ಹೊರೆ ಇಳಿಸಲು ಕಲ್ಪನಾ ಸಿದ್ದರಾಜು ನಿರ್ಧಾರ
ಕ.ಪ್ರ.ವಾರ್ತೆ ್ಣ ಮಂಡ್ಯ ್ಣ ಮಾ.30
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ವಂಚಿತರಾಗಿರುವ ಶಾಸಕಿ ಕಲ್ಪನಾ ಸಿದ್ದರಾಜು ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನ ಹಿಂದೆಯೇ ಶಾಸಕಿ ಕಲ್ಪನಾ ಸಿದ್ದರಾಜು, ಜೆಡಿಎಸ್ ಪಕ್ಷ ತೊರೆಯುವ ನಿರ್ಧಾರವನ್ನು 'ಕನ್ನಡಪ್ರಭ'ಕ್ಕೆ ಖಚಿತ ಪಡಿಸಿದರು.
ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಿಕೆಟ್ ನೀಡುವುದಿಲ್ಲವೆಂದು ಬಹಿರಂಗವಾಗಿ ಹೇಳಿದ್ದು, ನನಗೆ ಮತ್ತು ನನ್ನ ಬೆಂಬಲಿಗರಿಗೆ ತೀವ್ರ ನೋವುಂಟು ಮಾಡಿತು. ಟಿಕೆಟ್ ನಿರಾಕರಣೆಯೇ ಪಕ್ಷ ತೊರೆಯಲು ಕಾರಣ ಎಂದು ಹೇಳಿದರು.
ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಕುಮಾರಸ್ವಾಮಿ ಮೊದಲಿನಿಂದಲೂ ನನಗೇ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅಂತಿಮ ಗಳಿಗೆಯಲ್ಲಿ ತಮ್ಮಣ್ಣ ಅವರನ್ನು ಜೆಡಿಎಸ್ ಸೇರಿಸಿಕೊಂಡಿದ್ದು, ಅಲ್ಲದೆ ಅವರಿಗೆಯೇ ಟಿಕೆಟ್ ನೀಡುವ ನಿರ್ಧಾರ ಮಾಡಿದ್ದು ಮನಸ್ಸಿಗೆ ನೋವುಂಟು ಮಾಡಿತು ಎಂದರು.
ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಬೆಂಬಲಿಗರು ಒತ್ತಾಯಿಸಿದ್ದರು. ಇದೀಗ ಕಾಂಗ್ರೆಸ್ ನಾಯಕ ಕೃಷ್ಣ ಅವರ ಭೇಟಿ ನಂತರ ಟಿಕೆಟ್ ಸಿಗುವ ಭರವಸೆ ಸಿಕ್ಕಿದೆ. ಅಲ್ಲದೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಜೆಡಿಎಸ್‌ನಿಂದ ಹೊರ ಬರುತ್ತಿದ್ದೇನೆ ಎಂದು ತಿಳಿಸಿದರು.
ಟಿಕೆಟ್ ನೀಡುವ ಅಥವಾ ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೇವೇಗೌಡರಾಗಲಿ ಅಥವಾ ಕುಮಾರಸ್ವಾಮಿ ಅವರಾಗಲಿ ನನ್ನನ್ನು ಭೇಟಿ ಮಾಡಿಲ್ಲ. ನಾನೂ ಪಕ್ಷ ತೊರೆಯುವ ವಿಷಯವನ್ನು ತಿಳಿಸಿಲ್ಲ. ಬೆಂಬಲಿಗರೆಲ್ಲರೂ ಪಕ್ಷ ತೊರೆಯುವ ನಿರ್ಧಾರ ಮಾಡಿರುವುದರಿಂದ ನಾನೂ ಅವರೊಂದಿಗೆ ಹೋಗುತ್ತಿದ್ದೇನೆ ಎಂದು ಕಲ್ಪನಾ ಹೇಳಿದರು.
ಸ್ಪೀಕರ್‌ಗೆ ರಾಜಿನಾಮೆ: ಶಾಸಕ ಸ್ಥಾನಕ್ಕೆ ಸೋಮವಾರ ರಾಜಿನಾಮೆ ನೀಡುತ್ತಿದ್ದೇನೆ. ಸ್ಪೀಕರ್ ಬೋಪಯ್ಯ ಅವರು ಮಡಿಕೇರಿಯಲ್ಲಿ ಉಳಿದುಕೊಂಡಿರುವ ಕಾರಣ ಸ್ಪೀಕರ್ ಕಚೇರಿಗೆ ತೆರಳಿ ಸೋಮವಾರ ರಾಜಿನಾಮೆ ನೀಡುತ್ತಿದ್ದೇನೆ ಎಂದರು.
ಮುಂದಿನ ನಾಲ್ಕೈದು ದಿನಗಳಲ್ಲಿ ಮದ್ದೂರು ಪಟ್ಟಣದಲ್ಲಿ ಬೆಂಬಲಿಗರ ಸಭೆ ಕರೆದು ಜೆಡಿಎಸ್ ತೊರೆಯುವ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆನಂತರ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ. ಜೆಡಿಎಸ್ ತೊರೆಯುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕಲ್ಪನಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

