ಮಂಡ್ಯ

ವಾಕರಿಕೆ ತಂದ ಅವಧಿ ಹಂಚಿಕೆ

Published On :

 ವಿಶೇಷ ವರದಿ  
ಕನ್ನಡಪ್ರಭ ವಾರ್ತೆ. ಮಂಡ್ಯ, ಜು. 27
ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲಿರುವ ಸಣ್ಣ ಪುಟ್ಟ ಸೊಸೈಟಿಗಳ ಹಂತದಲ್ಲಿರುವ ಆಡಳಿತ ಮಂಡಳಿಯಲ್ಲೂ ಅಧ್ಯಕ್ಷ - ಉಪಾಧ್ಯಕ್ಷರ ಹುದ್ದೆಯ ಅಧಿಕಾರದ ಅವಧಿಯನ್ನು ಹಂಚಿಕೆ ಮಾಡಿಕೊಳ್ಳುವ ಸಂಪ್ರದಾಯ ವಾಕರಿಕೆ ಬಂದಂತಾಗಿದೆ.   
 ಆಡಳಿತ ಪಕ್ಷದ ಆಯ್ಕೆಯಾಗಿರುವ ಸಮರ್ಥ ಹಾಗೂ ಅಸಮರ್ಥರೆಲ್ಲರಿಗೂ ನಾನು ಜಿಪಂ ಅಧ್ಯಕ್ಷ - ಉಪಾಧ್ಯಕ್ಷನಾಗಿದ್ದೆ ಎಂದು ನಿವೃತ್ತಿಯ ನಂತರ ಮನೆಯ ಮುಂದೆ ಬೋರ್ಡ್ ಹಾಕಲು ಒಂದು ಹುದ್ದೆ ಬೇಕು ಎನ್ನುವ ಕೆಟ್ಟ ಚಾಳಿ ಈಗಿನ ಜನಪ್ರತಿನಿಧಿಗಳಲ್ಲಿ ಅಂಟಿಕೊಂಡಿದೆ.
 ಮೊನ್ನೆ ಮಂಡ್ಯ ಜಿಪಂ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಜಿಲ್ಲಾ ಪಂಚಾಯ್ತಿ ಬಹುಮತ ಹೊಂದಿರುವ ಜೆಡಿಎಸ್ ಅಧಿಕಾರದಲ್ಲಿದೆ. ಸಹಜವಾಗಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಜೆಡಿಎಸ್ ಸದಸ್ಯರಿಗೆ ಅಧಿಕಾರ ಸಿಕ್ಕಿದೆ.
 ಆದರೆ 20 ತಿಂಗಳ ಅಧಿಕಾರ ಅವಧಿಯಲ್ಲಿ ಮೂರು ಮಂದಿ ಅಧ್ಯಕ್ಷರು, ಉಪಾಧ್ಯಕ್ಷರನ್ನು ಮಾಡುವ ನಿರ್ಧಾರವನ್ನು ಈಗಲೇ ಮಾಡಿರುವ ಜೆಡಿಎಸ್ ನಾಯಕರು ಜಿಲ್ಲೆಯ ಜನರಿಗೆ ಎಂತಹ ಆಡಳಿತ ಕೊಡುತ್ತಾರೆ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಜೆಡಿಎಸ್ ಆಡಳಿತದಲ್ಲಿರುವ ಯಾವುದೇ ಜಿ.ಪಂಗೆ ಸರ್ಕಾರದ ಮಾಮೂಲಿ ಅನುದಾನ ಬಿಟ್ಟರೆ  ಬೇರೆ ಯಾವುದೇ ವಿಶೇಷ ಅನುದಾನ  ಸಿಗುವುದಂತೂ  ಲೆಕ್ಕಕ್ಕೆ ಇಟ್ಟುಕೊಳ್ಳದ
ಮಾತು. ಆದರೂ ಬಂದಿರುವ ಅನುದಾನದಲ್ಲಿ ಬಂದಷ್ಟು ಹಂಚಿಕೆ ಮಾಡಿಕೊಳ್ಳುವ ಹುನ್ನಾರ ಹಾಗೂ ಅಧಿಕಾರದ ಸುಖ ಅನುಭವಿಸುವ ಅವಕಾಶವನ್ನು ಜಿಪಂ ಸದಸ್ಯರು ಲೆಕ್ಕಾಚಾರ ಹಾಕಿ ಮಾಡುತ್ತಿದ್ದಾರೆ.
6 ತಿಂಗಳಲ್ಲಿ ಯಾವ ಸಾಧನೆ: ಒಬ್ಬ ನೂತನ ಜಿಪಂ ಅಧ್ಯಕ್ಷರಿಗೆ 6 ತಿಂಗಳ ಅವಧಿ ನಿಗದಿ ಮಾಡಿದರೆ ಯಾವ ಸಾಧನೆ ಮಾಡಲು ಸಾಧ್ಯ? ಕಚೇರಿ ವ್ಯವಹಾರ ತಿಳಿದುಕೊಳ್ಳವುದಕ್ಕೆ 3 ತಿಂಗಳು ಸಾಕಾಗುವುದಿಲ್ಲ. ಇನ್ನು ಜಿಲ್ಲೆಯ ಅಭಿವೃದ್ಧಿಗೆ ಯಾವ ಪ್ಲಾನ್ ಮಾಡಲು ತಾನೆ ಸಾಧ್ಯ? ಇನ್ನು ಅಧಿಕಾರದಲ್ಲಿರುವ ಜಿಪಂ ಅಧ್ಯಕ್ಷರು ಮಹಿಳೆಯಾಗಿದ್ದರಂತೂ ಮುಗಿದೇ ಹೋಯ್ತು.
 ಗಂಡ, ಮಾವ, ಸಹೋದರಂತಹವರದ್ದೇ ದರ್ಪ -ದರ್ಬಾರು. ಜೊತೆಗೆ ಆಡಳಿತ, ವ್ಯವಹಾರ ನಿರ್ವಹಣೆಯನ್ನು ಇವರುಗಳೇ ಮಾಡುತ್ತಾರೆ. ಮಹಿಳಾ ಅಧ್ಯಕ್ಷರು ಕೇವಲ ನೆಪ ಮಾತ್ರಕ್ಕೆ ಇರುತ್ತಾರೆಂಬ ದೂರು ಇದ್ದೇ ಇದೆ.   
ಗೊತ್ತಿರುವ ವಿಚಾರ: ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಜೆಡಿಎಸ್ ನಾಯಕರು ಗೊತ್ತು. ಅಧಿಕಾರ ಹಂಚಿಕೆ ಮಾಡದೇ ಹೋದರೆ ಸದಸ್ಯರು ಒಮ್ಮತದಿಂದ ಇರುವುದಿಲ್ಲ. ಕಾಂಗ್ರೆಸ್ ಬೆಂಬಲ ಪಡೆದುಕೊಂಡು ಪಕ್ಷದಿಂದ  ಜಿಗಿದು ಹೋಗುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಂಡು ಈ ರೀತಿ ಅಧಿಕಾರ ಹಂಚಿಕೆ ಮಾಡುವ ಅನಿವಾರ್ಯತೆ ಇದೆ ಎನ್ನುತ್ತವೆ ಜೆಡಿಎಸ್ ಮೂಲಗಳು.  
ಕೆಲಸ ಮಾಡಿಸಲು ಸಾಧ್ಯವೇ?: ತಮ್ಮ ಪಾಲಿಗೆ ಕಾಮಧೇನು ರೀತಿಯಲ್ಲಿ ಬಂದಿರುವ 6 ತಿಂಗಳ ಅವಧಿಯ ಅಧ್ಯಕ್ಷಗಿರಿಯಿಂದ ಬಂದಷ್ಟು ಬಾಚುವುದರಲ್ಲಿ ಹೆಚ್ಚು ಗಮನ ಇಟ್ಟಿರುತ್ತಾರೆಯೇ ಹೊರತು, ಅಧಿಕಾರಿಗಳಿಂದ ಕೆಲಸ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಅಧ್ಯಕ್ಷರ ಹತ್ತಿರದ ಸಂಬಂಧಿಗಳೇ ಜಿಪಂ ಗುತ್ತಿಗೆದಾರರು. ಮಾಡಿದ ಕಾಮಗಾರಿಗಳನ್ನು ಮತ್ತೆ ಮಾಡಿಸಿದ ರೀತಿಯಲ್ಲಿ ಕಾಗದ ಪತ್ರಗಳನ್ನು ಸಿದ್ಧಪಡಿದ್ಧ್ಬಿಲ್ ಮಾಡುವ ಉದಾಹರಣೆಗಳು ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದಲ್ಲಿ ನಡೆಯುತ್ತದೆ ಎನ್ನುತ್ತಾರೆ ಅನುಭವಿ ರಾಜಕಾರಣಿ.
ಇಂತಹ ಆದರ್ಶಗಳು ಅಧ್ಯಕ್ಷರ ಬಳಿ ಇರುವ ಯಾವ ಅಧಿಕಾರಿ ಜಿಪಂ ಅಧ್ಯಕ್ಷರ ಮಾತು ಕೇಳುತ್ತಾರೆ ಹೇಳಿ. ಇಡೀ ವ್ಯವ್ಯಸ್ಥೆ ಹದಗೆಟ್ಟು ಹೋಗಿದೆ. ಅಧಿಕಾರ ವಿಕೇಂದ್ರೀಕರಣ ನೆಪದಲ್ಲಿ ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರ ಮಾತ್ರ ಹೆಚ್ಚಾಗುತ್ತದೆ. ಇದಕ್ಕೆ ಪುಷ್ಠಿ ನೀಡುವ ಅಂಶ ಎಂದರೆ ಈ ಅಧ್ಯಕ್ಷ - ಉಪಾಧ್ಯಕ್ಷರ ಅಧಿಕಾರ ಹಂಚಿಕೆಯ ಪ್ರಕ್ರಿಯೆಯೂ ಒಂದು. ಇದಕ್ಕೆ ಹಿಂದೆಯೂ ಯಾರಿಂದಲೂ ಸಾಧ್ಯವಾಗಿಲ್ಲ. ಮುಂದೆಯೂ ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಕೊಂಡು ಸಾರ್ವಜನಿಕರು ಮತ ಹಾಕಿದವರು ಸುಮ್ಮನಿದ್ದಾರೆ. ಅದೇ ವ್ಯವಸ್ಥೆಯಲ್ಲಿ ದೊಡ್ಡದೌರ್ಭಾಗ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.