ಕೊಪ್ಪಳ

ಪ್ರೀತಿ ಬೆಸೆಯುವ ರೊಟ್ಟಿ ಹಬ್ಬ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 30
ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ನಾನಾ ಹಬ್ಬಗಳಿಗೆ ಮುನ್ನುಡಿ ಬರೆಯಲಾಗುತ್ತದೆ. ತಿಂಗಳಪೂರ್ತಿ ಮನೆಯಲ್ಲಿ ಒಂದಿಲ್ಲೊಂದು ಪೂಜೆ, ವ್ರತ ಕೈಗೊಳ್ಳುತ್ತಾರೆ. ಅದರಲ್ಲೂ ಆರಂಭದಲ್ಲೇ ಬರುವ ಪಂಚಮಿ ಹಬ್ಬದ ರೊಟ್ಟಿ ಸಂಭ್ರಮ ಉತ್ತರ ಕರ್ನಾಟಕದಾದ್ಯಂತ ಬುಧವಾರ ಮನೆ ಮಾಡಿತ್ತು.
ಸುರಿಯುವ ತುಂತುರು ಮಳೆ ಇದಕ್ಕೆ ಮತ್ತಷ್ಟು ಖುಷಿ ಒದಗಿಸಿತ್ತು. ಆಷಾಢ ಮುಗಿಯುತ್ತಿದ್ದಂತೆ ರೈತರಿಗೆ ಬಿಡುವಿಲ್ಲದ ಕೆಲಸ. ಬಿತ್ತುವುದು, ಕಳೆ ತೆಗೆಯುವುದು, ಎಡೆಗಡ್ಡೆ ಹೊಡೆಯುವುದು ಈ ಎಲ್ಲ ಕೃಷಿ ಕೆಲಸಗಳ ನಡುವೆಯೇ ರೊಟ್ಟಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಇದೊಂದು ರೀತಿಯಲ್ಲಿ ಪರಸ್ಪರ ಪ್ರೀತಿ ಬೆಸೆಯುವ ಹಬ್ಬವೂ ಆಗಿದೆ. ಇದಕ್ಕಾಗಿಯೇ ಇದನ್ನು ಉತ್ತರ ಕರ್ನಾಟಕದ ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಆಚರಣೆ ಮಾಡಲಾಗುತ್ತದೆ.
ಅನ್ಯೋನ್ಯ ಸಂಬಂಧ: ರೊಟ್ಟಿ ಹಬ್ಬಕ್ಕೆಂದೇ ನಾನಾ ಬಗೆಯ ರೊಟ್ಟಿಗಳನ್ನು ತಯಾರು ಮಾಡಲಾಗುತ್ತದೆ. ರೊಟ್ಟಿಹಬ್ಬದಂದು ಹಲವು ಬಗೆಯ ಪಲ್ಯ (ಭಾಜಿ) ಮಾಡಲಾಗುತ್ತದೆ. ನಾನಾ ತರಹದ ಚಟ್ನಿಗಳೂ ಸಿದ್ಧವಾಗುತ್ತವೆ. ಇವೆಲ್ಲವುಗಳನ್ನು ಎರಡು ರೊಟ್ಟಿಯಲ್ಲಿ ಜೋಡಿಸಿಕೊಂಡು ಅಕ್ಕಪಕ್ಕದವರ ಮನೆಗೆ ಕೊಡಲಾಗುತ್ತದೆ. ಅವರು ಇವರ ಮನೆಗೆ, ಇವರು ಅವರ ಮನೆಗೂ ಕೊಡುತ್ತಾರೆ. ಇದೊಂದು ರೀತಿಯಲ್ಲಿ ಅನ್ಯೋನ್ಯಕ್ಕೆ ಕಾರಣವಾಗುತ್ತದೆ.
ಹೀಗೆ ಮನೆ ಮನೆಗೆ ಹಂಚಿಕೆ ಮಾಡಿದ ಮೇಲೆ ಮನೆಯವರೆಲ್ಲರೂ ಕುಳಿತು ಊಟ ಮಾಡುತ್ತಾರೆ. ನಾನಾ ಬಗೆಯ ಪಲ್ಯ ಮತ್ತು ಚಟ್ನಿಯೊಂದಿಗಿನ ಊಟದ ಗಮ್ಮತ್ತು ಸವಿದವನಿಗೇ ಗೊತ್ತು. ಅದು ಯಾವ ಸ್ಟಾರ್ ಹೋಟೆಲ್‌ನಲ್ಲಿಯೂ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಬಗೆ ಬಗೆಯ ಸೊಪ್ಪು, ತರಕಾರಿ ಸೇರಿ ಒಂದು ರೀತಿಯ ಜವಾರಿಯ ವೈಭವಯುತ ಊಟ ಇಲ್ಲಿ ಸಿಗುತ್ತದೆ. ಹೀಗೆ ನಡೆಯುವ ರೊಟ್ಟಿ ಹಬ್ಬದ ವೇಳೆ ಮನೆಯ ಮುಂದೆ ಯಾರೇ ಹಾದು ಹೋದರೂ ಕರೆದು ಊಟ ಕೊಡುವ ಸಂಪ್ರದಾಯವೂ ಇದೆ.
ಹಿನ್ನೆಲೆ: ಈ ಹಬ್ಬದ ಹಿನ್ನೆಲೆ ಏನು ಎಂಬುದು ಬಹುತೇಕರಿಗೆ ತಿಳಿದಿಲ್ಲ, ಹಿಂದಿನಿಂದಲೂ ಆಚರಣೆಯಲ್ಲಿದ್ದು, ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಕೆಲವರು. ಆದರೆ, ಕೆಲ ಹಿರಿಯರು ಹೇಳುವ ಪ್ರಕಾರ, ಪಂಚಮಿ ಮುಗಿಯುತ್ತಿದ್ದಂತೆ ಹೊಲದಲ್ಲಿ ವಿಪರೀತ ಕೆಲಸ ಶುರುವಾಗುತ್ತವೆ. ಹೀಗಾಗಿ, ಈ ರೊಟ್ಟಿ ಹಬ್ಬದ ನೆಪದಲ್ಲಿ ಅಪಾರ ಪ್ರಮಾಣದ ರೊಟ್ಟಿಗಳನ್ನು ಮಾಡಿ ಸಂಗ್ರಹ ಮಾಡಿಕೊಳ್ಳುವುದು. ನಿತ್ಯವೂ ಕೇವಲ ಅನ್ನ ಮತ್ತು ಪಲ್ಯ ಮಾಡಿಕೊಂಡು ಈ ರೊಟ್ಟಿಯನ್ನು ಕಟ್ಟಿಕೊಂಡು ಹೊಲಕ್ಕೆ ಹೋಗಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮಾಡಲಾಗುತ್ತದೆ. ಇದಕ್ಕಾಗಿಯೇ ರೊಟ್ಟಿ ಸಂಗ್ರಹ ಮಾಡುವ ಪದ್ಧತಿ ಉತ್ತರ ಕರ್ನಾಟಕದಲ್ಲಿದೆ ಎಂದು ವಿವರಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.