ಕೊಪ್ಪಳ

ಹಂದಿ ಅಟಾಟೋಪಕ್ಕಿಲ್ಲ ಬ್ರೇಕ್

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜೂ. 25
ಕೊಪ್ಪಳ ನಗರದ ಪ್ರತಿ ವಾರ್ಡ್ ಹಂದಿಗಳ ದೊಡ್ಡ ಸಾಮ್ರಾಜ್ಯವಾಗಿದೆ. ನಗರಸಭೆಯ ಪೌರ ಕಾರ್ಮಿಕರು ಸ್ವಚ್ಛತೆ ಮಾಡದ ಚರಂಡಿಯಲ್ಲಿ ಹಂದಿಗಳು ಬಿಡಾರ ಹೂಡಿ ಭರ್ಜರಿ ವಾಸಿಸುತ್ತಿವೆ. ಅಲ್ಲದೇ ಸಿಕ್ಕ ಸಿಕ್ಕವರನ್ನು ಕಚ್ಚುತ್ತಿವೆ. ಆದರೆ, ನಗರಸಭೆ ಮಾತ್ರ ಹಂದಿಗಳನ್ನು ನಗರದಿಂದ ಹೊರಗೆ ಸಾಗಿಸಲು ಗೋಜಿಗೆ ಮುಂದಾಗುತ್ತಿಲ್ಲ.
ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಗುನಿಗಿದ್ದು ಬಿಟ್ಟರೆ, ಮತ್ಯಾರೂ ಈ ಬಗ್ಗೆ ಚಕಾರವೆತ್ತಿಲ್ಲ. ನಗರದಲ್ಲಿ ಸ್ವಲ್ಪ ಕಸ ಬಿತ್ತೆಂದರೆ ಸಾಕು ಹಂದಿಗಳ ಹಿಂಡೆ ಓಡೋಡಿ ಬರುತ್ತದೆ. ಕಸ ಹಾಕುವವರನ್ನೇ ಬೆನ್ನು ಹತ್ತುವ ಸ್ಥಿತಿ ನಗರದಲ್ಲಿ ಉಲ್ಬಣವಾಗಿದೆ. ಹೀಗಾಗಿ ಜನತೆಗೂ ಹಂದಿಗಳ ಬಗ್ಗೆ ಭಯ ಉಂಟಾಗಿದೆ. ಇಲ್ಲಿನ ಪೊಲೀಸ್ ವಸತಿ ಗೃಹ, ಎಪಿಎಂಸಿ ಆವರಣ, ಗಾಂಧಿ ನಗರ, ಬೆಂಕಿ ನಗರ, ಬಸವ ನಗರ, ಕಾಳಿದಾಸ ನಗರ, ದಿಡ್ಡಿಕೇರಿ ಓಣಿ, ಗಣೇಶ ನಗರ, ಸಿಂಪಿ ಲಿಂಗಣ್ಣ ರಸ್ತೆ, ಕುರಬರ ಓಣಿ, ಕುಂಬಾರ ಓಣಿ, ಗವಿಶ್ರೀ ನಗರ, ಬನ್ನಿಕಟ್ಟಿ ಸೇರಿದಂತೆ ವಿವಿಧೆಡೆ ಹಂದಿಗಳ ಹಾವಳಿ ಹೆಚ್ಚಾಗಿದೆ. ಜನರ ಕೈಯಲ್ಲಿ ಯಾವುದೇ ವಸ್ತು ಇತ್ತೆಂದರೆ ಸಾಕು ಅವರತ್ತ ಓಡೋಡಿ ಬರುತ್ತವೆ. ಹಂದಿಗಳಿಂದ ತಪ್ಪಿಸಿಕೊಳ್ಳಲು ಜನ ಹರಸಾಹಸ ಪಡುತ್ತಾರೆ.
ಇದಕ್ಕೆಲ್ಲ ಕಾರಣ ನಗರ ಸ್ವಚ್ಛವಾಗದೇ ಇರುವುದು. ಆದರೆ ನಗರಸಭೆ ಪ್ರತಿ ವಾರ್ಡಿನಲ್ಲಿ ಚರಂಡಿ ಸ್ವಚ್ಛತೆ ಮಾಡಿಸಲು ಮಾತ್ರ ಮುಂದಾಗುತ್ತಿಲ್ಲ. ಹೀಗಾಗಿ ಚರಂಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದರ ಪರಿಣಾಮ ಹಂದಿಗಳು ಚರಂಡಿಯಲ್ಲಿ ಠಿಕಾಣಿ ಹೂಡುತ್ತಿವೆ. ರಸ್ತೆ ಪಕ್ಕದಲ್ಲಿ ಹಾಕಿದ ಕಸವನ್ನೆಲ್ಲ ಹರಡಿ ಮತ್ತಷ್ಟು ಕಲ್ಮಷಗೊಳಿಸುತ್ತಿವೆ. ಇದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡು ಜನಕ್ಕೆ ನೆಮ್ಮದಿ ಇಲ್ಲ.
ಆಡುವಂತಿಲ್ಲ: ಚಿಕ್ಕ ಮಕ್ಕಳು ತಮ್ಮ ಮನೆಯ ಹೊರಗೆ ಆಟ ಆಡುವಂತಿಲ್ಲ. ಮಕ್ಕಳು ಬಯಲು ಶೌಚಕ್ಕೆ ತೆರಳಿದರಂತೂ ಬೆನ್ನ ಹಿಂದೆಯೇ ಹಂದಿಗಳ ಹಿಂಡು ಬರುತ್ತಿರುತ್ತದೆ. ಇದರಿಂದ ಮಕ್ಕಳು ಹಂದಿಗಳು ಕಂಡರೆ ಹೆದರಿ ಮನೆಯತ್ತ ಓಡುತ್ತಾರೆ. ಆಟವಾಡಲೂ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಯ ಹೊರಗೆ ಮಕ್ಕಳೂ ಸಹ ಭಯದಲ್ಲಿ ಆಟವಾಡುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಹಂದಿಗಳಿಂದ ರಕ್ಷಿಸಿಕೊಳ್ಳಲು ಕೈಯಲ್ಲಿ ಕೋಲು ಹಿಡಿದು ಸಂಚರಿಸಬೇಕು. ಮಕ್ಕಳು ಶೌಚಕ್ಕೆ ಹೋದಾಗ ಹಂದಿಗಳು ಕಚ್ಚಿ ಹಲವರಿಗೆ ಗಾಯ ಮಾಡಿದ ಉದಾಹರಣೆಗಳಿವೆ. ನಗರಸಭೆ ಈ ಬಗ್ಗೆ ಗಮನ ನೀಡುತ್ತಿಲ್ಲ. ಹಂದಿಗಳನ್ನು ನಗರದಿಂದ ಹೊರಗೆ ಸಾಗಿಸಬೇಕು ಎಂದು ನಿರ್ಧಾರ ಮಾಡಿದ್ದ ನಗರಸಭೆ ನಿರ್ಣಯವನ್ನೇ  ಸಂಪೂರ್ಣ ಮರೆತಿದೆ.

ಕಂಡಲ್ಲಿ ಗುಂಡು...
ಹಂದಿ ಹಾವಳಿ ತಡೆದು, ಮಕ್ಕಳು ನೆಮ್ಮದಿಯಿಂದ ಆಟವಾಡಬೇಕೆಂಬ  ಕಾರಣಕ್ಕೆ ನಗರಸಭೆಯಿಂದ ಎಲ್ಲಿ ಹಂದಿಗಳು ಕಾಣುತ್ತವೆಯೋ ಅಲ್ಲಿಯೇ ಅವುಗಳಿಗೆ ಗುಂಡು ಹೊಡೆದು ಸಾಯಿಸಬೇಕು ಎಂದು ಈ ಹಿಂದಿನ ನಗರಸಭೆಯಲ್ಲಿ ನಿರ್ಧಾರ ಮಾಡಿತ್ತು. ಅದು ಸಹಿತ ಕಾರ್ಯರೂಪಕ್ಕೆ ಬರಲೇ ಇಲ್ಲ. ಸದಸ್ಯರು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳೆಲ್ಲ ಸಭೆಯಲ್ಲೇ ಉಳಿದುಕೊಳ್ಳುತ್ತವೆ. ಸಮರ್ಪಕ ಜಾರಿಗೆ ಬರುವುದಂತೂ ದೂರದ ಮಾತು ಎಂದು ಜನ ಆಡಿಕೊಳ್ಳುವಂತಾಗಿದೆ.
-ದತ್ತು ಕಮ್ಮಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.