಲಕಿಯನ್ನು ಹೆದರಿಸಿ ಆಕೆಯ ಮೇಲೆ 5-6 ತಿಂಗಳಿಂದ ಅತ್ಯಾಚಾರ ಎಸಗಿದ್ದಾನೆ. ಗುರುವಾರ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಪೋಷಕರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆಯ ಬಳಿಕ ಬಾಲಕಿ 4 ತಿಂಗಳು ಗರ್ಭಿಣಿ ಎಂಬ ವಿಚಾರ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ನೀಡಿದ ದೂರಿನ್ವಯ ಉದಯಗಿರಿ ಠಾಣೆಯ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್, ಎಸ್‌ಐಗಳಾದ ನರೇಂದ್ರಬಾಬು, ಸಾಗರ್, ಅಫಿಜಾ ಬೇಗಂ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಕ್ಬುಲ್ ಪಾಷನನ್ನು ಪೊಲೀಸರು ಶುಕ್ರವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೆಲಸಗಾರನ ಮೇಲೆ ಎರಗಿದ ಮೈಸೂರು ಅರಮನೆ ಸಾಕಾನೆ
ಮೈಸೂರು: ಮೈಸೂರು ಅರಮನೆಯಲ್ಲಿ ಸಾಕಾನೆಯೊಂದು ಕೆಲಸಗಾರನ್ನು ಸೊಂಡಲಿನಿಂದ ಎತ್ತಿ ಎಸೆದ ಘಟನೆ ಶುಕ್ರವಾರ ನಡೆದಿದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಅರಮನೆ ಆವರಣದಲ್ಲಿ ಕೆಲವು ಆನೆಗಳನ್ನು ಸಾಕಿದ್ದಾರೆ.
ಅವುಗಳಲ್ಲಿ 20 ವರ್ಷದ ರಾಜಿ ಎಂಬ ಹೆಣ್ಣಾನೆಯೂ ಒಂದು. ಈ ಆನೆಯನ್ನು ನೋಡಿಕೊಳ್ಳುತ್ತಿದ್ದ ಪಾಷ ಎಂಬವರು ರಜೆ ಇದ್ದ ಹಿನ್ನೆಲೆಯಲ್ಲಿ ಸ್ವಚ್ಛತಾ ಕೆಲಸಗಾರ ಪುಟ್ಟ ಎಂಬವರು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಲಗಿದ್ದ ಆನೆ ಏಕಾಏಕಿ ಎದ್ದು ನಿಂತಿತು. ಆನೆಯನ್ನು ತೊಳೆಯುವ ಸಲುವಾಗಿ ಮತ್ತೆ ಮಲಗಿಸಲು ಪುಟ್ಟ ಪ್ರಯತ್ನಿಸಿದಾಗ ಸೊಂಡಿಲಿನಿಂದ ಹೊಡೆದಿದೆ. ಇದರಿಂದ ಪುಟ್ಟ ದೂರ ಹೋಗಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಗಾಯವೂ ಆಗಿಲ್ಲ. ಅಲ್ಲೇ ಇದ್ದ ಇತರೆ ಆನೆಗಳ ಮಾವುತರು ಕೂಡಲೇ ಧಾವಿಸಿ ರಾಜಿ ಆನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕೆಲಹೊತ್ತು ರೊಚ್ಚಿಗೆದ್ದಿದ್ದ ರಾಜಿ ಈಗ ಸಮಚಿತ್ತದಲ್ಲಿದೆ. ಈ ಘಟನೆಯಿಂದ ಆನೆ ಮಾವುತರು ಮತ್ತು ಸಿಬ್ಬಂದಿಯಲ್ಲಿ ಕೆಲವು ಕಾಲ ಆತಂಕ ನಿರ್ಮಾಣವಾಗಿತ್ತು.
ಬಹಿಷ್ಕಾರ: ಜಾಂಪಾಡ್‌ನತ್ತ ಶಾಸಕರು, ಜಿಲ್ಲಾಡಳಿತ
ಬೀದರ್: ಕೊನೆಗೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬಹಿಷ್ಕಾರದಿಂದ ನೊಂದಿರುವ ದಲಿತ ಕುಟುಂಬಗಳ ಸಮಸ್ಯೆ ಆಲಿಸಲು ಮುಂದಾಗಿದೆ. ಆದರೆ, ಯಾವುದೇ ರೀತಿಯ ನಿರ್ಣಯಕ್ಕೆ ಬರಲಾಗದೆ ಬರಿಗೈಯಲ್ಲಿ ವಾಪಸ್ಸಾಗಿದೆ.
ಸಮೀಪದ ಜಾಂಪಾಡ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿದ್ದ ದಲಿತ ಕುಟುಂಬಗಳಿಗೆ ಹೊಟ್ಟೆಪಾಡಿಗಾಗಿನ ದಿನಗೂಲಿ ಮತ್ತು ಜಾನುವಾರುಗಳಿಗೆ ಮೇವುಣಿಸುವುದಕ್ಕೂ ಬಹಿಷ್ಕಾರ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ, ಜಿಪಂ ಅಧ್ಯಕ್ಷೆ ಸಂತೋಷಮ್ಮ, ಜಿಲ್ಲಾಧಿಕಾರಿ ಡಾ. ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿಪಂ ಸಿಇಓ ಉಜ್ವಲಕುಮಾರ ಘೋಷ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಆದರೆ, ಸವರ್ಣಿಯರು ಮತ್ತು ದಲಿತರ ಮಧ್ಯೆ ಹೊಂದಾಣಿಕೆ ಮೂಡದ್ದರಿಂದ ಬರಿಗೈಯಲ್ಲಿ ಶಾಸಕರು ಮತ್ತು ಅಧಿಕಾರಿಗಳು ವಾಪಸ್ಸಾಗಬೇಕಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

