ಮಂಡ್ಯ

ಹಲವು ಸಂಘಟನೆಗಳ ಪ್ರತಿಭಟನೆ

Published On :

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತರು, ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ  ರೈತ ಸಂಘದ ಕಾರ್ಯಕರ್ತರು, ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.  ಕಳೆದ ನಾಲ್ಕೈದು ದಿನಗಳಿಂದ ರಾಜ್ಯ ಸರ್ಕಾರ ಜಿಲ್ಲೆಯ ರೈತರು, ಜನತೆಯ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿದೆ. ತಕ್ಷಣ ನೀರು ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿದರು.  ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹನಿಯಂಬಾಡಿ ನಾಗರಾಜು, ಎಂ.ಎ. ಕೃಷ್ಣ, ಎಲೆಚಾಕನಹಳ್ಳಿ ಸೋಮಶೇಖರ್, ಇಂಡುವಾಳು ಬಸವರಾಜು, ಹಳುವಾಡಿ ನಾಗೇಂದ್ರ, ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಾಪ ಬಹಿಷ್ಕಾರ:ಮ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ಜಿಲ್ಲೆಯ ಹಾಗೂ ರಾಜ್ಯದ ರೈತರಿಗೆ ದ್ರೋಹವೆಸಗಿದೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಶನಿವಾರ ಪ್ರತಿಭಟನೆ ನಡೆಸಿದರು.  ವಕೀಲರ ಸಂಘದಿಂದ ಜಿಲ್ಲಾಧಿಕಾರಿಗಳ ಕ:ಕೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ ವಕೀಲರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಸರಿಯಲ್ಲ. ತಕ್ಷಣ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ನದಿ ನೀರಿನ ವಿಚಾರದಲ್ಲಿ ವಿವೇಚನಾರಹಿತವಾಗಿ ವರ್ತಿಸುತ್ತಿದೆ. ಇದು ಮೂರ್ಖತನದ ಪರಮಾವಧಿಯಾಗಿದೆ. ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರು ಕೊಡಲಾಗದ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ನಾಲೆಗಳಲ್ಲಿ ನೀರು ಹರಿಸುವುದನ್ನು ಬಿಟ್ಟು ತಮಿಳುನಾಡು ಪರ ವಕಾಲತ್ತು ವಹಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು.  ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಬಸವರಾಜು, ಸಂಘದ ಸದಸ್ಯರಾದ ಜಯಲಕ್ಷ್ಮಿ, ರವಿಕುಮಾರ್, ಲೋಕೇಶ್, ರಾಮಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.