ಕೊಪ್ಪಳ

ರಸ್ತೆಯಾಯ್ತು ಕಣ, ನಲುಗಿದ ಜನ

Published On :

ಕನ್ನಡಪ್ರಭ ವಾರ್ತೆ, ಗಂಗಾವತಿ, ಜೂ. 27
ಜಿಲ್ಲಾಡಳಿತ ರಸ್ತೆ ಅಗಲೀಕರಣಕ್ಕೆ ದಿಢೀರನೆ ಮುಂದಾಗಿ ಈಗ ಹಿಂದೆ ಸರಿದಿದ್ದರಿಂದ ನಗರದ ಚನ್ನಬಸವಸ್ವಾಮಿ (ಸಿಬಿಎಸ್) ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದ ಮಾರ್ಗ ಅಧೋಗತಿಯತ್ತ ಸಾಗಿದೆ.
ನಾಲ್ಕು ವರ್ಷಗಳ ಹಿಂದೆ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ಸತ್ಯಮೂರ್ತಿ ನಗರದ ಸಿಬಿಎಸ್ ರಸ್ತೆಯಿಂದ ಗಾಂಧಿ ವೃತ್ತದವರೆಗೂ ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರ ಮಾಡಿದ್ದರು. ಆದರೆ ಅಗಲೀಕರಣವಾಗದೇ ಮರೀಚಿಕೆಯಾಗಿದೆ. ಇದರಿಂದಾಗಿ ಇಂದು ಅನೇಕ ಸಮಸ್ಯೆಗಳು ತಲೆದೋರಿವೆ.
ರಸ್ತೆ ಅಗಲೀಕರಣ ಮಾಡಬೇಕೆಂಬ ಜಿಲ್ಲಾಡಳಿತದ ಚುರುಕಿನ ಕಾರ್ಯಕ್ಕೆ ಅಡ್ಡಿ ಆತಂಕಗಳು ಬಂದಿದ್ದರಿಂದ ರಸ್ತೆ ದುರಸ್ತಿಯಾಗದೆ ಗುಂಡಿಗಳು ಬಿದ್ದಿವೆ. ನಗರದ ವ್ಯಾಪಾರಸ್ಥರು ರಸ್ತೆ ಅಗಲೀಕರಣ ಉದ್ದೇಶದಿಂದ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ತೆರವುಗೊಳಿಸಿದ್ದರೆ, ಇನ್ನು ಕೆಲವರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಆದರೂ ಜಿಲ್ಲಾಡಳಿತ ಮತ್ತು ನಗರಸಭೆಯ ಸಹಕಾರ ಪಡೆದು 300ಕ್ಕೂ ಹೆಚ್ಚು ಆಕ್ರಮ ಅಂಗಡಿಗಳನ್ನು ತೆರವುಗೊಳಿಸಿ ತಟಸ್ಥರಾಗಿದ್ದಾರೆ. ಈ ಹಿಂದೆ ರಸ್ತೆ ಅಗಲೀಕರಣಕ್ಕಾಗಿ ಮುಖ್ಯಮಂತ್ರಿಗಳ ಪಟ್ಟಣ ಮತ್ತು ನಗರಾಭಿವೃದ್ಧಿ ಯೋಜನೆಯಡಿ ರು. 2 ಕೋಟಿ ಅನುದಾನ ಬಂದಿತ್ತು. ಚರಂಡಿ ಮತ್ತು ಫುಟ್‌ಪಾತ್ ನಿರ್ಮಾಣಕ್ಕೆ ನಗರಸಭೆ ಹಣ ಖರ್ಚು ಮಾಡಿ ಕೈ ತೊಳೆದುಕೊಂಡಿದೆ.
ಅಡ್ಡಿ ಆತಂಕ: ನಗರದಲ್ಲಿ ರಸ್ತೆ ಅಗಲೀಕರಣ ಮಾಡಬೇಕೆನ್ನುವಾಗಲೇ 2011ರಲ್ಲಿ  78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆಪದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿತು. ಅಲ್ಲದೆ ಮಳೆ ಮತ್ತು ಹಬ್ಬ ಹರಿದಿನಗಳ ನೆಪದಲ್ಲಿ ಹಿಂದೆ ಬಿದ್ದ ರಸ್ತೆ ಅಗಲೀಕರಣ ಈಗ ಮರೀಚಿಕೆಯಾಗಿಯೇ ಉಳಿದಿದೆ.
ಕುಡಿವ ನೀರಿನ ಯೋಜನೆ ನೆಪ: ಗಂಗಾವತಿ ನಗರಕ್ಕೆ ಮಂಜೂರಿಯಾಗಿದ್ದ 3ನೇ ಹಂತದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಈಗ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ. (24/7) ಈ ಯೋಜನೆಗೆ (ಕೆಡಬ್ಲೂಎಸ್) ರು. 64 ಕೋಟಿ ನೀಡಿದ್ದು, ಇದಕ್ಕಾಗಿ ನಗರದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ರಸ್ತೆ ಅಗಲೀಕರಣದ ಗೋಜಿಗೆ ನಗರಸಭೆ ಮುಂದಾಗುತ್ತಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡಿರುವ ಜಿಲ್ಲಾಡಳಿತ ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿಲ್ಲ.
ಪಾಳು ಬಿದ್ದ ರಸ್ತೆಗಿಲ್ಲ ಮುಕ್ತಿ: ಅಗಲೀಕರಣದ ನೆಪದಲ್ಲಿ ಸಿಬಿಎಸ್ ಮತ್ತು ಮಹಾತ್ಮ ಗಾಂಧಿ ವೃತ್ತದ ರಸ್ತೆ  ಪಾಳು ಬಿದ್ದಿದೆ. ಇದ್ದ ರಸ್ತೆಯಲ್ಲಿ ಅಕ್ಕ ಪಕ್ಕದ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ ರಸ್ತೆ ತುಂಬ ತೆಗ್ಗು ದಿನ್ನೆಗಳು ಬಿದ್ದಿದ್ದರಿಂದ ದಿನನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಎಸ್‌ಬಿಎಚ್ ರಸ್ತೆ ಮುಂಭಾಗದಲ್ಲಿ ತೆಗ್ಗು ದಿನ್ನೆಗಳಿದ್ದು, ವಾಹನಗಳು ಜಖಂಗೊಳ್ಳುತ್ತಿವೆ. ಮಳೆ ಬಂದರೆ ನೀರು ನಿಂತು ತೆಗ್ಗು ಇರುವುದು ತಿಳಿಯದೇ ಅನೇಕ ಬಾರಿ ಗುಂಡಿಯಲ್ಲಿ ಬಿದ್ದು ಪೆಟ್ಟು ತಿಂದವರು ಹಲವರಿದ್ದಾರೆ.
ದೂರವಾಣಿ ಕಂಪನಿಗಳ ಅಟ್ಟಹಾಸ: ನಗರದಲ್ಲಿ ಖಾಸಗಿ ದೂರವಾಣಿ ಕಂಪನಿಗಳ ಅಟ್ಟಹಾಸ ಅತಿಯಾಗಿದ್ದು, ದೂರವಾಣಿ ಸಂಪರ್ಕಕ್ಕಾಗಿ ದಿನನಿತ್ಯ ರಸ್ತೆ ಅಗೆಯುವ ಕೆಲಸ ಸಾಮಾನ್ಯವಾಗಿದೆ. ಈಗಾಗಲೆ ವಿವಿಧ ಕಂಪನಿಗಳ ಮುಖ್ಯಸ್ಥರು ನಗರಸಭೆಯವರೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದರೂ ಕೇಬಲ್ ಹಾಕುವುದಕ್ಕಾಗಿ ರಸ್ತೆ ಅಗೆದು ಹಾಗೇ ಬಿಟ್ಟು  ಹೋಗಿದ್ದಾರೆ. ಇದರಿಂದ ಅಗೆದ ಗುಂಡಿಗಳು ರಸ್ತೆಯ ಮಧ್ಯೆ ಹಾಗೆ ಉಳಿದು ಅಪಘಾತಕ್ಕೆ ಆಹ್ವಾನಿಸುತ್ತಿವೆ. ಜಯನಗರ ರಸ್ತೆ, ಪಂಪಾ ನಗರ, ಆನೆಗೊಂದಿ ರಸ್ತೆ, ಗುಂಡಮ್ಮ ಕ್ಯಾಂಪ್, ಬಸ್ ನಿಲ್ದಾಣ ರಸ್ತೆಗಳಲ್ಲಿ ಖಾಸಗಿ ದೂರವಾಣಿ ಕಂಪನಿಗಳು ರಸ್ತೆಯನ್ನು ಅಗೆದಿದ್ದರಿಂದ ರಸ್ತೆ ಹದಗೆಟ್ಟು ಹೋಗಿವೆ. ಕೂಡಲೇ ಜಿಲ್ಲಾಡಳಿತ, ನಗರಸಭೆ ಮುತುವರ್ಜಿ ವಹಿಸಿ ರಸ್ತೆಗೆ ಮುಕ್ತಿ ನೀಡಬೇಕೆಂಬುದು ಜನತೆ ಒತ್ತಾಸೆ.
-ರಾಮಮೂರ್ತಿ ನವಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.