ಒಂದು ರೇಟ್ ಫಿಕ್ಸ್
ಕೆ. ಎನ್. ರವಿ
ಮಂಡ್ಯ: ಇದು ಅಲಿಖಿತ ನಿಯಮ. ಬಡವರಿಗೆ ಮನೆ ಸಿಗಬೇಕು ಎಂದರೆ ಒಂದು ರೇಟ್ ಫಿಕ್ಸ್ ಆಗಿರುತ್ತದೆ. ಅಷ್ಟು ಪ್ರಮಾಣ ದುಡ್ಡು ಕೊಡದೇ ಹೋದರೆ ಆ ಫಲಾನುಭವಿಗೆ ಜಪ್ಪಯ್ಯ ಅಂದ್ರು ತಾನು ಕಟ್ಟಿಸಬೇಕು ಎಂದು ಅಂದುಕೊಂಡ ಕನಸಿನ ಮನೆ ದೇವರಾಣೆಯಾಗೂ ಅನುದಾನ ಸಿಗಲು ಸಾಧ್ಯವಿಲ್ಲ.
ರಾಜ್ಯ ಸರ್ಕಾರ ಎಲ್ಲಾ ಹಂತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಹೇಳುತ್ತದೆ. ಆದರೆ ಗ್ರಾಮ ಪಂಚಾಯ್ತಿ ಹಂತದಲ್ಲಿರುವ ಕೆಲವು ಜನಪ್ರತಿನಿಧಿಗಳು ಹಾಗೂ ಪಿಡಿಓಗಳ ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗುವ ಫಲಾನುಭವಿಗಳನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತದೆ. ಒಬ್ಬ ಪಂಚಾಯ್ತಿ ಸದಸ್ಯ ಅಥವಾ ಪಿಡಿಓ ಹಣಕ್ಕಾಗಿ ಪೀಡಿಸುತ್ತಾನೆ ಎಂದು ಹೇಳಿದರೆ ಆ ಬಡವನಿಗೆ ಮನೆ ಸಿಗಲು ಸಾಧ್ಯವೇ?
ಹೈರಾಣ: ವೈಫಲ್ಯಕ್ಕೆ ಹತ್ತಾರು ಕಾರಣಗಳು ಇವೆ. ಮನೆ ಕಟ್ಟಲು ಫಲಾನುಭವಿಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಕೊನೆಗೆ ಮನೆಯ ಗೃಹ ಪ್ರವೇಶ ಮಾಡುವುದು ಒತ್ತಟ್ಟಿಗೆ ಇರಲಿ ಹೇಗಾದರೂ ಮಾಡಿ ಮನೆ ಒಳಗೆ ಸೇರಿಕೊಂಡರೆ ಸಾಕಪ್ಪ ಎನ್ನುವಷ್ಟು ಫಲಾನುಭವಿ ಈ ಯೋಜನೆಯ ಸೌಲಭ್ಯ ಪಡೆಯುವಲ್ಲಿ ಹೈರಾಣ ಆಗಿ ಬಿಡುತ್ತಾನೆ. ಸಮಸ್ಯೆ ಇರುವುದು ಸರ್ಕಾರದ ಕಡೆಯಿಂದ ಅಲ್ಲ. ಬದಲಿಗೆ ಗ್ರಾಮ ಪಂಚಾಯ್ತಿ ಕಡೆಯಿಂದ ಫಲಾನುಭವಿಗಳಿಗೆ ಸಾಕಷ್ಟು ಕಿರುಕುಳ ಆಗುತ್ತದೆ. ಮನೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಹೋಗುವ ಅನಿವಾರ್ಯತೆ ಫಲಾನುಭವಿಗಳ ಪಾಲಿಗೆ ಬಂದಿರುವುದಂತೂ ನಿಜ.
ಸರ್ವಾಧಿಕಾರಿಗಳಾ?: ಒಬ್ಬ ಶಾಸಕನನ್ನು ಬೇಕಾದರೆ ಹೆದರಿಸಬಹುದು. ಆದರೆ ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯನ್ನು ಎದುರು ಹಾಕಿಕೊಂಡು ಊರಿನಲ್ಲಿ ಬದುಕುವುದು ತುಂಬಾ ಕಷ್ಟ ಎನ್ನುವುದು ಹಳ್ಳಿಗಳಲ್ಲಿ ವಾಸಿಸುವ ಬಡವರಿಗೆ ಚೆನ್ನಾಗಿ ಮನವರಿಕೆಯಾಗಿ ಹೋಗಿದೆ. ಗ್ರಾಮದಲ್ಲಿ ಪಂಚಾಯ್ತಿ ಸದಸ್ಯನಿಗೆ ಅಷ್ಟೊಂದು ಪವರ್ ಇದ್ರೆ ಇನ್ನು ಅಧ್ಯಕ್ಷನ ಕಥೆ ಹೇಗೆ ಇರಬೇಕು ಎನ್ನುವುದು ಊಹೆಗೂ ನಿಲುಕದ್ದು. ಪ್ರತಿಯೊಂದು ಯೋಜನೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆಯಲ್ಲಿ ತನಗೂ ಪಾಲು ಸಿಗದೇ ಹೋದರೆ ಕೆಲವು ಪಂಚಾಯ್ತಿ ಸದಸ್ಯರಂತೂ ಹತ್ತಾರು ದಿನಗಳಿಂದ ಆಹಾರ ಸಿಗದ ಹುಲಿಯಂತೆ ವರ್ತಿಸುತ್ತಾರೆ.
ಮಹಿಳಾ ಸದಸ್ಯರೂ ಕಡಿಮೆ ಇಲ್ಲ: ಇಂತಹ ವರ್ತನೆಗಳು ಕೇವಲ ಪುರುಷ ಸದಸ್ಯರಿಂದ ಮಾತ್ರ ನಡೆಯುತ್ತದೆ ಎಂದು ಭಾವಿಸುವ ಹಾಗಿಲ್ಲ. ಅನೇಕ ಮಹಿಳಾ ಸದಸ್ಯರು ಹಾಗೂ ಮಹಿಳಾ ಸದಸ್ಯರು ಮುಗ್ಧರಾಗಿದ್ದರೆ ಆಕೆಯ ಗಂಡ, ಮಾವ, ಸಹೋದರ ಹೀಗೆ ಗ್ರಾಪಂ ಸದಸ್ಯತ್ವ ತಮ್ಮ ಮನೆಗೆ ಒದಗಿ ಬಂದಿರುವ ವಾರಸುದಾರಿಕೆ ಎಂಬ ರೀತಿಯಲ್ಲಿ ವರ್ತಿಸಿ, ಬಡವರ ರಕ್ತ ಹೀರುವ ತಿಗಣೆಗಳಂತೆ ನಡೆದುಕೊಳ್ಳುತ್ತಾರೆಂದು ಕನ್ನಡಪ್ರಭ ಭೇಟಿ ಮಾಡಿದ ಫಲಾನುಭವಿಗಳು ತೀವ್ರವಾಗಿ ನೊಂದುಕೊಂಡು ಹೇಳಿದ ರೀತಿ ಇದು.
ರಾಜೀವ್ ಗಾಂಧಿ ವಸತಿ ನಿಗಮವು, ಅನುದಾನದ ಬಿಡುಗಡೆ ಹಂತವನ್ನು ವರ್ಗಿಕರಣ ಮಾಡಿ ಹೊಸ ಆದೇಶ ಹೊರಡಿಸಿದೆ. ಅದರಂತೆ ಒಂದು ಮನೆಗೆ 1,24,500 ರು. ನೀಡಲಾಗುವುದು. ಕಡ್ಡಾಯವಾಗಿ ಶೌಚಾಲಯ ಇರಲೇಬೇಕು ಎಂಬ ನಿಯಮವನ್ನು ಸೂಚಿಸಿದೆ.
ನಿಗಮದ ಆದೇಶದಂತೆ ತಳಪಾಯದ ಹಂತಕ್ಕೆ 29,800, ಕಿಟಕಿ ಮತ್ತು ಸಜ್ಜ ಮುಕ್ತಾಯದ ಹಂತಕ್ಕೆ 30 ಸಾವಿರ, ಛಾವಣಿ ಮುಕ್ತಾಯದ ಹಂತಕ್ಕೆ 30 ಸಾವಿರ, ಮನೆ ಪೂರ್ಣಗೊಂಡ ನಂತರ 25 ಸಾವಿರ ರು. ಹಾಗೂ ಶೌಚಾಲಯ ಪೂರ್ಣಗೊಂಡ ನಂತರ 9700 ರು. ನಿಗದಿ ಪಡಿಸಿದೆ.
ಈ ಲೆಕ್ಕದ ಅನ್ವಯ ಫಲಾನುಭವಿಗಳಿಗೆ ಮನೆಗಳ ನಿರ್ಮಾಣದ ಪ್ರಗತಿ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪಂಚಾಯ್ತಿ ಅಧಿಕಾರಿಗಳು ಹೇಳುತ್ತಾರೆ. ಒಟ್ಟಾರೆ ಸರ್ಕಾರದ ಯೋಜನೆಗಳ ಲಾಭಗಳು ಫಲಾನುಭವಿಗಳಿಗೆ ಸುಲಭ ರೀತಿಯಲ್ಲಿ ದೊರಕಬೇಕು. ಸಕಾಲಕ್ಕೆ ಯೋಜನೆಗಳು ಪೂರ್ಣಗೊಳ್ಳಬೇಕು ಆಶಯವಾಗಿದೆ. ಆದರೆ, ಈ ಆಶಯದಂತೆ ಗ್ರಾಮಾಂತರ ಪ್ರದೇಶದಲ್ಲಿ ವಸತಿ ಕಾಮಗಾರಿಗಳು ನಿಗದಿತ ಅವಧಿಗೆ ಮುಗಿಯುದಿಲ್ಲ ಎಂಬುದು ಫಲಾನುಭವಿಗಳ ದೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

