ಸಕಾಲ ಸಮರ್ಪಕ ಅನುಷ್ಠಾನ
ಮಂಡ್ಯ: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ಸಕಾಲ ಯೋಜನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿ, ಅತಿ ಹೆಚ್ಚು ಪ್ರಗತಿ ಮಾಡಿದ ಐದು ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಗೂ ಒಂದು ಸ್ಥಾನ ಲಭ್ಯವಾಗಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಮಂತ್ರಿ ಸಿ. ಪಿ. ಯೋಗೇಶ್ವರ್ ಶನಿವಾರ ಹೇಳಿದರು.
ನಗರದ ಸರ್ ಎಂ. ವಿ. ಕ್ರೀಡಾಂಗಣದಲ್ಲಿ 64 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣದ ಮಾತನಾಡಿದ ಸಚಿವ ಯೋಗೇಶ್ವರ್, ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಸಕಾಲ ಜನಸಾಮಾನ್ಯರ ಅಗತ್ಯ ಪೂರೈಸಲು ಸಾಕಷ್ಟು ನೆರವಾಗಿದೆ. ಜಿಲ್ಲಾಡಳಿತವು ಅತಿ ಮುತುವರ್ಜಿ ವಹಿಸಿ ಯೋಜನೆ ಅನುಷ್ಠಾನಗೊಳಿಸಿರುವುದರಿಂದ ಜಿಲ್ಲೆಯು ಅತ್ಯುತ್ತಮ ಸಾಧನೆ ಮಾಡಿದ ಐದು ಜಿಲ್ಲೆಗಳ ಪೈಕಿ ಒಂದು ಸ್ಥಾನ ಪಡೆದುಕೊಂಡಿದೆ ಎಂದರು.
ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಧಿಸಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ ಸಚಿವರು, ಜನಪ್ರಿಯ ಯೋಜನೆಗಳನ್ನು ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ, ದಲಿತ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಯೋಜನೆ ರೂಪಿಸಿ ಯಶಸ್ವಿಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾಧನೆ ಏನು?:
- 2012- 13ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ 74 ಹಳ್ಳಿಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ 42.45 ಕೋಟಿ ಅನುದಾನ ನಿಗದಿಪಡಿಸಲಾಗಿದೆ.
- ಬರ ಪರಿಹಾರ ಕಾಮಗಾರಿ ಯೋಜನೆಯಡಿ 1850.80 ಲಕ್ಷ ಅಂದಾಜು ವೆಚ್ಚದಲ್ಲಿ 807 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
- ನಿರ್ಮಲ ಭಾರತ ಅಭಿಯಾನದ ಅಡಿಯಲ್ಲಿ ಒಟ್ಟು 9168 ಶೌಚಾಲಯ ನಿರ್ಮಿಸುವ ಗುರಿ ಇದೆ. ಈವರೆಗೆ 4613 ಶೌಚಾಲಯ ನಿರ್ಮಿಸಲಾಗಿದೆ.
- ಸುಮಾರು 1.32 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 2011- 12ನೇ ಸಾಲಿನ ಬೆಳೆ ನಷ್ಟಕ್ಕಾಗಿ ತಲಾ 1 ಸಾವಿರ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಈವರೆಗೆ ಸುಮಾರು 11 ಕೋಟಿ ವೆಚ್ಚ ಮಾಡಲಾಗಿದೆ.
- ಸುವರ್ಣ ಭೂಮಿ ಯೋಜನೆಯಲ್ಲಿ 8838 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಸುಮಾರು 322 ಲಕ್ಷ ಸಹಾಯಧನ ನೀಡಲಾಗಿದೆ.
- ಜಿಲ್ಲೆಯಲ್ಲಿ 45 ಅಟಲ್ಜೀ ಜನಸ್ನೇಹಿ ಕೇಂದ್ರಗಳನ್ನು ತೆರೆಯಲಾಗಿದೆ. ಕಂದಾಯ ಇಲಾಖೆಯ 36 ಸೇವೆಗಳು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದೆ.
- ಜಿಲ್ಲಾಡಳಿತ ಮುಂದಿನ ಬೇಸಿಗೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಮೇವನ್ನು ದಾನದ ರೂಪದಲ್ಲಿ ಪಡೆದು ಜೋಪಾನವಾಗಿ ಸಂಗ್ರಹಿಸಿ ಇಟ್ಟುಕೊಂಡಿದೆ. 47 ಮೆಟ್ರಿಕ್ ಟನ್ ಮೇವು ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ 3,22,920 ಜಾನುವಾರುಗಳಿವೆ. ಕಾಲು ಬಾಯಿ ಜ್ವರ ನಿಯಂತ್ರಣಕ್ಕಾಗಿ ಎಲ್ಲಾ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗಿದೆ.
- ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗಿರುವ ನಗರೋತ್ಥಾನ ಯೋಜನೆ 2ನೇ ಹಂತದಲ್ಲಿ 60 ಕೋಟಿ ಬಿಡುಗಡೆ ಮಾಡಲಾಗಿದೆ. 49.33 ಕೋಟಿ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ.
- ಕೃಷ್ಣರಾಜಸಾಗರ ಜಲಾಶಯದಲ್ಲಿ 50 ಮತ್ತು 60 ನೇ ಮಟ್ಟದ 6 ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು 175 ಲಕ್ಷಗಳಿಗೆ ನಿರ್ವಹಿಸಲು ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿ 2013 ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮಾಧವಮಂತ್ರಿ, ದೇವರಾಯ ಮತ್ತು ಸಿಡಿಎಸ್ ವಿಸ್ತರಣಾ ಅಣೆಕಟ್ಟು ನಾಲೆ ಅಭಿವೃದ್ಧಿಪಡಿಸಲು 5560 ಲಕ್ಷಗಳ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
- ಭಾಗ್ಯಲಕ್ಷ್ಮಿ ಯೋಜನೆಯಡಿ 58497 ಫಲಾನುಭವಿಗಳನ್ನು ಯೋಜನೆಗೆ ಮಂಜೂರಾತಿ ನೀಡಲಾಗಿದೆ. 56,348 ಫಲಾನುಭವಿಗಳಿಗೆ ಬಾಂಡ್ ವಿತರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

