ಅನುಕಂಪದ ಅಲೆಯಲ್ಲಿ ಗೆದ್ದು ಬೀಗಿದವರು
ಮಂಡ್ಯ : ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳ ಹುಡುಕಾಟದಲ್ಲಿರುವ ರಾಜಕೀಯ ಪಕ್ಷಗಳು, ಮಹಿಳೆಯರ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಗೋಜಿಗೆ ಹೋಗದೆ ಪುರುಷ ಅಭ್ಯರ್ಥಿಗಳಿಗಷ್ಟೆ ಮಾನ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ.
ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಿಂದಲೂ ಈವರೆಗೆ ರಾಜಕೀಯ ಪಕ್ಷಗಳು ಮಹಿಳೆಯರನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಬಗ್ಗೆ ಘೋಷಣೆ ಮಾಡಿಲ್ಲ. ಅಲ್ಲದೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರೇ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಏಳು ಕ್ಷೇತ್ರಗಳ ಪೈಕಿ ಮಂಡ್ಯ, ಮದ್ದೂರು, ಮಳವಳ್ಳಿ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಿಂದ ಕೇವಲ ಒಬ್ಬೊಬ್ಬ ಮಹಿಳೆಯ ಹೆಸರು ಚುನಾವಣಾ ಸ್ಪರ್ಧೆಯಲ್ಲಿ ಕೇಳಿ ಬರುತ್ತಿದೆ. ಇದು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು, ಪುರುಷರಿಗೆ ಪೈಪೋಟಿ ನೀಡುವಷ್ಟು ರಾಜಕೀಯವಾಗಿ ಬೆಳೆಯಲು ಅವಕಾಶವೇ ದೊರೆತಿಲ್ಲ ಎಂಬುದಕ್ಕೆ ಸಾಕ್ಷಿ.
ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು ಅನುಮಾನ. ಜತೆಗೆ ಈಗಿನ ಚುನಾವಣೆಯಲ್ಲಿ ಪಕ್ಷ ಮತ್ತು ವ್ಯಕ್ತಿಯ ವರ್ಚಸ್ಸಿಗಿಂತ ಹಣ, ಜಾತಿ ಹಾಗೂ ತೋಳುಬಲವೇ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಇದೆಲ್ಲವನ್ನು ನೀಗಿಸಿಕೊಂಡು ಪುರುಷರಿಗೆ ಸರಿ ಸಮಾನವಾಗಿ ಪೈಪೋಟಿ ನೀಡುವುದು ಕಷ್ಟಸಾಧ್ಯ ಎನ್ನುತ್ತಾರೆ ಮಹಿಳಾ ಸಂಘಟನೆಯ ನಾಯಕಿಯೊಬ್ಬರು.
ಸ್ಫರ್ಧಿಸುವವರು ಯಾರು: ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಮಂಡ್ಯ ಕ್ಷೇತ್ರದಲ್ಲಿ ಕೆಜೆಪಿಯಿಂದ ಪ್ರೇಮಾ ಯುವರಾಜ್, ಮದ್ದೂರು ಕ್ಷೇತ್ರದಲ್ಲಿ ಕಾಂಗ್ರಸ್‌ನಿಂದ ಶಾಸಕಿ ಕಲ್ಪನಾಸಿದ್ದರಾಜು, ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಮಲ್ಲಾಜಮ್ಮ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ನಂದಿನಿ ಜಯರಾಂ ಹೆಸರು ಚಾಲ್ತಿಯಲ್ಲಿವೆ.
ಗೆದ್ದವರಲ್ಲಿ ಮಹಿಳೆಯರು ಎಷ್ಟು: ಜಿಲ್ಲೆಯಲ್ಲಿ ಕಳೆದ 61 ವರ್ಷಗಳಲ್ಲಿ ನಡೆದ 13 ವಿಧಾನಸಭಾ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಎಂಟು ಮಂದಿ ಮಾತ್ರ. ಇದರಲ್ಲಿ ಬಹುತೇಕ ಮಹಿಳೆಯರು, ತಮ್ಮ ಯಜಮಾನರು ಶಾಸಕರಾಗಿದ್ದ ಅವಧಿಯಲ್ಲಿ ಅಕಾಲಿಕ ಸಾವಿಗೀಡಾದಾಗ ಎದುರಾದ ಉಪಚುನಾವಣೆಗಳಲ್ಲಿ ಗೆಲವು ಸಾಧಿಸಿದವರೆ ಹೆಚ್ಚು.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 1972 ಮತ್ತು 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಮಯಂತಿ ಬೋರೇಗೌಡ, 1999ರಲ್ಲಿ ಕಾಂಗ್ರೆಸ್‌ನಿಂದ ಪಾರ್ವತಮ್ಮ ಶ್ರೀಕಂಠಯ್ಯ ಹಾಗೂ 1994, 2004ರಲ್ಲಿ ಜೆಡಿಎಸ್‌ನಿಂದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಆಯ್ಕೆಯಾಗಿದ್ದಾರೆ.
1984ರಲ್ಲಿ ಮದ್ದೂರು ಕ್ಷೇತ್ರ ಉಪ ಚುನಾವಣೆಯಲ್ಲಿ ಜಯವಾಣಿ ಮಂಚೇಗೌಡ ಮತ್ತು 2008ರಲ್ಲಿ ಮದ್ದೂರು ಕ್ಷೇತ್ರ ಶಾಸಕ ಎಂ.ಎಸ್.ಸಿದ್ದರಾಜು ನಿಧನದಿಂದಾಗಿ ನಡೆದ ಉಪ ಚುನಾವಣೆಯಲ್ಲಿ ದಿವಂಗತರ ಪತ್ನಿ ಕಲ್ಪನಾ ಸಿದ್ದರಾಜು ಜೆಡಿಎಸ್‌ನಿಂದ ಗೆಲವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು.
1989ರಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಲ್ಲಾಜಮ್ಮ,1997ರ ಉಪ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪ್ರಭಾವತಿ ಜಯರಾಂ ಹಾಗೂ 2004ರಲ್ಲಿ ಕಿರುಗಾವಲು ಕ್ಷೇತ್ರದಿಂದ ನಾಗಮಣಿ ನಾಗೇಗೌಡ ಚುನಾಯಿತರಾಗಿದ್ದರು.
ಸೋತವರು: 2008ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿದ್ಯಾನಾಗೇಂದ್ರ, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳಾಗಿ ಪೂಜಾ ಸಂತೋಷ್ ಹಾಗೂ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಮಂಜುಳಮ್ಮ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಮಹಿಳಾ ಮತದಾರರು ಎಷ್ಟು: ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2013ರ ಜನವರಿ 16ರವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 1,36,2026 ಮತದಾರರು ಇದ್ದಾರೆ. ಇದರಲ್ಲಿ 6,87,804 ಪುರುಷ ಮತ್ತು 6,74,222 ಮಹಿಳಾ ಮತದಾರರಿದ್ದಾರೆ. ಪುರುಷರಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆಯು ಒಟ್ಟು ಮತದಾರರ ಪ್ರಮಾಣದಲ್ಲಿ ಸುಮಾರು ಶೇ.49ರಷ್ಟಿದೆ.
ಮಹಿಳಾ ಮತದಾರರೇ ಹೆಚ್ಚು: ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 94,185 ಆಗಿದ್ದರೆ, ಮಹಿಳಾ ಮತದಾರರ ಸಂಖ್ಯೆ 94,355 ಆಗಿದೆ. ಇಲ್ಲಿ 170 ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿಯೂ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯು 25 ರಷ್ಟು ಹೆಚ್ಚಾಗಿದೆ. ಸದ್ಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರ ಮತದಾರರ ಪ್ರಮಾಣ ಹೆಚ್ಚಳ ಕಾಣುವುದರಲ್ಲಿ ಅನುಮಾನವಿಲ್ಲ. ಆದರೆ, ಜಿಲ್ಲೆಯಲ್ಲಿ ಯಾವುದೇ ಪಕ್ಷ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡುವುದನ್ನೇ ಮರೆತಿವೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಆಕಾಂಕ್ಷಿತರು ಭಾರೀ ಪೈಪೋಟಿಯನ್ನೇ ನಡೆಸುತ್ತಿದ್ದಾರೆ. ಬಿ ಫಾರಂಗಾಗಿ ನಡೆಯುತ್ತಿರುವ ಮೇಲಾಟದಲ್ಲಿ ಆಕಾಂಕ್ಷಿತರ ಸಾಲಿನಲ್ಲಿರುವ ಕೆಲ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಸಿಗುವುದು ಅನುಮಾನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

