ವಿರೋಧಿಗಳ ಟೀಕೆಗೆ ಬೆದರಲ್ಲ
ಮಂಡ್ಯ: ಅಭಿವೃದ್ಧಿ ಸಂಬಂಧ ನನ್ನ ಕ್ಷೇತ್ರದ ಜನರಿಗೆ ಮಾತ್ರ ಉತ್ತರ ಕೊಡಬೇಕೆ ಹೊರತು, ಬೇರೆ ಟೀಕಾಕಾರರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಈ ಹೊರತು ಬೇರೆಯವರಿಗೆ ಅಲ್ಲ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೋಮವಾರ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ನಾನು ಮಂತ್ರಿಯಾಗಿದ್ದಾಗ, ಈಗ ಶಾಸಕನಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎನ್ನುವುದು ಕ್ಷೇತ್ರದ ಜನಕ್ಕೆ ಗೊತ್ತಿದೆ. ಕೇವಲ ಕಾಮಗಾರಿಯ ಹೆಸರಿನಲ್ಲಿ ಕಲ್ಲು ಹಾಕಿದವರೆಲ್ಲಾ ಈಗ ನೂರೆಂಟು ಹೇಳಿಕೆ ಕೊಡಬಹುದು. ಇಂತಹ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ. ಅವರುಗಳು ಹಾಕಿದ್ದ ಕಲ್ಲುಗಳಿಗೆ ಮರು ಜೀವ ತುಂಬಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉದ್ಘಾಟನೆ ಹಂತಕ್ಕೆ ತಂದಿದ್ದೇನೆ ಎಂದರು.
ಸರ್ಕಾರಿ ಯೋಜನೆಗಳು ಯಾರಪ್ಪನ ಮನೆ ಆಸ್ತಿ ಅಲ್ಲ. ಸರ್ಕಾರದ ಮನ ಒಲಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇಚ್ಛಾಶಕ್ತಿ ಮತ್ತು ಮೇಸ್ತ್ರಿಗಳ ರೀತಿಯಲ್ಲಿ ಕೆಲಸ ಮಾಡುವ ತಾಕತ್ತು ಬೇಕು ಒಬ್ಬ ಶಾಸಕನಿಗೆ ಇದು ಇರಬೇಕು. ಈ ಎರಡೂ ಶಕ್ತಿಗಳನ್ನು ಇಟ್ಟುಕೊಂಡು ನಾನು ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯೋಜನೆ ತಂದಿದ್ದೇನೆ. ಇದರ ಪ್ರಯತ್ನದ ಫಲವಾಗಿ 23 ರಂದು ಅಂದಾಜು 75 ಕೋಟಿ ರು.ಗೂ ಅಧಿಕ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ನಡೆಯಲಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ 23ರಂದು ಬೆಳಿಗ್ಗೆ 11ಗಂಟೆಗೆ ಅದ್ದೂರಿ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಉಪ ಮುಖ್ಯಮಂತ್ರಿ ಈಶ್ವರಪ್ಪ, ಸಚಿವರಾದ ಸಿ.ಪಿ.ಯೋಗೇಶ್ವರ್, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಅನೇಕ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ನತ್ತ ಒಲವು: ರಾಜಕಾರಣದ ಬಗ್ಗೆ ಸ್ಪಷ್ಟ ಹೇಳಿಕೆ ನೀಡಲು ಇನ್ನೂ ಕಾಲ ಪಕ್ವವಾಗಿಲ್ಲ. ಆದರೂ ಮಾತೃಪಕ್ಷ ಕಾಂಗ್ರೆಸ್ನತ್ತ ಒಲವು ಹೆಚ್ಚಾಗಿದೆ. ಈ ಸಂಬಂಧ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷಕ್ಕೆ ಸೇರಿಸಿಕೊಳ್ಳುವುದು ನಂತರ ಟಿಕೆಟ್ ನೀಡುವುದು, ಬಿಡುವುದು ಎಲ್ಲದರಲ್ಲೂ ಕಾಂಗ್ರೆಸ್ ನಾಯಕರ ನಿರ್ಧಾರವೇ ಅಂತಿಮ. ಹೀಗಾಗಿ ಈ ಬಗ್ಗೆ ತಕ್ಷಣಕ್ಕೆ ಯಾರ ಹೇಳಿಕೆ, ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

