ಕಸ ವಿಲೇವಾರಿ: ಶೀಘ್ರ ಪರಿಹಾರ
ಮಂಡ್ಯ: ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರಸಭೆ ನಗರ ಪ್ರದೇಶಗಳಲ್ಲಿ ಸವಾಲಾಗಿರುವ ಕಸ ನಿರ್ವಹಣೆ ಸಮಸ್ಯೆಗೆ ವಿನೂತನ ಕ್ರಮದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಪರಿಸರ ವಿಭಾಗದ ಸಹಯೋಗದಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಂಡ್ಯ ನಗರವನ್ನು ಕಸ ಮುಕ್ತ ನಗರ ಮಾಡುವುದು ನಮ್ಮೆಲ್ಲರ ಪ್ರಮುಖ ಸವಾಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಗುರಿ ಸಾಧ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ಕಸವನ್ನು ಮನೆಯ ಹಂತದಲ್ಲಿಯೇ ಪ್ರತ್ಯೇಕಿಸಿ ನಿರ್ವಹಣೆ ಮಾಡುವ ಮೂಲಕ ಸ್ವಚ್ಛನಗರದ ಕನಸು ನನಸು ಮಾಡಬಹುದು. ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ನಗರಸಭೆ ಅಧ್ಯಕ್ಷ ಸಿದ್ದರಾಜು ಹೇಳಿದರು.
ಯಶಸ್ವಿ ಅನುಷ್ಠಾನ: ಕಸವನ್ನು ಪ್ರತ್ಯೇಕಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡುವ ಕಾರ್ಯಕ್ರಮ ಕೋಲಾರ ನಗರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮಂಡ್ಯ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಗರದ ಸ್ವಚ್ಛತೆ ಕಾಪಾಡಬಹುದು ಎಂದು ಪೌರಾಡಳಿತ ನಿರ್ದೇಶನಾಲಯದ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ವಿವರಣೆ ನೀಡಿದರು. ಒಣ ಕಸ, ಹಸಿ ಕಸ ಹಾಗೂ ಪ್ಲಾಸ್ಟಿಕ್ಗಳನ್ನು ಈಗ ಒಟ್ಟಿಗೆ ಹಾಕಲಾಗುತ್ತಿದೆ. ಹಸಿ ಕಸವನ್ನು ಗೊಬ್ಬರವಾಗಿ ಮಾರ್ಪಡಿಸಬಹುದು. ಕಾಗದ, ಪಾಸ್ಟಿಕ್ ಮುಂತಾದ ಒಣ ಕಸವನ್ನು ಪುನರ್ ಸಂಸ್ಕರಣೆ ಮಾಡಿ ಮಾಡಬಹುದು.
ಇದರಿಂದ ಜಾಗದ ಸಮಸ್ಯೆಯೂ ಇರುವುದಿಲ್ಲ. ಹಸಿ ಕಸದಿಂದ ಮಾಡಿದ ಗೊಬ್ಬರದಿಂದ ಆದಾಯವೂ ಬರಲಿದೆ ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್: ಪ್ರತಿ ಮನೆಗೂ ಒಂದೊಂದು ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಮೇಲ್ವಿಚಾರಕರು ಪ್ರತಿ ದಿನ ಹೋಗಿ ಅದರ ಮೇಲೆ ಸಹಿ ಮಾಡುತ್ತಾರೆ. ಕಸ ಪ್ರತ್ಯೇಕಿಸುವಲ್ಲಿ ಅತ್ಯುತ್ತಮ ಹವ್ಯಾಸ ಬೆಳೆಸಿಕೊಂಡವರಿಗೆ ಬಹುಮಾನ ಸಹ ನೀಡಲಾಗುತ್ತದೆ. ಈ ವಿನೂತನ ಕ್ರಮಕ್ಕೆ ವಿದ್ಯಾರ್ಥಿಗಳು, ಸ್ವಯಂ ಸಂಸ್ಥೆಗಳು, ಸಾರ್ವಜನಿಕರು, ಹೋಟೆಲ್ ಮಾಲೀಕರು, ಮಹಿಳೆಯರಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ.
30-35 ಲಕ್ಷ: ಮಂಡ್ಯ ನಗರಕ್ಕೆ ಸಂಬಂಧಿಸಿದಂತೆ, ಕಸವನ್ನು ಪತ್ಯೇಕಿಸಿ ನಿರ್ವಹಣೆ ಮಾಡುವ ಈ ವಿನೂತನ ಕಾರ್ಯಕ್ರಮಕ್ಕೆ ಅಂದಾಜು 30 ರಿಂದ 35 ಲಕ್ಷ ರು.ಗಳ ಅವಶ್ಯಕತೆ ಇದೆ. ಸರ್ಕಾರ ಇದನ್ನು ನೀಡಲಿದೆ ಎಂದು ಹೇಳಿದರು. ಹೊಸ ಕಾರ್ಯಾಚರಣೆಯನ್ನು ಆರಂಭಿಸುವ ಮುನ್ನ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡು ಕಾರ್ಯಾಚರಣೆ ಆರಂಭಿಸೋಣ. ಪೂರ್ವ ಸಿದ್ಧತೆಗಾಗಿ ಮತ್ತೊಂದು ಸಭೆ ಸೇರೋಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಚಂದ್ರಕಲಾ ಶಿವರಾಮು, ನಗರಾಭಿವೃದ್ಧಿ ಕೋಶದಯೋಜನಾ ನಿರ್ದೇಶಕ ಇ.ವಿ.ವೆಂಕಟರವಣ ರೆಡ್ಡಿ, ಪೌರಾಯುಕ್ತ ಎನ್.ಎಂ.ಶಶಿಕುಮಾರ್, ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

