ಮಂಡ್ಯ

ನಾಲೆಗಳಿಗೆ ನೀರು ಹರಿಸಿ

Published On :

ಕ.ಪ್ರ. ವಾರ್ತೆ, ಮಂಡ್ಯ, ಜು.30
ವಿಶ್ವೇಶ್ವರಯ್ಯ ನಾಲೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಡಸುವಂತೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಾನವ ಸರಪಳಿ ರಚಿಸಿದರು. ಇದರಿಂದ ಸುಮಾರು 20 ನಿಮಿಷಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಮತ್ತು ಮೈಷುಗರ್ ಅಧ್ಯಕ್ಷ ಮಹದೇವ ಪ್ರಸಾದ್ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಸುಳ್ಳು ಭರವಸೆ ನೀಡಿದ್ದಾರೆ. ಈ ಕೂಡಲೇ ಕೆರಗೋಡು - ಕೊಪ್ಪ, ಬೆಸಗರಹಳ್ಳಿ ಭಾಗದ ನಾಲೆಗಳಿಗೆ ನೀರು ಹರಿಸುವ ಮೂಲಕ ಜನಜಾನುವಾರುಗಳಿಗೆ ಹಾಗೂ ಬೆಳೆಗಳನ್ನು ರಕ್ಷಿಸುವಂತೆ ಆಗ್ರಹಿಸಿದರು.
ಆತಂಕ: ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಜಮೀನಿನಲ್ಲಿ ಬತ್ತ, ಕಬ್ಬು, ಹಿಪ್ಪುನೇರಳೆ, ತೆಂಗು ಹಾಗೂ ತೋಟದ ಬೆಳೆಗಳು ಬೆಳೆದು ನಿಂತಿವೆ. ಈಗಾಗಲೇ ಮಳೆಯೂ ಇಲ್ಲದೆ ಹುಲಿಕೆರೆ ಟನಲಲ್ನ ದುರಸ್ತಿ ನೆಪದಲ್ಲಿ ನಾಲೆಗಳ ಮೂಲಕ ನೀರು ಹರಿಯದೆ ಕೋಟ್ಯಂತರ ರು. ಫಸಲು ಒಣಗುತ್ತಿವೆ ಎಂದು ಧರಣಿ ನಿರತರು ಆತಂಕ ವ್ಯಕ್ತಪಡಿಸಿದರು.
ಕೃಷಿ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ನೀರಿನ ಲಭ್ಯತೆ ಆಧರಿಸಿ ಬೆಳೆ ಬಗ್ಗೆ ಜಂಟಿಯಾಗಿ ಸಮೀಕ್ಷೆ ಮಾಡದೆ ರೈತರ ನಷ್ಟಕ್ಕೆ ಕಾರಣಕರ್ತರಾಗಿದ್ದಾರೆ. ಇದಕ್ಕೆ ರಾಜ್ಯಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಕೃಷ್ಣರಾಜಸಾಗರ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿ, ಅಣೆಕಟ್ಟೆ ಭರ್ತಿಯಾಗುತ್ತಿದ್ದರೂ ಬೆಳೆಗಳಿಗೆ ನೀರು ಕೊಡದೆ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಈ ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. ಬೆಳೆಗಳು ಕೈಗೆ ಸಿಗದೆ ರೈತರು ಕಂಗಾಲಾಗಿದ್ದು, ಬ್ಯಾಂಕ್ ಗಳ ಸಾಲ ವಸೂಲಾತಿ ನೆಪದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಆದ ಕಾರಣ ಬೆಳೆ ನಷ್ಟದಿಂದ ಕಂಗಲಾಗಿರುವ ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು.
ಬಲವಂತ ವಸೂಲಿ ಬೇಡ: ಮಂಡ್ಯ ಜಿಲ್ಲೆಯೂ ಬರ ಪ್ರದೇಶವಾದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಂದಾಯ, ವಿದ್ಯುತ್ ಬಾಕಿಯನ್ನು ಬಲವಂತವಾಗಿ ವಸೂಲಿ ಮಾಡಬಾರದು. ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಧರಣಿ ನಿರತರು ಒತ್ತಾಯಿಸಿದರು.
ರೈತರು ಧರಣಿ ಮುಗಿಸಿದ ತರುವಾಯ ಬೈಕ್ ಮತ್ತು ಲಾರಿಗಳಲ್ಲಿ ಕೆಆರ್‌ಎಸ್‌ನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಲು ತೆರಳಿದರು. ರೈತಸಂಘ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ಕಾರ್ಯದರ್ಶಿ ಶಂಭೂನಹಳ್ಳಿ ಸುರೇಶ್, ಮುಖಂಡರಾದ ನಂಜುಂಡಯ್ಯ ಮತ್ತಿತರರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.